ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಯ ‘ಸಾಗರ’ದೊಳಗೆ...

Last Updated 24 ಜೂನ್ 2021, 19:30 IST
ಅಕ್ಷರ ಗಾತ್ರ

ನಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾದ ಪಾತ್ರ ನಿರ್ವಹಣೆ ದೊಡ್ಡ ಸವಾಲು. ಅಲ್ಲಿ ಏಕತಾನತೆ ಇರುವುದಿಲ್ಲ. ದಿನವೂ ಹೊಸತನ್ನು ಕಲಿಯಬಹುದು... ಹೀಗೆ ತಮ್ಮ ಪಾತ್ರದ ಕುರಿತು ಹೇಳಿಕೊಳ್ಳುವ ನಟ ಸಾಗರ್‌ ಬಿಳಿಗೌಡ ಅವರ ಮಾತಿನಲ್ಲಿ ಖುಷಿ, ವಿಶ್ವಾಸ ಎರಡೂ ಎದ್ದುಕಾಣುತ್ತಿತ್ತು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸತ್ಯ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರಕ್ಕೆ ಸಾಗರ್‌ ಜೀವ ತುಂಬುತ್ತಿದ್ದಾರೆ. ಅಮೆರಿಕದಲ್ಲಿ ಪದವಿ ಮುಗಿಸಿ, ಲಂಡನ್‌ನಲ್ಲಿ ಎಂಬಿಎ ಮಾಡಿರುವ ಇವರಿಗೆ, ಕೈತುಂಬ ಸಂಬಳ ನೀಡುವ ಎಂಎನ್‌ಸಿ ಕಂಪನಿಯ ಕೆಲಸಕ್ಕಿಂತ ಹೆಚ್ಚು ಖುಷಿ ನೀಡುವುದು ಅಭಿನಯ.

ಸಿನಿಮಾದ ಗಂಧಗಾಳಿಯೇ ಇಲ್ಲದ ಕುಟುಂಬದಲ್ಲಿ ಇವರು ಬೆಳೆದವರು. ಅಜ್ಜ ಅಸಿಸ್ಟೆಂಟ್‌ ಕಮಿಷನರ್‌ ಆಗಿದ್ದವರು. ಅಪ್ಪ ಸರ್ಕಾರಿ ಉದ್ಯೋಗದಲ್ಲಿ ಇದ್ದರು. ಹಾಗಾಗಿ ಮನೆಯಲ್ಲಿ ಮಗ ಚೆನ್ನಾಗಿ ಓದಿ, ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಬಯಕೆ ಸಹಜವಾಗಿತ್ತು. ಎಂಬಿಎ ಮುಗಿಸಿ, ಸ್ವಲ್ಪದಿನ ಕೆಲಸ ಮಾಡಿದ ಇವರಿಗೆ ಈ ಕ್ಷೇತ್ರ ನನ್ನದಲ್ಲ ಎಂಬುದು ಅರಿವಾದ ತಕ್ಷಣವೇ ಯಾರ ಮಾತು ಕೇಳದೆ ಬಣ್ಣದ ಲೋಕಕ್ಕೆ ಜಿಗಿದರು. ಆದರೆ, ಈ ದಾರಿ ಅಷ್ಟೊಂದು ಸುಲಭದಲ್ಲಿ ಇವರಿಗೆ ಒಲಿದಿಲ್ಲ. ಸುಮಾರು 130 ಆಡಿಷನ್‌ಗಳನ್ನು ನೀಡಿದ ಬಳಿಕವೇ ಮೊದಲ ಅವಕಾಶವನ್ನು ಗಿಟ್ಟಿಸಿಕೊಂಡರು.

‘ಶಾಲೆ, ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ಆಗಲೇ ನಟನೆಯ ಬಗ್ಗೆ ಆಸಕ್ತಿ ಮೂಡಿತ್ತು. ಆದರೆ, ಅದನ್ನು ನನಸಾಗಿಸಿಕೊಳ್ಳುವ ದಾರಿಯ ಸ್ಪಷ್ಟತೆ ಇರಲಿಲ್ಲ. ವಿದೇಶದಲ್ಲಿ ಶಿಕ್ಷಣ ಮುಗಿಸಿ, ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಈ ವೇಳೆ ನನ್ನ ನಟನೆಯ ಆಸಕ್ತಿಯನ್ನು ಗುರುತಿಸಿದ್ದ ಸ್ನೇಹಿತ ಅಭಿಲಾಷ್‌, ನಾಗಾಭರಣ ಸರ್‌ ಅವರನ್ನು ಪರಿಚಯ ಮಾಡಿಕೊಟ್ಟ. ಬೆನಕ ತಂಡವನ್ನು ಸೇರಿದೆ. ವಾರಾಂತ್ಯದಲ್ಲಿ ಅವರು ನಡೆಸುತ್ತಿದ್ದ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಇದೇ ನನ್ನ ಖುಷಿಯ ಕ್ಷೇತ್ರ ಎಂಬುದು ಆಗಲೇ ನನ್ನ ಅರಿವಿಗೆ ಬಂತು’ ಎಂದು ಅಭಿನಯದಲ್ಲಿ ಹೆಜ್ಜೆಯೂರಿದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ.

ರಂಗಭೂಮಿಯೇ ನನ್ನ ನಟನೆಗೆ ಬುನಾದಿ ಎನ್ನುವ ಅವರು, ಮಾನವೀಯತೆಯೇ ನಾನು ಅಲ್ಲಿ ಕಲಿತ ದೊಡ್ಡ ಪಾಠ. ಯಾರು ಯಾರಿಗಿಂತಲೂ ದೊಡ್ಡವರಲ್ಲ. ಎಲ್ಲರೂ ಕಲಿಯುತ್ತಲೇ ಇರಬೇಕು ಎಂಬುದನ್ನು ‘ಬೆನಕ’ ಕಲಿಸಿತು. ಜೊತೆಗೆ ಶಿಸ್ತು ಮತ್ತು ಬದ್ಧತೆಯನ್ನು ಅಲ್ಲಿ ಕಲಿತೆ ಎಂದು ಅವರು ಸ್ಮರಿಸುತ್ತಾರೆ.

ನೀನಾಸಂ, ಎನ್‌ಎಸ್‌ಡಿಯಲ್ಲಿ ಅಭಿನಯದ ಪಟ್ಟುಗಳನ್ನು ಕಲಿಯುವ ಆಸಕ್ತಿಯೂ ಇವರಿಗಿತ್ತು. ಆದರೆ, ಅಲ್ಲಿ ಅವಕಾಶ ಸಿಗದ ಕಾರಣಕೃಷ್ಣಮೂರ್ತಿ ಕವತ್ತಾರ್‌ ಅವರ ಸಲಹೆಯಂತೆ‌ ವಿದೇಶಕ್ಕೆ ತೆರಳಿ ಅಲ್ಲಿಯೇ ನಟನೆ ಮತ್ತು ಫಿಲ್ಮ್‌ ಮೇಕಿಂಗ್‌ ಕೋರ್ಸ್‌ ಮುಗಿಸಿ ಮತ್ತೆ ತವರಿಗೆ ಮರಳಿದರು.

‘ಅವಕಾಶಗಳಿಗಾಗಿ ಸಾಕಷ್ಟು ಅಲೆದಿದ್ದೇನೆ. ಫೇಸ್‌ಬುಕ್‌ ಗ್ರೂಪ್‌ಗಳ ಮೂಲಕ ಎಲ್ಲೆಲ್ಲಿ ಆಡಿಷನ್‌ ನಡೆಯುತ್ತಿದೆ ಎಂಬುದನ್ನು ತಿಳಿದುಕೊಂಡು, ಪಟ್ಟಿ ಮಾಡುತ್ತಿದ್ದೆ. ಒಂದರ ನಂತರ ಒಂದರಂತೆ ಸುಮಾರು 130 ಆಡಿಷನ್‌ ಕೊಟ್ಟಿರಬಹುದು. ಒಂದೊಂದು ಪಾತ್ರಕ್ಕೆ ಐದಾರು ಬಾರಿ ಆಡಿಷನ್‌ ಕೊಟ್ಟಿದ್ದೇನೆ. ಪ್ರಯತ್ನದ ಫಲವೆಂಬಂತೆ ‘ಕಿನ್ನರಿ’ ಧಾರಾವಾಹಿಗೆ ಆಯ್ಕೆಯಾದೆ’ ಎಂದು ಅವಕಾಶ ಒದಗಿದ ಸಂದರ್ಭವನ್ನು ವಿವರಿಸುತ್ತಾರೆ.

ಸತ್ಯ ಧಾರಾವಾಹಿಯಲ್ಲಿನ ಪಾತ್ರದ ಕುರಿತು ಉತ್ಸಾಹದಿಂದಲೇ ಮಾತಿಗಿಳಿದ ಅವರು, ‘ತುಂಬಾ ವಿಭಿನ್ನವಾದ ಪಾತ್ರ ದೊರಕಿರುವ ಅದೃಷ್ಟ ನನ್ನದು. ಆ ಪಾತ್ರಕ್ಕೆ ಕಡ್ಡಾಯವಾದ ಬೌಂಡರಿ ಇಲ್ಲ. ಅಳು, ಕೋಪ, ನಗು, ಮುಗ್ಧತೆ... ಎಲ್ಲದರ ಹೂರಣವೂ ಇದೆ. ಈ ಪಾತ್ರ ನಿಭಾಯಿಸುವಾಗ ಎಂದಿಗೂ ನನಗೆ ಮಾಡಿದ್ದೇ ಮಾಡುತ್ತಿದ್ದೇನೆ ಎಂದು ಅನಿಸಿದ್ದೇ ಇಲ್ಲ. ನನ್ನ ವ್ಯಕ್ತಿತ್ವಕ್ಕೆ ಸಂಪೂರ್ಣವಾದ ವಿಭಿನ್ನವಾದ ಪಾತ್ರವದು. ಹಾಗಾಗಿ ನಿತ್ಯವೂ ಹೊಸತನ್ನು ಕಲಿಯುವ ಅವಕಾಶ ದೊರಕಿದೆ’ ಎನ್ನುತ್ತಾರೆ.

ನಟನೆಯ ಬಲವನ್ನೇ ನಂಬಿ ಬಣ್ಣದ ಲೋಕಕ್ಕೆ ಅಡಿಯಿರಿಸಿರುವ ಸಾಗರ್‌ ಅವರಿಗೆ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಇರಾದೆ ಇದೆ. ‘ಪಾತ್ರದ ವಿಚಾರದಲ್ಲಿ ಯಾವುದೇ ಗಡಿಯನ್ನು ನಾನು ಹಾಕಿಕೊಂಡಿಲ್ಲ.ಸಿನಿಮಾ, ಧಾರಾವಾಹಿ, ನಾಟಕ, ವೆಬ್‌ಸೀರೀಸ್‌ ಯಾವುದೇ ಇರಬಹುದು. ಮನಸ್ಸಿಗೆ ಹಿಡಿಸುವಂತಹ ಸವಾಲಿನ ಪಾತ್ರವಾಗಿರಬೇಕು’ ಎಂಬುದು ಇವರ ಅಂಬೋಣ.

ನಟನೆಯ ಹೊರತು ವರ್ಕೌಟ್‌ ಮಾಡುವುದೆಂದರೂ ಸಾಗರ್‌ಗೆ ಇಷ್ಟ. ವ್ಯಾಯಾಮ ಮನಸ್ಸು ಮತ್ತು ದೇಹ ಚಟುವಟಿಕೆಯಿಂದಿರಲು ನೆರವಾಗುತ್ತದೆ ಎಂಬ ಸಿದ್ಧಾಂತವನ್ನು ನಂಬಿದವರು ಇವರು. ಪ್ರತಿದಿನ ಎರಡು ಗಂಟೆ ದೇಹದಂಡಿಸುತ್ತಿದ್ದರು. ಆದರೆ, ಭುಜಕ್ಕೆ ಏಟು ಬಿದ್ದಿರುವುದರಿಂದ ದೇಹದಂಡನೆಗೆ ಸದ್ಯ ಬ್ರೇಕ್‌ ನೀಡಿದ್ದಾರೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT