ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡರ ಸೈಕಲ್‌ ಸವಾರಿಗೆ ಮುಹೂರ್ತ ಬಂತು!

Last Updated 28 ಮಾರ್ಚ್ 2019, 19:31 IST
ಅಕ್ಷರ ಗಾತ್ರ

‘ಗೌಡ್ರು ಚೈಕಲ್’ ಗಾಂಧಿನಗರದಲ್ಲಿ ನಿಂತು ವರ್ಷ ಕಳೆದಿತ್ತು. ಸೈಕಲ್‌ ಸವಾರಿ ಈಗ ಶುರು, ಆಗ ಶುರು ಎಂಬ ಸುದ್ದಿಗಳು ಬರುತ್ತಿದ್ದವು. ಆದರೂ ಗೌಡ್ರು, ಸೈಕಲ್‌ ಏರಿ ಸವಾರಿ ಹೊರಟಿರಲಿಲ್ಲ.

ಆದರೆ, ಈಗ ಗೌಡ್ರು ಬಂದು ಹೇಳಿದ್ದಾರೆ: ‘ಏಪ್ರಿಲ್‌ 5ರಿಂದ ಸೈಕಲ್ ಸವಾರಿ ಶುರು’ ಎಂದು. ಹೌದು ಪ್ರಶಾಂತ್‌ ಎಳ್ಳಂಪಳ್ಳಿ ನಿರ್ದೇಶನದ ‘ಗೌಡ್ರು ಸೈಕಲ್’ ಸಿನಿಮಾ ಏಪ್ರಿಲ್‌ 5ರಿಂದ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ.

ಈ ವಿಚಾರ ತಿಳಿಸಲು, ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಪ್ರಶಾಂತ್ ಅವರು ತಮ್ಮ ತಂಡದ ಜೊತೆ ಚಿಕ್ಕ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ‘ಹೊಸಬರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಹಾಗೆಯೇ, ಗೌಡರ ಸೈಕಲ್‌ ಸವಾರಿ ಚೆನ್ನಾಗಿ ನಡೆಯಲಿ. ಸೈಕಲ್ ಎಲ್ಲೂ ಪಂಚರ್ ಆಗದಿರಲಿ’ ಎಂದು ಶುಭ ಹಾರೈಸಿದರು.

‘ಪಾತ್ರದ ಬಗ್ಗೆ ಜಾಸ್ತಿ ಏನೂ ಹೇಳುವುದಿಲ್ಲ’ ಎನ್ನುತ್ತ ಮಾತು ಆರಂಭಿಸಿದ ನಾಯಕಿ ಬಿಂಬಶ್ರೀ, ‘25 ದಿನಗಳ ಚಿತ್ರೀಕರಣ ಒಂದೇ ಏಟಿಗೆ ನಡೆದಿದೆ. ಹೆಣ್ಣು ಮಕ್ಕಳು ಹಣಕಾಸಿನ ವಿಚಾರದಲ್ಲಿ ತುಸು ಜುಗ್ಗರಾಗಿರುತ್ತಾರೆ. ಆದರೆ, ನಿರ್ಮಾಪಕರು ಹಾಗೆ ಮಾಡಿಲ್ಲ’ ಎಂದರು. ‘ನನ್ನದು ಇದರಲ್ಲಿ ಮಾಮೂಲಿ ಹಳ್ಳಿ ಹುಡುಗಿಯ ಪಾತ್ರ. ಇದು ಲವ್ ಸ್ಟೋರಿ ಇರುವ ಸಿನಿಮಾ’ ಎಂದರು.

ಚಿತ್ರದ ನಾಯಕ ಶಶಿಕಾಂತ್ ಅವರು ಸಿನಿಮಾ ಕಥೆ ಕೇಳಿದ ನಂತರ, ‘ಇಡೀ ಸಿನಿಮಾ ನಿಂತಿರುವುದೇ ಗೌಡರ ಸೈಕಲ್‌ ಮೇಲೆ. ಇದರಲ್ಲಿ ನಾನು ಹೇಗೆ ನಾಯಕ ಆಗುತ್ತೇನೆ’ ಎಂದು ಪ್ರಶ್ನಿಸಿದ್ದರಂತೆ.

‘ನನ್ನದು ಊರಿನ ಯುವಕನ ಪಾತ್ರ. ಹಳೆಯದಾಯ್ತು ಅಂತ ವಸ್ತುವನ್ನು, ವಯಸ್ಸಾಯ್ತು ಎಂದು ಮನುಷ್ಯರನ್ನು ನಿರ್ಲಕ್ಷ್ಯ ಮಾಡಬಾರದು ಎಂಬ ಸಂದೇಶ ಈ ಸಿನಿಮಾದಲ್ಲಿದೆ. ಕನ್ನಡಪ್ರೇಮ, ದೇಶಪ್ರೇಮದ ಕುರಿತ ಮಾತುಗಳೂ ಇದರಲ್ಲಿವೆ’ ಎಂದರು ಶಶಿಕಾಂತ್.

ಚಿತ್ರ ಶುರುವಾಗೋದು ಎಲ್ಲೋ, ನಿಲ್ಲೋದು ಇನ್ನೆಲೋ. ಹಾಗಿದೆ ಈ ಸಿನಿಮಾ ಸಾಗುವ ಪಥ ಎಂದು ಹೆಮ್ಮೆಯಿಂದ ಹೇಳಿಕೊಂಡರು ಶಶಿಕಾಂತ್.

ಚಿತ್ರದಲ್ಲಿ ಗೌಡರ ಪಾತ್ರ ನಿಭಾಯಿಸಿರುವರು ಕೃಷ್ಣಮೂರ್ತಿ ಕವತ್ತಾರ್. ‘ಈಚೆಗೆ ಸಿನಿಮಾಗಳಲ್ಲಿ ಹೀರೊ ಎಂಬುದು ವ್ಯಕ್ತಿ ಕೇಂದ್ರಿತ ಅಲ್ಲ, ವಸ್ತು ಕೇಂದ್ರಿತ ಆಗಿದೆ. ಒಳ್ಳೆಯ ಕಥೆ ಕೊಟ್ಟರೆ ಜನ ಅಪ್ಪಿಕೊಂಡು ಸಿನಿಮಾ ನೋಡುತ್ತಾರೆ’ ಎಂದರು ಕವತ್ತಾರ್.

ಸಾಯಿಸರ್ವೇಶ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಕೇಂದ್ರಬಿಂದು ಸೈಕಲ್‌ ಮಾಮೂಲಿ ಸೈಕಲ್‌ಗಳಂತೆ ಇರದೆ, ವಿಭಿನ್ನವಾಗಿ ಕಾಣಿಸುತ್ತಿದೆ. ‘ಇಂತಹ ಸೈಕಲ್‌ನ ವಿನ್ಯಾಸ ನಾವೇ ಮಾಡಿದ್ದೇವೆ’ ಎಂದರು ಪ್ರಶಾಂತ್. ಮಂಗಳೂರಿನ ಸವಿತಾ ರಾಜೇಶ್ ಚೌಟ ಚಿತ್ರಕ್ಕೆ ಹಣ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT