ಭಾನುವಾರ, ಮಾರ್ಚ್ 29, 2020
19 °C
ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಕಲ್ಪಿಸಲು ಕರ್ನಾಟಕ ಸಿನಿಮಾ ನಿರ್ದೇಶಕರ ಸಂಘ ಕ್ರಮ

ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಇರಲಿದೆ ಡೈರೆಕ್ಟರ್ಸ್ ಫಿಲಂ ಬಜಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ‌ನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಸೃಷ್ಟಿಸಲು ಬೆಂಗಳೂರಿನಲ್ಲಿ ಫೆ. 26ರಿಂದ ಆರಂಭವಾಗಲಿರುವ 12ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಡೈರೆಕ್ಟರ್ಸ್ ಫಿಲಂ ಬಜಾರ್‌ ತೆರೆಯಲು ಕರ್ನಾಟಕ ಸಿನಿಮಾ ನಿರ್ದೇಶಕರ ಸಂಘ ನಿರ್ಧರಿಸಿದೆ. ನಿರ್ಮಾಪಕರು ಮತ್ತು ಸಿನಿಮಾ ಖರೀದಿದಾರರನ್ನು ಒಂದೇ ವೇದಿಕೆ ತರುವುದೇ ಈ ಬಜಾರ್‌ನ ಮೂಲ ಉದ್ದೇಶ.

‘ಪ್ರಸ್ತುತ ಕನ್ನಡದಲ್ಲಿ ಅತಿಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಆದರೆ, ನಿರ್ಮಾಪಕರಿಗೆ ಹಣ ವಾ‍ಪಸ್ ಬರುತ್ತಿಲ್ಲ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯಮಟ್ಟದ ವಿವಿಧ ಮಾರುಕಟ್ಟೆ ಸಂಸ್ಥೆಗಳು ಈ ಬಜಾರ್‌ನಲ್ಲಿ ಪಾಲ್ಗೊಳ್ಳಲಿವೆ. ಕನ್ನಡ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು, ವಿತರಕರು, ಪ್ರದರ್ಶಕರು, ಕಲಾವಿದರು, ತಂತ್ರಜ್ಞರು ಮತ್ತು ಸಾಹಿತಿಗಳಿಗೆ ಬಜಾರ್‌ ಮೂಲಕ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ’ ಎಂದು ಸಂಘದ ಅಧ್ಯಕ್ಷ ಕೆ.ಸಿ. ವೆಂಕಟೇಶ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಫಿಲಂ ಬಜಾರ್‌ ಸ್ಥಾ‍ಪನೆ ಹೊಸದೇನಲ್ಲ. ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸದಲ್ಲೂ ಫಿಲಂ ಬಜಾರ್ ಸ್ಥಾಪಿಸಿ ಭಾರತೀಯ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಮಾರುಕಟ್ಟೆ ಕಲ್ಪಿಸುವ ಕೆಲಸ ನಡೆಯುತ್ತಿದೆ. ಅದೇ ಮಾದರಿಯನ್ನು ಇಲ್ಲಿಯೂ ಪಾಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಈಗ ಹೊಸ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕೆಲವು ಚಿತ್ರಗಳಿಗೆ ಅವರೇ ಬಂಡವಾಳವನ್ನೂ ಹೂಡುತ್ತಿದ್ದಾರೆ. ಮತ್ತೊಂದೆಡೆ ಹೊಸ ನಿರ್ಮಾಪಕರಿಗೆ ಇಂಡಸ್ಟ್ರಿ ಬಗ್ಗೆ ಅರಿವು ಇರುವುದಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸುತ್ತಾರೆ. ಸಿನಿಮಾ ನಿರ್ಮಾಣ ಮಾಡುವಾಗ ಪಾಲಿಸಬೇಕಾದ ಮಾನದಂಡಗಳ ಬಗ್ಗೆಯೂ ಸಿನಿಮೋತ್ಸವದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ತಿಳಿವಳಿಕೆ ಮೂಡಿಸಲಾಗುವುದು ಎಂದರು.

ಫೆ. 27ರಿಂದ ಮಾರ್ಚ್‌ 1ರವರೆಗೆ ಕಾರ್ಯಾಗಾರ ನಡೆಯಲಿದೆ. ಮಾರ್ಚ್‌ 2 ಮತ್ತು 3ರಂದು ಸೆರಟಾನ್‌ ಹೋಟೆಲ್‌ನಲ್ಲಿ ಖರೀದಿದಾರರು ಮತ್ತು ನಿರ್ಮಾಪಕರನ್ನು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿಸುವ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ನಿರ್ದೇಶಕರಿಗೂ ಉಚಿತ ಪ್ರವೇಶವಿದೆ. ಅವರ ಸಿನಿಮಾದ ತುಣುಕುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ವಿದೇಶದಿಂದ ಬರುವ ಖರೀದಿದಾರರನ್ನು ಈ ವೇದಿಕೆಗೆ ಕರೆತರುವ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರೊಟ್ಟಿಗೆ ಚರ್ಚಿಸಲಾಗಿದೆ. ಅವರಿಂದಲೂ ಭರವಸೆ ಸಿಕ್ಕಿದೆ ಎಂದರು.

‘ಸ್ಟಾರ್‌ನಟರಿಂದ ಮಾತ್ರವೇ ಚಿತ್ರರಂಗ ನಡೆಯುತ್ತಿಲ್ಲ. ಅವರ ಸಿನಿಮಾಗಳಷ್ಟೇ ಒಳ್ಳೆಯ ಗಳಿಕೆ ಕಾಣುತ್ತಿವೆ. ಶೇಕಡ 90ರಷ್ಟು ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)