ಶನಿವಾರ, ಸೆಪ್ಟೆಂಬರ್ 26, 2020
25 °C

‘ಕಾಲಚಕ್ರ’ದ ಮಹಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕ ಸುಮಂತ್‌ ಕ್ರಾಂತಿ ಮತ್ತು ನಟ ವಸಿಷ್ಠ ಸಿಂಹ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಕಾಲಚಕ್ರ’ ಸೈಕಲಾಜಿಕಲ್‌ ಕಥಾಹಂದರ ಹೊಂದಿರುವ ಚಿತ್ರ. ಈಗಾಗಲೇ, ಇದರ ಶೂಟಿಂಗ್ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದ ಬಳಿಕ ವಸಿಷ್ಠ ಸಿಂಹ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಎರಡನೇ ಚಿತ್ರ ಇದು.

ಮೂರು ದಶಕದ ಹಿಂದೆ ಕನ್ನಡದಲ್ಲಿ ‘ಕಾಲಚಕ್ರ’ ಹೆಸರಿನ ಸಿನಿಮಾವೊಂದು ತೆರೆಕಂಡಿತ್ತು. ಅಂಬರೀಷ್‌, ದೀಪಿಕಾ ನಟಿಸಿದ್ದ ಈ ಸಿನಿಮಾಕ್ಕೆ ಡಿ. ರಾಜೇಂದ್ರ ಬಾಬು ಆ್ಯಕ್ಷನ್‌ ಕಟ್‌ ಹೇಳಿದ್ದರು. ಆದರೆ, ಹಳೆಯ ಸಿನಿಮಾಕ್ಕೂ ಮತ್ತು ಈ ‘ಕಾಲಚಕ್ರ’ದ ಕಥೆಗೆ ಯಾವುದೇ ಸಂಬಂಧವಿಲ್ಲ ಎನ್ನುವುದು ಚಿತ್ರತಂಡದ ಸ್ಪಷ್ಟನೆ.

‘ಕಾಲಚಕ್ರ’ ಚಿತ್ರದಲ್ಲಿ ವಸಿಷ್ಠ ಸಿಂಹ 25 ವರ್ಷದ ಯುವಕ ಹಾಗೂ 60 ವರ್ಷದ ವೃದ್ಧನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್‌ ಕುಟುಂಬವೊಂದರಲ್ಲಿ ನಡೆಯುವ ಕಥೆ ಇದಾಗಿದೆ. ಕಳೆದ ವರ್ಷದ ಅಂತ್ಯದಲ್ಲಿಯೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿತ್ತು. ರಾಜ್ಯ ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಇದರ ಚಿತ್ರೀಕರಣ ನಡೆದಿದೆ.

ಈ ಚಿತ್ರದ ‘ತರಗೆಲೆ...’ ಹಾಡು ಜುಲೈ 31ರ ವರಮಹಾಲಕ್ಷ್ಮಿ ಹಬ್ಬದಂದು ಸಂಜೆ 6ಗಂಟೆಗೆ ಆನಂದ್ ಆಡಿಯೊದಲ್ಲಿ ಬಿಡುಗಡೆಯಾಗಲಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡಿಗೆ ಗಾಯಕ ಕೈಲಾಶ್‌ ಕೇರ್ ಧ್ವನಿಯಾಗಿದ್ದಾರೆ. ಲಾಕ್‌ಡೌನ್‌ಗೂ ಮೊದಲೇ ನಟ ಸುದೀಪ್‌ ಈ ಚಿತ್ರದ ಟೀಸರ್ ಬಿಡುಗಡೆಗೊಳಿಸಿ ಮೆಚ್ಚುಗೆ ಸೂಚಿಸಿದ್ದರು.

ಕೊಡಗು ಮೂಲದ ರಕ್ಷಾ ಇದರ ನಾಯಕಿ. ಚಿತ್ರದ ಮೂರು ಹಾಡುಗಳಿಗೆ ಗುರುಕಿರಣ್‌ ಸಂಗೀತ ಸಂಯೋಜಿಸಿದ್ದಾರೆ. ರಶ್ಮಿ ಕೆ. ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಎಲ್‌.ಎಂ. ಸೂರಿ ಅವರದು. ಆವಿಕಾ ರಾಠೋಡ್‌, ರಾಜ್‌ ದಿಲೀಪ್‌ ಶೆಟ್ಟಿ, ಸುಚೇಂದ್ರಪ್ರಸಾದ್, ಹನುಮಂತೇಗೌಡ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು