ಭಾನುವಾರ, ಜೂನ್ 13, 2021
25 °C

ಕರ್ನಾಟಕದ ಸೊಸೆಯಾಗಲಿದ್ದಾರೆ ನಟಿ ಕಾಜಲ್‌ ಅಗರ್‌ವಾಲ್?

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ ಬೆಡಗಿ ಕಾಜಲ್ ಅಗರ್‌ವಾಲ್‌ಗೆ ಈಗ 35ರ ಹರೆಯ. ಹಾಗಾಗಿ, ಆಕೆಯ ಮದುವೆ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಸುದ್ದಿಯಾಗುವುದು ಸರ್ವೇ ಸಾಮಾನ್ಯ. ಕಳೆದ ವರ್ಷ ಆಕೆಯೇ ‘ತಾನು ಶೀಘ್ರವೇ ವಿವಾಹವಾಗುತ್ತೇನೆ’ ಎಂದು ಘೋಷಿಸಿದ್ದು ದೊಡ್ಡ ಸುದ್ದಿಯಾಗಿತ್ತು.

ಕಳೆದ ಜೂನ್‌ ತಿಂಗಳಿನಲ್ಲಿ ಔರಂಗಬಾದ್‌ ಮೂಲದ ಪ್ರಸಿದ್ಧ ಉದ್ಯಮಿಯೊಬ್ಬರ ಜೊತೆಗೆ ಆಕೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ತೆಲುಗು ಚಿತ್ರರಂಗದ ಅಂಗಳದಲ್ಲಿ ಹಬ್ಬಿತ್ತು. ಆದರೆ, ಕಾಜಲ್‌ ಮಾತ್ರ ಈ ಕುರಿತು ಮೌನಕ್ಕೆ ಜಾರಿದ್ದರು. ಮೌನಂ ಸಮ್ಮತಿಯ ಲಕ್ಷಣ ಎಂದು ಅಭಿಮಾನಿಗಳು ಅರ್ಥೈಸಿಕೊಂಡಿದ್ದು ಉಂಟು. ಆದರೆ, ಅಪ್ಪಿತಪ್ಪಿಯೂ ಆಕೆ ಪ್ರತಿಕ್ರಿಯೆ ನೀಡಿರಲಿಲ್ಲ.

ಈಗ ಮತ್ತೆ ಕಾಜಲ್‌ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಆಕೆ ಬೆಂಗಳೂರು ಮೂಲದ ಉದ್ಯಮಿ ಗೌತಮ್‌ ಎಂಬುವರನ್ನು ಮದುವೆಯಾಗಲಿದ್ದಾರೆ. ಇತ್ತೀಚೆಗೆ ಆಕೆ ಮತ್ತು ಗೌತಮ್‌ ಅವರ ನಿಶ್ಚಿತಾರ್ಥವು ಬೆಂಗಳೂರಿನಲ್ಲಿಯೇ ಖಾಸಗಿಯಾಗಿ ನಡೆದಿದೆ. ಉದ್ಯಾನನಗರಿಯಲ್ಲಿಯೇ ಮದುವೆ ನಡೆಯಲಿದೆ ಎಂಬ ಸುದ್ದಿ ಟಾಲಿವುಡ್‌ ಪಡಸಾಲೆಯಿಂದ ಕೇಳಿಬರುತ್ತಿದೆ. ಆಕೆಯ ಸಹೋದರಿ ನಿಶಾ ಅಗರ್‌ವಾಲ್‌ ಮದುವೆಯಾದ ಬಳಿಕ ತಾನು ಹಸೆಮಣೆ ತುಳಿಯಲು ಕಾಜಲ್‌ ನಿರ್ಧರಿಸಿದ್ದಾರೆ ಎಂಬುದು ಹೊಸ ಸುದ್ದಿ.

ಕಾಜಲ್‌ ಕನ್ನಡದಲ್ಲಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ನಟನೆಯ ‘ವೀರ ಮದಕರಿನಾಯಕ’ ಚಿತ್ರದ ಇಬ್ಬರು ನಾಯಕಿಯರ ಪೈಕಿ ಕಾಜಲ್‌ ಕೂಡ ಒಬ್ಬರಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತು. ಇದು ಇನ್ನೂ ಅಧಿಕೃತಗೊಂಡಿಲ್ಲ.

ಬಾಲಿವುಡ್‌ ಮೂಲಕ ಬಣ್ಣದಲೋಕ ಪ್ರವೇಶಿಸಿದ ಆಕೆಯ ಕೈಹಿಡಿದಿದ್ದು ತೆಲುಗು ಚಿತ್ರರಂಗ. ಆಕೆ ನಟಿಸಿದ ಪ್ರಥಮ ಚಿತ್ರ ಹಿಂದಿಯ ‘ಕ್ಯುನ್! ಹೋ ಗಯಾ ನಾ’. ಆದರೆ, ಬೆಳ್ಳಿತೆರೆಯಲ್ಲಿ ಆಕೆಗೆ ಭದ್ರನೆಲೆ ಒದಗಿಸಿದ್ದು ತೆಲುಗಿನ ‘ಲಕ್ಷ್ಮಿ ಕಲ್ಯಾಣಂ’ ಸಿನಿಮಾ. ರಾಮ್‌ ಚರಣ್‌ ಜೊತೆಗೆ ನಟಿಸಿದ ‘ಮಗಧೀರ’ ಚಿತ್ರವು ಆಕೆಯ ವೃತ್ತಿಬದುಕಿಗೆ ಭದ್ರಬುನಾದಿ ಹಾಕಿತು.

ಈಗ ‘ಮೆಗಾಸ್ಟಾರ್‌’ ಚಿರಂಜೀವಿ ನಟನೆಯ ‘ಆಚಾರ್ಯ’ ಚಿತ್ರಕ್ಕೂ ಅವರೇ ನಾಯಕಿ. ಕಾಲಿವುಡ್‌ ನಟಿ ತ್ರಿಷಾ ಈ ಪ್ರಾಜೆಕ್ಟ್‌ನಿಂದ ಹೊರಬಿದ್ದ ಬಳಿಕ ಕಾಜಲ್‌ಗೆ ಇದರಲ್ಲಿ ನಟಿಸುವ ಅವಕಾಶ ಒಲಿದಿದೆ. ಅಪ್ಪ ಮತ್ತು ಮಗನಿಗೆ ನಾಯಕಿಯಾಗಿ ನಟಿಸಿದ ಏಕೈಕ ಹೀರೊಯಿನ್‌ ಎಂಬುದು ಅವರ ಹೆಗ್ಗಳಿಕೆ.

ಕಮಲಹಾಸನ್‌ ಮತ್ತು ಶಂಕರ್‌ ಕಾಂಬಿನೇಷನ್‌ನಡಿ ನಿರ್ಮಾಣವಾಗುತ್ತಿರುವ ‘ಇಂಡಿಯನ್ 2’ ಚಿತ್ರಕ್ಕೂ ಅವರೇ ಹೀರೊಯಿನ್‌. ರಮೇಶ್ ಅರವಿಂದ್‌ ನಿರ್ದೇಶಿಸಿರುವ ತಮಿಳಿನ ‘ಪ್ಯಾರಿಸ್‌ ಪ್ಯಾರಿಸ್’ ಚಿತ್ರದಲ್ಲೂ ನಟಿಸಿದ್ದಾರೆ. ಇದು ಹಿಂದಿಯ ‘ಕ್ವೀನ್‌’ ಚಿತ್ರದ ರಿಮೇಕ್ ಆಗಿದೆ. ಈ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದ್ದು, ಇನ್ನೂ ಅಧಿಕೃತ ದಿನಾಂಕ ಪ್ರಕಟಗೊಂಡಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು