ಬುಧವಾರ, ಸೆಪ್ಟೆಂಬರ್ 29, 2021
20 °C

ಪಾವನಾ ಗೌಡಗೆ ಸಿಕ್ಕಿದೆ ಗ್ಲ್ಯಾಮರಸ್‌ ಪಟ್ಟ!

ಅಭಿಲಾಷ್‌ ಪಿ.ಎಸ್‌ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ಬಳಿಕದ ಮೊದಲ ಚಿತ್ರವಾಗಿ ನಿಮ್ಮ ನಟನೆಯ ‘ಕಲಿವೀರ’ ತೆರೆಗೆ ಬರುತ್ತಿದೆ. ನಿಮ್ಮ ನಿರೀಕ್ಷೆ ಏನಿದೆ?

ಎರಡನೇ ಲಾಕ್‌ಡೌನ್‌ ಬಳಿಕ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ‘ಕಲಿವೀರ’. ಮೊದಲನೇ ಲಾಕ್‌ಡೌನ್‌ ನಂತರ ಸಿನಿಮಾ ಬಿಡುಗಡೆಯಾದಾಗ ಒಳ್ಳೆಯ ಸಿನಿಮಾಗಳನ್ನು ಜನ ಪ್ರೋತ್ಸಾಹಿಸಿದರು. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ, ಹಲವು ಚಿತ್ರಗಳನ್ನು ಬ್ಲಾಕ್‌ಬಸ್ಟರ್‌ ಕೂಡಾ ಮಾಡಿದರು. ಈ ನಿಟ್ಟಿನಲ್ಲಿ ‘ಕಲಿವೀರ’ ಗೆದ್ದೇಗೆಲ್ಲುತ್ತದೆ ಎನ್ನುವ ನಂಬಿಕೆ ನನಗೆ ಇದೆ. ಕಥೆಯಲ್ಲಿ ನಂಬಿಕೆ ಇಟ್ಟಿರುವ ತಂಡವಿದು. ಒಳ್ಳೆಯ ಕೆಲಸ ಮಾಡಿದ್ದೇವೆ ಎನ್ನುವ ನಂಬಿಕೆಯೂ ಇದೆ. ಇದೇ ನಮ್ಮ ಚಿತ್ರತಂಡಕ್ಕೆ ಶಕ್ತಿ. ಪ್ರೇಕ್ಷಕರ ಮೇಲಿನ ನಂಬಿಕೆ ಮೇಲೆಯೇ, ಚಿತ್ರಮಂದಿರಗಳಲ್ಲಿ ಕೇವಲ ಶೇ 50 ಆಸನ ಭರ್ತಿಯ ನಿಯಮ ಇದ್ದರೂ ನಾವು ಚಿತ್ರಮಂದಿರಕ್ಕೆ ಬರುವ ಧೈರ್ಯ ಮಾಡಿದ್ದೇವೆ. ನಾನು ಈ ಚಿತ್ರದಲ್ಲಿ ವಕೀಲೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದ ನಾಯಕ ಆದಿವಾಸಿ ಜನಾಂಗದವನು. ತನ್ನ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ಧ ಸಿಡಿದು ದ್ವೇಷ ತೀರಿಸಿಕೊಳ್ಳುವ ಕಥಾಹಂದರವನ್ನು ಚಿತ್ರ ಹೊಂದಿದ್ದು, ನಾನು ನಾಯಕನ ಬೆಂಬಲಕ್ಕೆ ನಿಲ್ಲುವ ಪಾತ್ರದಲ್ಲಿ ನಟಿಸಿದ್ದೇನೆ. ನಾಯಕನ ಯಶಸ್ಸಿನ ದಾರಿಯಲ್ಲಿ ಸಾಗುವ ವಿಶೇಷ ಪಾತ್ರ ನನ್ನದು. ಇಡೀ ಚಿತ್ರತಂಡ ಉತ್ತರ ಕರ್ನಾಟಕದ ಪ್ರತಿಭೆಗಳಿಂದ ಕೂಡಿದೆ. 

ಶ್ರೀನಗರ ಕಿಟ್ಟಿ ಅವರ ಜೊತೆ ‘ಗೌಳಿ’ಯಲ್ಲಿ ತೆರೆಹಂಚಿಕೊಳ್ಳಲು ಹೇಗಿದೆ ಸಿದ್ಧತೆ?

ಶ್ರೀನಗರ ಕಿಟ್ಟಿ ಅವರ ಜೊತೆ ನಟಿಸಲು ನಾನೂ ಕುತೂಹಲದಿಂದ ಕಾಯುತ್ತಿದ್ದೇನೆ. ನಾನು ಅವರ ಎಲ್ಲ ಸಿನಿಮಾಗಳನ್ನೂ ನೋಡಿದ್ದೇನೆ. ಅವರ ಅಭಿನಯ ಅದ್ಭುತ. ಹೀಗಾಗಿ ಅವರ ಜೊತೆ ತೆರೆಹಂಚಿಕೊಳ್ಳುವ ಖುಷಿ ನನಗಿದೆ. ಆಗಸ್ಟ್‌ ಮಧ್ಯದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಸೋಹನ್‌ ಫಿಲ್ಮ್‌ ಫ್ಯಾಕ್ಟರಿಯು ಇದನ್ನು ನಿರ್ಮಾಣ ಮಾಡುತ್ತಿದೆ. ಸೂರಾ ಎಸ್‌. ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ಬಹಳ ಇಂಟೆನ್ಸ್‌ ಆಗಿರುವ ಕಥಾಹಂದರವನ್ನು ಹೊಂದಿದೆ. ಸಿನಿಮಾ ಹೇಗಿರುತ್ತದೆ ಎನ್ನುವುದನ್ನು ಶ್ರೀನಗರ ಕಿಟ್ಟಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್‌ ನೋಡಿದರೆ ತಿಳಿಯುತ್ತದೆ. ನೈಜ ಘಟನೆಗಳನ್ನಾಧರಿಸಿರುವ ಸಿನಿಮಾ ಇದಾಗಿದ್ದು, ಇದರ ಭಾಗವಾಗಲು ಕಾತುರದಿಂದ ಕಾಯುತ್ತಿದ್ದೇನೆ.

‘ಕನ್ನಡಿಗ’ ಬಹಳ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಅದರಲ್ಲಿನ ನಿಮ್ಮ ಪಾತ್ರ ಹೇಗಿದೆ?

ಈ ಸಿನಿಮಾ ಕೇವಲ ಕಲಾವಿದರಿಗೆ, ನಿರ್ಮಾಣ ಮಾಡಿದ ಸಂಸ್ಥೆಗಷ್ಟೇ ಅಲ್ಲ, ಇಡೀ ಕನ್ನಡಿಗರಿಗೆ ವಿಶೇಷ ಸಿನಿಮಾ ಆಗಿರಲಿದೆ. ಕನ್ನಡ ಭಾಷೆ, ಲಿಪಿಯ ಬಗ್ಗೆ ಹಾಗೂ ಇದನ್ನು ಹೇಗೆ ಉಳಿಸಿಕೊಂಡು ಬಂದಿದ್ದೇವೆ, ಬೆಳೆಸುವುದು ಹೇಗೆ ಎನ್ನುವ ವಿಷಯವನ್ನು ಇಟ್ಟುಕೊಂಡು ನಿರ್ದೇಶಕರಾದ ಬಿ.ಎಂ.ಗಿರಿರಾಜ್‌ ಅವರು ಕಥೆ ಹೆಣೆದಿದ್ದಾರೆ. ರವಿಚಂದ್ರನ್‌ ಅವರು ಲಿಪಿಕಾರನ ಪಾತ್ರಕ್ಕೆ ಬಣ್ಣಹಚ್ಚಿದ್ದು, ನಾನು ಸಂಕಮ್ಮಬ್ಬೆ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ನಮ್ಮ ಭಾಷೆಯ ಮೇಲೆ ಅಷ್ಟೊಂದು ಪ್ರೀತಿ ಇರುವುದರಿಂದ ಭಾಷಾ ಪ್ರೇಮಿಗಳೆಲ್ಲರಿಗೂ ಚಿತ್ರ ಇಷ್ಟವಾಗಲಿದೆ. 1950ರಲ್ಲಿ ನಡೆಯುವ ಕಥೆ ಇದು. ಇಡೀ ಸಿನಿಮಾ ಈ ಕಾಲದ ಮೂಡ್‌ನಲ್ಲೇ ಇರುತ್ತದೆ.

‘6T’ ಚಿತ್ರದಿಂದಾಗಿ ಪಾವನಾ ಗೌಡ ಅವರಿಗೆ ಗ್ಲ್ಯಾಮರಸ್‌ ಬೆಡಗಿ ಪಟ್ಟ ಸಿಕ್ಕಿದೆ ಅಲ್ಲವೇ?

ರವಿಚಂದ್ರನ್‌ ಅವರ ಜೊತೆ ನಟಿಸುವ ಸಂದರ್ಭದಲ್ಲಿ, ಚಿತ್ರೀಕರಣದ ಮೊದಲ ದಿನ ಬಹಳ ಒತ್ತಡದಲ್ಲಿದ್ದೆ. ಆದರೆ ಕ್ರಮೇಣವಾಗಿ ನನಗೆ ಅವರ ಜೊತೆ ಕೆಲಸ ಮಾಡುವುದು ಖುಷಿ ಎನಿಸಿತು. ಅವರು ತಮ್ಮ ಅನುಭವದ ಬುತ್ತಿಯಿಂದ ನಮಗೆ ನಟನೆಯನ್ನು ಹೇಳಿಕೊಡುತ್ತಾ, ನನ್ನಲ್ಲಿದ್ದ ಆತಂಕವನ್ನು ದೂರಗೊಳಿಸಿದರು. ನಾನು ಒಬ್ಬ ಹಿರಿಯ ನಟನ ಜೊತೆ ಇದ್ದೇನೆ ಎನ್ನುವ ಭಾವನೆ ಬರದಂತೆ ಅವರು ನಮ್ಮೊಂದಿಗೆ ಬೆರೆಯುತ್ತಿದ್ದರು. ಚಿತ್ರತಂಡದ ಜೊತೆ ಹರಟೆ ಹೊಡೆಯುತ್ತಿದ್ದರು. ಕಥೆ ಹೇಳುತ್ತಿದ್ದರು. ನಾನು ‘ಕನ್ನಡಿಗ’ ಚಿತ್ರಕ್ಕೂ ಮುನ್ನವೇ ರವಿಚಂದ್ರನ್‌ ಅವರ ‘6T’ ಸಿನಿಮಾಗೆ ಆಯ್ಕೆಯಾಗಿದ್ದೆ. ರವಿಚಂದ್ರನ್‌ ಅವರು ನನ್ನ ಫೋಟೋಶೂಟ್‌ ನೋಡಿ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ‘ಕನ್ನಡಿಗ’ ಸಿನಿಮಾದಲ್ಲೂ ‘ಜಟ್ಟ’ ಸಿನಿಮಾದ ಅದೇ ಭಾಷೆ ಹಾಗೂ ಮೂಡ್‌ ಇದ್ದ ಕಾರಣ ಗಿರಿರಾಜ್‌ ಅವರು ನನ್ನನ್ನು ಆಯ್ಕೆ ಮಾಡಿದರು. ರವಿಚಂದ್ರನ್‌ ಅವರ ಸಿನಿಮಾಗಳಿಗೆ ಆಯ್ಕೆಯಾಗುವುದು ಸುಲಭದ ಮಾತಲ್ಲ. ರವಿಚಂದ್ರನ್‌ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದ ಎಲ್ಲ ನಟಿಯರೂ ತೆರೆಯ ಮೇಲೆ ಬಹಳ ಆಕರ್ಷಕವಾಗಿ, ಗ್ಲ್ಯಾಮರಸ್‌ ಆಗಿ ಕಾಣಿಸಿಕೊಳ್ಳುತ್ತಾರೆ. ‘6T’ ಚಿತ್ರದಲ್ಲೂ ಇದೇ ರೀತಿ ಗ್ಲ್ಯಾಮರ್‌ ಇದೆ. ಪಾವನಾಗೆ ಗ್ಲ್ಯಾಮರ್‌ ಪಾತ್ರ ಹಿಡಿಸುವುದಿಲ್ಲ ಎನ್ನುವ ಭಾವನೆ ಈ ಹಿಂದೆ ಇತ್ತು. ರವಿಚಂದ್ರನ್‌ ಅವರು ನನ್ನನ್ನು ಆಯ್ಕೆ ಮಾಡಿದಾಗ ‘ಗ್ಲ್ಯಾಮರಸ್‌’ ಎನ್ನುವ ಗುರುತು ನನಗೆ ಬಂತು. ಈ ಪಾತ್ರವನ್ನೂ ನಿಭಾಯಿಸುವ ಸಾಮರ್ಥ್ಯ ನನಗಿದೆ ಎನ್ನುವುದು ಇತರರಿಗೆ ತಿಳಿಯಿತು. 

ಮುಂದೆ ಒಪ್ಪಿಕೊಂಡಿರುವ ಸಿನಿಮಾಗಳು?

ಲಾಕ್‌ಡೌನ್‌ ಮುಂಚಿತವಾಗಿ ಒಪ್ಪಿಕೊಂಡ ಆರೇಳು ಸಿನಿಮಾಗಳು ಬಿಡುಗಡೆಗೆ ಬಾಕಿ ಇವೆ. ‘ಗೌಳಿ’ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಮರ್ಡರ್‌ ಮಿಸ್ಟರಿ ಕಥಾಹಂದರ ಹೊಂದಿರುವ ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ‘ಕನ್ನಡಿಗ’ ಚಿತ್ರದ ಚಿತ್ರೀಕರಣವೂ ಮುಗಿದಿದೆ. ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದೇನೆ. ಅದರ ಬಗ್ಗೆ ಮುಂದೆ ತಿಳಿಸುತ್ತೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು