ಸೋಮವಾರ, ಜನವರಿ 18, 2021
27 °C

ಕಂಗನಾ, ಊರ್ಮಿಳಾ 'ಬಂಗಲೆ' ಜಟಾಪಟಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಹೊಸ ಬಂಗಲೆ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ ರನೌತ್‌ ಮಾಡಿರುವ ಆರೋಪಕ್ಕೆ ಶಿವಸೇನಾ ನಾಯಕಿ ಊರ್ಮಿಳಾ ಮಾತೋಂಡ್ಕರ್‌ ತಿರುಗೇಟು ನೀಡಿದ್ದಾರೆ.

ಊರ್ಮಿಳಾ ಅವರು ಹೊಸ ಬಂಗಲೆ ಖರೀದಿಸಿರುವ ವರದಿಯೊಂದರ ಸ್ಕ್ರೀನ್‌ಶಾಟ್‌ ಅನ್ನು ಕಂಗನಾ ರನೌತ್‌ ಟ್ವೀಟಿಸಿದ್ದಾರೆ. 'ಊರ್ಮಿಳಾ ಅವರೇ, ನಾನು ಕಷ್ಟಪಟ್ಟು ದುಡ್ಡು ಸಂಪಾದಿಸಿದ್ದೇನೆ. ಅದರಿಂದ ನಿರ್ಮಿಸಿರುವ ಮನೆಯನ್ನು ಕಾಂಗ್ರೆಸ್‌ ಪಕ್ಷವು ಧ್ವಂಸಗೊಳಿಸಿತು. ನಾನು ಬಿಜೆಪಿಯನ್ನು ಖುಷಿಯಾಗಿಡಲು ಹೋಗಿ ನನ್ನ ಮೇಲೆ 25 ರಿಂದ 30 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇನೆ. ನಿಮ್ಮ ಹಾಗೆ ನಾನೂ ಸಹ ಬುದ್ದಿವಂತೆಯಾಗಿದ್ದರೆ, ಕಾಂಗ್ರೆಸ್‌ ಅನ್ನು ಖುಷಿಯಾಗಿರಿಸಲು ಬಯಸುತ್ತಿದ್ದೆ. ನಾನು ಅದೆಷ್ಟು ಮೂರ್ಖಳು ಅಲ್ಲವೇ?' ಎಂದು ಅದೇ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಊರ್ಮಿಳಾ ಮಾತೋಂಡ್ಕರ್‌, 'ನನ್ನ ಹೊಸ ಮನೆಯೂ ಸಹ ನಾನು ಕಷ್ಟಪಟ್ಟು ಸಂಪಾದಿಸಿದ ದುಡ್ಡಿನಲ್ಲಿ ಖರೀದಿಸಿದ್ದು. ಇದಕ್ಕೆ ನನ್ನ ಬಳಿ ಎಲ್ಲ ರೀತಿಯ ಪುರಾವೆಗಳಿವೆ. ನೀವು ಬೇಕಾದರೆ, ಸ್ಥಳವನ್ನು ನಿಗದಿಪಡಿಸಿ. ಅಲ್ಲಿಗೆ ಬಂದು ನಿಮ್ಮೊಂದಿಗೆ ಚರ್ಚಿಸಿ, ಎಲ್ಲ ಪುರಾವೆಗಳನ್ನು ನಿಮ್ಮ ಮುಂದೆ ಇರಿಸುತ್ತೇನೆ' ಎಂದು ವಿಡಿಯೊ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ, ಕಂಗನಾ ಅವರಿಗೆ ನೀಡಿರುವ ವೈ-ಪ್ಲಸ್‌ ಭದ್ರತೆಯ ಬಗ್ಗೆ ಮಾತನಾಡಿರುವ ಊರ್ಮಿಳಾ,'ಇದು ಕೋಟ್ಯಾಂತರ ಜನರು ಸರ್ಕಾರಕ್ಕೆ ನೀಡಿದ ತೆರಿಗೆ ಹಣ' ಎಂದು ಟೀಕಿಸಿದ್ದಾರೆ.

ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರು ಮಹಾರಾಷ್ಟ್ರ ರಾಜಧಾನಿ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ನೀಡಿದ್ದ ಹೇಳಿಕೆಯನ್ನು ಊರ್ಮಿಳಾ ಅವರು ಈ ಹಿಂದೆ ಖಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, ಊರ್ಮಿಳಾ ಅವರನ್ನು ‘ನೀಲಿಚಿತ್ರ ನಟಿ' ಎಂದು ವ್ಯಂಗ್ಯವಾಡಿದ್ದರು.

2019ರಲ್ಲಿ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉತ್ತರ ಮುಂಬೈ ಕ್ಷೇತ್ರದಿಂದ ಊರ್ಮಿಳಾ ಅವರು ಸ್ಪರ್ಧಿಸಿದ್ದರು. ಆದರೆ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು. ಕಾಂಗ್ರೆಸ್‌ಗೆ ತೊರೆದ ಐದು ತಿಂಗಳ ಬಳಿಕ ಊರ್ಮಿಳಾ ಅವರು ಶಿವಸೇನಾಗೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ ತೊರೆದು ಶಿವಸೇನಾ ಸೇರಿದ ಬಳಿಕ ಟ್ವೀಟ್‌ ಮಾಡಿದ್ದ ಊರ್ಮಿಳಾ, ‘ನಾನು ಜನರ ನಟಿಯಾಗಿದ್ದೆ. ಈಗ ಜನರ ರಾಜಕಾರಣಿಯಾಗಲು ಪರಿಶ್ರಿಮಿಸುತ್ತೇನೆ. ನಾನು ಕೇವಲ ಎ.ಸಿ ಕೊಠಡಿಯಲ್ಲಿ ಕುಳಿತು, ಟ್ವೀಟ್‌ ಮಾಡುವಂತಹ ನಾಯಕಿಯಾಗಲು ಇಚ್ಛಿಸುವುದಿಲ್ಲ. ನನಗೆ ಯಾವ ಕೆಲಸ ಮಾಡಬೇಕು ಮತ್ತು ಆ ಕೆಲಸವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ತಿಳಿದಿದೆ’ ಎಂದು ಕಂಗನಾ ಉದ್ದೇಶಿಸಿ ಹೇಳಿದ್ದರು.

ಸೆಪ್ಟೆಂಬರ್‌ 9ರಂದು ಬಾಂದ್ರಾದಲ್ಲಿರುವ ಕಂಗನಾ ರನೌತ್‌ ಅವರ ಬಂಗಲೆಯ ಒಂದು ಭಾಗವನ್ನು ಬಿಎಂಸಿ ನೆಲಸಮಗೊಳಿಸಿತ್ತು. ಇದರ ವಿರುದ್ಧ ಕಂಗನಾ, ನ್ಯಾಯಾಲಯದ ಮೊರೆಹೋಗಿದ್ದರು. ಬಿಎಂಸಿ ತಮಗೆ ₹2 ಕೋಟಿ ನಷ್ಟಪರಿಹಾರ ಕೊಡಬೇಕು ಮತ್ತು ಬಿಎಂಸಿ ಕ್ರಮ ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು. ಕೂಡಲೇ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಹೈಕೋರ್ಟ್‌ ಅಂದೇ ಆದೇಶಿಸಿತ್ತು.

ಕಾರ್ಯಾಚರಣೆಯಿಂದ ಬಂಗಲೆಗೆ ಆದ ಹಾನಿಯ ಬಗ್ಗೆ ನಟಿ ಮತ್ತು ಪಾಲಿಕೆ ಜೊತೆ ಪರಿಶೀಲಿಸಿ ಪರಿಹಾರದ ಮೊತ್ತವನ್ನು ಅಂದಾಜು ಮಾಡಲು ಮೌಲ್ಯಮಾಪಕರನ್ನು ನೇಮಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. 2021ರ ಮಾರ್ಚ್‌ ತಿಂಗಳೊಳಗೆ ಪರಿಹಾರದ ಬಗ್ಗೆ ಸೂಕ್ತ ಆದೇಶ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು