ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಾನೆ ಹಾಸಿ ನಾವು ನಿಂತುಕೊಳ್ಳುವ ಸ್ಥಿತಿ ಬಂದಿದೆ: ರಂಗಾಯಣ ರಘು ಬೇಸರ

ಪರಭಾಷಾ ಚಿತ್ರಗಳ ವಿರುದ್ಧ ನಟ ರಂಗಾಯಣ ರಘು ಬೇಸರ
Last Updated 25 ಮಾರ್ಚ್ 2022, 12:30 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗಿನ ಆರ್‌ಆರ್‌ಆರ್‌ ಸಿನಿಮಾಗಾಗಿ ರಾಜ್ಯದ ಕೆಲ ಚಿತ್ರಮಂದಿರಗಳಲ್ಲಿ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಸಿನಿಮಾ ಪ್ರದರ್ಶನ ತೆರವುಗೊಳಿಸಿರುವ ಬಗ್ಗೆ ನಟ ರಂಗಾಯಣ ರಘು ಬೇಸರ ವ್ಯಕ್ತಪಡಿಸಿದ್ದಾರೆ.

ಜೇಮ್ಸ್‌ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡದ ಮನೆಯಲ್ಲಿ ಜಮಖಾನೆ ಹಾಸಿ, ಮಧ್ಯದಲ್ಲಿ ಅವರನ್ನು ಕೂರಿಸಿ ಸುತ್ತಲೂ ನಾವು ನಿಂತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ನಮ್ಮ ಬಾವುಟವೇ ಮುಂದಿರಬೇಕು. ನಮ್ಮನ್ನೇ ಹಿಂದಕ್ಕೆ ಹೋಗಿ ಎಂದರೆ ಏನು ಮಾಡಬೇಕು. ತಮಿಳುನಾಡಿನಲ್ಲಿ, ಆಂಧ್ರದಲ್ಲಿ ಕನ್ನಡ ಸಿನಿಮಾಗಳಿಗೆ ಈ ರೀತಿ ಸಂಭ್ರಮ ಇರುವುದಿಲ್ಲ. ಇಲ್ಲಿ ಬೇರೆ ಭಾಷೆ ಸಿನಿಮಾ ಸಂಭ್ರಮಿಸುತ್ತಾರೆ. ‘ಜೇಮ್ಸ್‌’ ಬಂದು ಒಂದು ವಾರವಾಗಿದೆ ಅಷ್ಟೇ. ಇನ್ನೂ ಸಾವಿರಾರು ಜನರು ಸಿನಿಮಾ ನೋಡುವುದಕ್ಕೆ ಬಾಕಿ ಇದೆ. ಅಪ್ಪು ಅವರ ಸಿನಿಮಾಗಳು ಇನ್ನು ಬರುವುದಿಲ್ಲ. ಇದು ವ್ಯಾಪಾರವಲ್ಲ. ಇದೊಂದು ಭಾವನೆ. ಜೇಮ್ಸ್‌ ಸಿನಿಮಾವನ್ನು ಉಳಿಸಿಕೊಳ್ಳೋಣ. ಕನ್ನಡ ತೇರನ್ನು ದೊಡ್ಮನೆಯೇ ಎಳೆಯಬೇಕು ಅದಕ್ಕಾಗಿ ಮೀಸಲಾದ ದೇಹಗಳು ಅವು. ಉಳಿದ ಕನ್ನಡಿಗರು ಜೊತೆಗಿರುತ್ತಾರೆ’ ಎಂದರು.

ನಟ ಶಿವರಾಜ್‌ಕುಮಾರ್‌ ಅವರು ಮಾತನಾಡಿ, ‘ಜೇಮ್ಸ್‌ ಸಿನಿಮಾ ನೂರು ಕೋಟಿ ರೂಪಾಯಿ ಕ್ಲಬ್‌ ಸೇರಲು ಅಭಿಮಾನಿಗಳೇ ಕಾರಣ. ಚಿತ್ರಮಂದಿರಗಳ ಸಮಸ್ಯೆ ಬರುತ್ತದೆ ಹೋಗುತ್ತದೆ. ಇದೊಂದು ಕುಟುಂಬದ ರೀತಿ. ಇದನ್ನು ಬಗೆಹರಿಸುತ್ತಾ ಮುಂದುವರಿಯಬೇಕು. ಕನ್ನಡ ಸಿನಿಮಾ ಎಂಬ ವಿಚಾರ ಬಂದಾಗ ಕನ್ನಡ ಸಿನಿಮಾಗಳ ಪರವಾಗಿ ನಿಲ್ಲಿ ಎಂದು ಕೇಳಿಕೊಳ್ಳುತ್ತೇನೆ. ನಿರ್ಮಾಪಕರು ಧೈರ್ಯವಾಗಿ ನಿಲ್ಲಬೇಕು. ದೊಡ್ಮನೆ ಅಭಿಮಾನಿಗಳಷ್ಟೇ ಅಲ್ಲದೆ, ದರ್ಶನ್‌, ಸುದೀಪ್‌, ಯಶ್‌, ಗಣೇಶ್‌, ಧ್ರುವ ಹೀಗೆ ಎಲ್ಲ ಕಲಾವಿದರ ಅಭಿಮಾನಿಗಳು ಬಂದು ಜೇಮ್ಸ್‌ ಸಿನಿಮಾ ನೋಡಿದ್ದಾರೆ. ಇದೇ ಅಪ್ಪು ಮೇಲಿದ್ದ ಪ್ರೀತಿ, ವಿಶ್ವಾಸಕ್ಕೆ ಸಾಕ್ಷ್ಯ’ ಎಂದರು.

₹ 100 ಕೋಟಿ ಕ್ಲಬ್‌ಗೆ ಜೇಮ್ಸ್‌: ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿ ನಿರ್ಮಾಪಕ ಕಿಶೋರ್‌ ಇಲ್ಲಿಯವರೆಗೂ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ನಾಲ್ಕೇ ದಿನಗಳಲ್ಲಿ ಸಿನಿಮಾ ₹100 ಕೋಟಿ ಕ್ಲಬ್‌ ಸೇರಿದೆ ಎಂದು ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ಕಲೆಕ್ಷನ್‌ ಕುರಿತು ಅಧಿಕೃತವಾಗಿ ಮಾಹಿತಿ ನೀಡಿರುವ ಕಿಶೋರ್‌, ‘ಜೇಮ್ಸ್‌ ಸಿನಿಮಾ ನಾಲ್ಕು ದಿನಗಳಲ್ಲೇ ₹100 ಕೋಟಿ ಕ್ಲಬ್‌ ಸೇರಲು ವಿಶ್ವದಾದ್ಯಂತ ಇರುವ ಅಭಿಮಾನಿಗಳು ಕಾರಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT