ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರ ಸಿಕ್ಕಿಲ್ಲವೆಂಬ ಮತ್ಸರವಿಲ್ಲ: ನಟ ಅನಂತ ನಾಗ್

ಹಳೆಯ ದಿನಗಳನ್ನು ನೆನಪಿಸಿಕೊಂಡ *ಭಾರತೀಯ ವಿದ್ಯಾಭವನದಿಂದ ಅಭಿನಂದನೆ
Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಚಲನಚಿತ್ರಗಳಲ್ಲಿ ನಾನು ನಿಮಿತ್ತ ಮಾತ್ರ ಆಗಿದ್ದೇನೆ. ಅಂದುಕೊಂಡಂತೆ ಎಲ್ಲರಿಗೂ ಎಲ್ಲಾ ರೀತಿಯ ಪಾತ್ರಗಳು ಸಿಗುವುದಿಲ್ಲ. ಯಾವುದೇ ಪಾತ್ರದ ಬಗ್ಗೆ ಆಸೆ, ಮತ್ಸರವಿಲ್ಲ’ ಎಂದು ಚಲನಚಿತ್ರ ನಟ ಅನಂತ ನಾಗ್ ತಿಳಿಸಿದರು. 

ಭಾರತೀಯ ವಿದ್ಯಾಭವನ ಮತ್ತು ಸುಚಿತ್ರ ಫಿಲಂ ಸೊಸೈಟಿ ಜಂಟಿಯಾಗಿ ‘ಪ್ರಜಾವಾಣಿ’ ಮಾಧ್ಯಮ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಅನಂತ ನಾಗ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಚಿತ್ರ ಜೀವನವನ್ನು ಸ್ಮರಿಸಿಕೊಂಡರು. 

‘ಚಿತ್ರರಂಗದಲ್ಲಿ ಭಿನ್ನ ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಅಭಿನಯಿಸಿದೆ. ತಮ್ಮ ಶಂಕರ ನಿರ್ದೇಶನದತ್ತ ಮುಖ ಮಾಡಿದರೂ ನನಗೆ ಆ ಕಡೆ ಒಲವಿರಲಿಲ್ಲ. ಎಷ್ಟೋ ನಿರ್ದೇಶಕರಿಗೆ ನಿರ್ಮಾಪಕರೇ ಸಿಗುವುದಿಲ್ಲ. ನಟಾಗಿದ್ದರಿಂದ ನಾನು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಲು ಸಾಧ್ಯವಾಯಿತು. ಅದೇ ನಿರ್ದೇಶಕನಾಗಿದ್ದರೆ 30 ಚಿತ್ರಗಳು ಸಾಧ್ಯವಾಗುತ್ತಿರಲಿಲ್ಲ’ ಎಂದರು. 

‘ಯಾವುದೇ ಸ್ಥಾನ, ಸಂಪಾದನೆಗಾಗಿ ರಾಜಕೀಯಕ್ಕೆ ಹೋಗಿರಲಿಲ್ಲ. ರಾಜಕಾರಣಿ ಆಗುವುದು ಸುಲಭವಲ್ಲ. ಈ ಕ್ಷೇತ್ರದಲ್ಲಿ ಇರುವವರಿಗೆ ವೈಯಕ್ತಿಕ ಬದುಕು ಇರುವುದಿಲ್ಲ. ಉತ್ತಮ ಯೋಜನೆಗಳೂ ಪಂಚರ್ ಆದಾಗ ಬೇಸರವಾಯಿತು. ಭಾರತದಲ್ಲಿ ರಾಜಕಾರಣ ಜಾತಿ ಕೇಂದ್ರೀಕೃತವಾಗಿದೆ. ನಾವು ಅಂದುಕೊಂಡಂತೆ ಬದಲಾವಣೆ ಮಾಡಲೂ ಸಾಧ್ಯವಿಲ್ಲ ಎನ್ನುವುದು ಈ ಕ್ಷೇತ್ರಕ್ಕೆ ಹೋದ ಬಳಿಕ ಅರ್ಥವಾಯಿತು. ಇದರಿಂದ ರಾಜಕೀಯದಿಂದ ಹೊರ ಬಂದೆ’ ಎಂದು ಹೇಳಿದರು. 

ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್, ‘ಅನಂತ ನಾಗ್‌ ಭಾರತ ಮಾತ್ರವಲ್ಲದೆ ಜಗತ್ತಿನ ಶ್ರೇಷ್ಠ ನಟರಲ್ಲಿ ಒಬ್ಬರಾಗಿದ್ದಾರೆ. ಅವರ ‘ಅಂಕುರ್’ ಸಿನಿಮಾ ವೀಕ್ಷಿಸಿದ ಬಳಿಕ ಆಗಲೇ ಅವರ ನಟನೆಗೆ ಮನಸೋತೆ. ಅವರು ಉತ್ತಮ ಬರಹಗಾರರು ಆಗಿದ್ದು, ಪುಸ್ತಕಗಳನ್ನು ಬರೆಯಬೇಕು. ಅವರು ಸಿನಿಮಾ ರಂಗಕ್ಕೆ ಬರದಿದ್ದರೆ ಒಳ್ಳೆಯ ಬರಹಗಾರರಾಗುತ್ತಿದ್ದರು’ ಎಂದು ತಿಳಿಸಿದರು. 

ಚಲನಚಿತ್ರ ನಿರ್ಮಾಪಕ ಎಸ್.ಎ.ಚಿನ್ನೇಗೌಡ, ‘ಕನ್ನಡ ಚಿತ್ರರಂಗಕ್ಕೆ ಅನಂತ ನಾಗ್ ನೀಡಿದ ಕೊಡುಗೆ ಅಪಾರ. ಅವರು ಯಾವುದೇ ಗೌರವಗಳನ್ನು ಬಯಸಿದವರಲ್ಲ’ ಎಂದು ಹೇಳಿ, ಹಳೆಯ ಘಟನೆಗಳನ್ನು ಸ್ಮರಿಸಿಕೊಂಡರು. 

ಭಾರತೀಯ ವಿದ್ಯಾಭವನದ ಮಾಧ್ಯಮ ಭಾರತಿ ನಿರ್ದೇಶಕ ಎನ್.ಎಸ್. ಶ್ರೀಧರ ಮೂರ್ತಿ, ‘ಸ್ಟಾರ್‌ಗಳ ನಡುವೆಯೂ ಅನಂತ ನಾಗ್ ಅವರು ಧೃವತಾರೆಯಾಗಿದ್ದಾರೆ. ಕಲಾತ್ಮಕ ಮತ್ತು ವ್ಯಾಪಾರಿ ಎರಡೂ ಬಗೆಯ ಚಿತ್ರಗಳಿಗೆ ಒಗ್ಗೂವ ಅವರು, ಬಹು ಬೇಡಿಕೆಯ ನಟರಾಗಿದ್ದಾರೆ. ಅವರಿಂದ ಪೋಷಕ ಪಾತ್ರಕ್ಕೂ ಘನತೆ ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವಿಂದ್ರ ಭಟ್ಟ, ಭಾರತೀಯ ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಇದ್ದರು. 

‘ಮನೆಯಲ್ಲಿ ಕಡಿಮೆ ಮಾತು’

‘ಅನಂತ ನಾಗ್ ಅವರು ಹಿತಮಿತವಾಗಿ ಆಹಾರ ಸೇವಿಸಿ ಪ್ರತಿನಿತ್ಯ ಯೋಗ ಮಾಡುತ್ತಾರೆ. ಇದೇ ಅವರ ಆರೋಗ್ಯದ ಗುಟ್ಟು. ಪ್ರತಿನಿತ್ಯ ತಡರಾತ್ರಿಯವರೆಗೂ ಟಿ.ವಿ.ಯಲ್ಲಿ ವಿಶ್ವದ ನ್ಯೂಸ್ ವೀಕ್ಷಿಸುತ್ತಾರೆ. ಅವರಿಗೆ ಯಾರಾದರೂ ವೀಕ್ಷಣೆಗೆ ಅಡ್ಡಿಪಡಿಸಿದರೆ ಸಿಟ್ಟಾಗುತ್ತಾರೆ. ಬಹಳ ಕಡಿಮೆ ಮಾತನಾಡುವ ಅವರು ಏನಾದರೂ ಕೇಳಿದರೆ ಎರಡು ಗಂಟೆಯ ಬಳಿಕ ಉತ್ತರಿಸುತ್ತಾರೆ’ ಎಂದು ಅನಂತ ನಾಗ್ ಅವರ ಪತ್ನಿ ಗಾಯತ್ರಿ ತಿಳಿಸಿದರು.

ಗಾಯತ್ರಿ ಅವರೊಂದಿಗೆ ಭಾರತೀಯ ವಿದ್ಯಾಭವನದ ಜಂಟಿ ಕಾರ್ಯದರ್ಶಿ ನಾಗಲಕ್ಷ್ಮಿ ಕೆ. ರಾವ್ ಸಂವಾದ ನಡೆಸಿದರು.  ಇದಕ್ಕೂ ಮೊದಲು ಅನಂತ ನಾಗ್ ಅವರು ಗುರುಸ್ತುತಿಯನ್ನು ಪ್ರಸ್ತುತ ಪಡಿಸಿ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಗೀತೆಯನ್ನು ಹಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT