ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಟ ಕಮಲ್ ಹಾಸನ್ ಜನ್ಮದಿನ; ವಿಕ್ರಮ್ ಸಿನಿಮಾದ ಮೊದಲ ನೋಟ ಬಿಡುಗಡೆ

Last Updated 7 ನವೆಂಬರ್ 2021, 8:41 IST
ಅಕ್ಷರ ಗಾತ್ರ

ಬೆಂಗಳೂರು: ನಟ, ರಾಜಕಾರಣಿ ಹೀಗೆ ಬಹುಮುಖ ಪ್ರತಿಭೆಯಾಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಕಮಲ್ ಹಾಸನ್ ಅವರಿಗೆ ಇಂದು (ನ.7)67 ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಶುಭಾಶಯ ತಿಳಿಸಿದ್ದಾರೆ.

ಕಮಲ್ ಹಾಸನ್ ಅವರು ರಾಜಕೀಯದ ನಡುವೆಯೂ ಸದ್ಯ ಮೂರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಕ್ರಮ್, ಇಂಡಿಯನ್ 2 ಹಾಗೂ ದಶಾವತಾರಂ 2.0 ನಿರ್ಮಾಣ ಹಂತದಲ್ಲಿವೆ. ಇದರಲ್ಲಿ ಕಮಲ್ ಹಾಸನ್ ಅವರ ಜನ್ಮದಿನದ ಪ್ರಯುಕ್ತ ವಿಕ್ರಮ್ ಚಿತ್ರತಂಡ ಚಿತ್ರದ ಮೊದಲ ನೋಟ ಎಂದು ಒಂದು ವಿಡಿಯೊ ತುಣಕನ್ನು ಯೂಟ್ಯೂಬ್‌ನಲ್ಲಿ ಹರಿಬಿಟ್ಟಿದೆ.

ಲೋಕೇಶ್ ಕನಗರಾಜ್ ನಿರ್ದೇಶನದವಿಕ್ರಮ್ ಕಮಲ್ ಹಾಸನ್ ಅವರ 232 ನೇ ಸಿನಿಮಾ.ಬಾಲನಟನಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಕಮಲ್‌ ತಮ್ಮ ನಟನೆ, ಬರವಣಿಗೆ, ಗಾಯನ, ನಿರ್ದೇಶನ ಮತ್ತು ನಿರ್ಮಾಣ ಕೌಶಲಗಳಿಂದ ಹೆಸರು ಮಾಡಿದ್ದಾರೆ. ಆ ಕಾರಣಕ್ಕೆ ಅವರು ಯುನಿವರ್ಸಲ್‌ ಸ್ಟಾರ್‌ ಎಂದು ಖ್ಯಾತಿ ಪಡೆದಿದ್ದಾರೆ. ಅವರುಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ.

ತಮ್ಮ ಎಳೆವಯಸ್ಸಿನಲ್ಲೇ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡ ಕಮಲ್‌ ಉತ್ತಮ ಬಾಲನಟ ಪ್ರಶಸ್ತಿ ಗಳಿಸಿದ ಖ್ಯಾತಿ ಹೊಂದಿದವರು. 60 ವರ್ಷಗಳ ತಮ್ಮ ಚಿತ್ರ ಬದುಕಿನಲ್ಲಿ ಕಮಲ್‌ ಹಾಸನ್‌ ನಟನೆಯ ಉನ್ನತಿಗೆ ತಲುಪಿದವರು. ತಮ್ಮ ಜೀವಮಾನದ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ, ಪ್ರಿಕ್ಸ್ ಹೆನ್ರಿ-ಲ್ಯಾಂಗ್ಲೋಯಿಸ್ ಫ್ರೆಂಚ್ ಪುರಸ್ಕಾರ ಸೇರಿದಂತೆ ಹತ್ತು–ಹಲವು ಪುರಸ್ಕಾರಗಳಿಗೆ ಭಾಜನರಾದವರು. ವಿಶಿಷ್ಟ ನಟನೆಗೆ ಪ್ರೇಕ್ಷಕರ ಮನಸೂರೆಗೊಂಡಿರುವ ಕಮಲ್‌ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 17 ದಕ್ಷಿಣ ಭಾರತ ಫಿಲ್ಮ್‌ಫೇರ್ ಪ್ರಶಸ್ತಿ, 3 ನಂದಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವರು.

ಅಪೂರ್ವ ರಾಗಂಗಳ್, ಮೂಂದ್ರಮ್ ಪಿರಾಯ್, ಸಾಗರ ಸಂಗಮಂ, ನಾಯಗನ್, ಥೇವರ್ ಮಗನ್, ಹೇ ರಾಮ್‌, ಇಂಡಿಯನ್‌ ಮತ್ತು ವಿಶ್ವರೂಪಂ ಸೇರಿದಂತೆ ಸುಮಾರು 230 ಕ್ಕೂ ಅಧಿಕ ಚಿತ್ರಗಳಲ್ಲಿ ಕಮಲ್‌ ನಟಿಸಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳ ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಸಿನೆಮಾ ಜಗತ್ತಿನಿಂದ ಇತ್ತೀಚೆಗೆ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಕಮಲ್‌ 'ಮಕ್ಕಳ ನಿಧಿ ಮೈಯಮ್‌‘ ಎನ್ನುವ ಪಕ್ಷವನ್ನು ಕಟ್ಟಿದ್ದಾರೆ. ಆ ಮೂಲಕ ತಮಿಳು ರಾಜಕಾರಣದಲ್ಲೂ ಸಕ್ರಿಯರಾಗಿದ್ದಾರೆ.

ಇಂತಹ ಮೇರು ವ್ಯಕ್ತಿತ್ವಕ್ಕೆ ಕುಟುಂಬ ಸದಸ್ಯರು, ಭಾರತೀಯ ಚಿತ್ರರಂಗದ ಗಣ್ಯರು, ಕೋಟ್ಯಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT