ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಮಂದಿರಗಳಿಗೆ ಕೋವಿಡ್ ಶಾಪ: ಪರದೆಯ ತುಂಬಾ ಕತ್ತಲು

Last Updated 3 ಸೆಪ್ಟೆಂಬರ್ 2021, 3:07 IST
ಅಕ್ಷರ ಗಾತ್ರ

ಹೊಸ ಚಿತ್ರಗಳು ಬಿಡುಗಡೆ ಆಗದಿರುವುದು, ಕೆಲವೆಡೆ ಇನ್ನೂ ವಾರಾಂತ್ಯದ ಲಾಕ್‌ಡೌನ್‌, ರಾತ್ರಿಯ ಪ್ರದರ್ಶನ ರದ್ದು, ಆಸನ ಮಿತಿ, ಪ್ರೇಕ್ಷಕರ ಹಿಂಜರಿಕೆ... ಹೀಗೆ ಬೆಳ್ಳಿಪರದೆಗಳಲ್ಲಿ ಕತ್ತಲು ಆವರಿಸಲು ಹಲವು ಕಾರಣಗಳು. ಹೌದು, ಜೀವನ ಅನ್‌ಲಾಕ್‌ ಆದರೂ ಚಿತ್ರಮಂದಿರಗಳು ಲಾಕ್‌ಡೌನ್‌ ಸ್ಥಿತಿಯಲ್ಲೇ ಇವೆ.

***

‘ಚುರುಮುರಿ, ಕಡಲೆಕಾಳು... ಮಾರಿಕೊಂಡು ಹಾಗೂ ಹೀಗೂ ಬದುಕು ಕಟ್ಟಿಕೊಂಡಿದ್ದೆ. ಲಾಭದಲ್ಲಿದ್ದೆ ಎಂದು ಹೇಳಲಾರೆ. ಆದರೆ ಬದುಕಿಗೇನೂ ಚಿಂತೆ ಇರಲಿಲ್ಲ. ಸಿನಿಮಾ ಪ್ರದರ್ಶನಕ್ಕೆ ಮುನ್ನ ಚಿತ್ರಮಂದಿರದ ಆವರಣದಲ್ಲಿ ಸೇರುವ ಜನರೇ ನಮ್ಮ ಅನ್ನದಾತರು. ಈಗ ಚಿತ್ರಮಂದಿರವೂ ಬಂದ್‌. ಬರುವ ಅರ್ಧಾಂಶದಷ್ಟು ಜನರಲ್ಲಿ ನಮ್ಮ ಗ್ರಾಹಕರೂ ಇಲ್ಲವೇ ಇಲ್ಲ ಎನ್ನಬಹುದು’.

– ಇದು ಬೆಂಗಳೂರಿನ ವಿಜಯನಗರದ ಚಿತ್ರಮಂದಿರದ ಮುಂದೆ ಚುರುಮುರಿ ಮಾರುತ್ತಿದ್ದ ಚಿತ್ರದುರ್ಗದ ಮಂಜುನಾಥ ಮತ್ತು ಅವರ ಸ್ನೇಹಿತರ ಮಾತು.

‘ಅರ್ಧದಷ್ಟು ಆಸನ ಭರ್ತಿಗೆ ಅವಕಾಶ ಎನ್ನುವ ಕಾರಣಕ್ಕೆ ಚಿತ್ರಮಂದಿರದ ಒಳಗಿನ ಸ್ಟಾಲ್‌ಗಳನ್ನು ಕೆಲಕಾಲದ ಮಟ್ಟಿಗೆ ಬಂದ್‌ ಮಾಡಿದ್ದರು. ಹಾಗಾಗಿ ಪ್ರೇಕ್ಷಕರು ನಮ್ಮಿಂದ ತಿನಿಸು ಒಯ್ಯುತ್ತಿದ್ದರು. ಈಗ ಆ ಗ್ರಾಹಕರೂ ಇಲ್ಲವಾಗಿದ್ದಾರೆ’ ಎಂದರು ಮಂಜುನಾಥ.

ಹೌದು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಏಕತೆರೆಯ ಬಹುತೇಕ ಚಿತ್ರಮಂದಿರಗಳು ತೆರೆದಿಲ್ಲ. ಕೆಲವಂತೂ ಶಾಶ್ವತವಾಗಿ ಮುಚ್ಚಿಬಿಟ್ಟಿವೆ. ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ನೀಡದೇ ನಿರ್ಮಾಪಕರೂ ಚಿತ್ರಗಳ ಬಿಡುಗಡೆಗೆ ಮುಂದಾಗುತ್ತಿಲ್ಲ. ಹೀಗಾಗಿ ಚಿತ್ರಮಂದಿರಗಳ ವೈಭವವು ಪೂರ್ಣ ಮಂಕಾಗಿಬಿಟ್ಟಿದೆ. ಕೆಲವು ಚಿತ್ರಮಂದಿರಗಳ ಆವರಣಗಳಂತೂ ಸ್ಮಶಾನ ಸದೃಶವಾಗಿಬಿಟ್ಟಿವೆ. ಪಾರ್ಕಿಂಗ್‌ ಸಿಬ್ಬಂದಿ, ಪಾಪ್‌ಕಾರ್ನ್‌,ಚಹಾ ಮಾರುವವ, ಮ್ಯಾನೇಜರ್‌, ಗೇಟ್‌ಕೀಪರ್‌, ಪ್ರೊಜೆಕ್ಟರ್ ಆಪರೇಟರ್‌... ಎಲ್ಲರೂ ಖಾಲಿ ಕುಳಿತಿದ್ದಾರೆ. ಚಿತ್ರಮಂದಿರದ ಆವರಣದಲ್ಲೊಬ್ಬ ಕಾವಲುಗಾರ ಬಿಟ್ಟರೆ ಅಲ್ಲಿ ಮನುಷ್ಯರ ಸುಳಿವಿಲ್ಲ. ಒಂದು ಚಿತ್ರಮಂದಿರದಲ್ಲಿ ಕನಿಷ್ಠ 6ರಿಂದ 10 ಮಂದಿಯಾದರೂ ಕಾರ್ಮಿಕರು ಇರುತ್ತಿದ್ದರು. ರಾಜ್ಯದಲ್ಲಿ ಚಿತ್ರಮಂದಿರಗಳ ಸಿಬ್ಬಂದಿ 12 ಸಾವಿರದಷ್ಟು ಇದ್ದಾರೆ. ಅವರ ಪೈಕಿ ಸುಮಾರು 5 ಸಾವಿರ ಮಂದಿ ಬೇರೆ ಉದ್ಯೋಗದತ್ತ ಮುಖಮಾಡಿದ್ದಾರೆ. ಅವರಿಗೆ ಇಲ್ಲಿನ ಭವಿಷ್ಯದ ಬಗ್ಗೆ ಆತಂಕವಾಗಿಬಿಟ್ಟಿದೆ ಎಂದರು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಒಕ್ಕೂಟದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌.

ಮಲ್ಟಿಪ್ಲೆಕ್ಸ್‌ಗಳೂ ಸಂಕಷ್ಟದಲ್ಲಿ...

ಚಂದ್ರಶೇಖರ್‌ ವಿಶ್ಲೇಷಿಸುವ ಪ್ರಕಾರ, ‘ಏಕತೆರೆಯ ಚಿತ್ರಮಂದಿರಗಳದ್ದು ಒಂದು ಕಥೆಯಾದರೆ ಮಲ್ಟಿಪ್ಲೆಕ್ಸ್‌ಗಳದ್ದು ಇನ್ನೂ ಕಷ್ಟ. ಈ ಇತಿಮಿತಿಯಿಂದಾಗಿ ಪ್ರದರ್ಶನ ಕಂಪನಿಗಳು ಷೇರುದಾರರನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ. ಅಲ್ಲಿಯೂ ಪ್ರೇಕ್ಷಕರ ಕೊರತೆ ಇದೆ’ ಎಂದರು ಅವರು.

ಸರ್ಕಾರ ಕಲ್ಯಾಣಮಂಟಪ, ಪಾರ್ಟಿ ಹಾಲ್‌, ಗಣೇಶೋತ್ಸವ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಆದರೆ, ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿ ಸಂಬಂಧಿಸಿದಂತೆ ಇನ್ನೂ ಸ್ಪಷ್ಟಪಡಿಸಿಲ್ಲ.

ಈ ಅತಂತ್ರತೆಯ ಕಾರಣಕ್ಕಾಗಿಯೇ ‘ಭಜರಂಗಿ–2’, ‘ಸಲಗ’ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿವೆ. ‘ಕೆಜಿಎಫ್‌ ಚಾಪ್ಟರ್‌ –2’ ಬಿಡುಗಡೆಯನ್ನೂ 2022ಕ್ಕೆ ಮುಂದೂಡಲಾಗಿದೆ. ರಮೇಶ್‌ ಅರವಿಂದ್‌ ಅವರ ‘100’ ಚಿತ್ರವೂ ಬಿಡುಗಡೆ ಮುಂದಕ್ಕೆ ಹೋಗಿದೆ. ಮರುಬಿಡುಗಡೆ ಆದ ‘ಕೃಷ್ಣ ಟಾಕೀಸ್‌’ ಕೂಡಾ ರಾಜ್ಯದ 40 ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿದೆ.

‘ಈ ಬಗ್ಗೆ ಸರ್ಕಾರದ ಜೊತೆ ಚರ್ಚಿಸಬೇಕು. ಮುಖ್ಯಮಂತ್ರಿ ಜೊತೆ ಮಾತುಕತೆಗೆ ಸಮಯ ನಿಗದಿಯೂ ಆಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT