ಶನಿವಾರ, ಮೇ 15, 2021
25 °C

ಕರೀನಾ ಜತೆ ನಟಿಸಲು ಕರೀಷ್ಮಾಗೆ ಆಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ನಟಿಯರಾದ ಕರೀಷ್ಮಾ ಮತ್ತು ಕರೀನಾ ಸಹೋದರಿಯರು ಒಂದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಸಾಧ್ಯವಾಗಬೇಕಾದರೆ ಅವರಿಗೆ ಒಳ್ಳೆಯ ಸ್ಕ್ರಿಪ್ಟ್‌ ಸಿಗಬೇಕಂತೆ. ‘ನಾವಿಬ್ಬರು ಒಟ್ಟಿಗೆ ನಟಿಸಲು ಒಳ್ಳೆಯ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೇವೆ’ ಎನ್ನುವ ಸಂಗತಿಯನ್ನು ಕರೀಷ್ಮಾ ಹೊರಹಾಕಿದ್ದಾರೆ.

ಒಂದು ಕಾಲಕ್ಕೆ ಬಾಲಿವುಡ್‌ನ‌ಲ್ಲಿ ಮಿಂಚಿದ್ದ, ಅದರಲ್ಲೂ 90ರ ದಶಕದಲ್ಲಿ ಬಹು ಬೇಡಿಕೆಯಲ್ಲಿದ್ದ ನಟಿ ಕರೀಷ್ಮಾ ಕಪೂರ್‌ ಕೆಲ ಕಾಲ ಚಿತ್ರರಂಗದಿಂದಲೇ ದೂರವಾಗಿದ್ದರು. ಇದೀಗ ಅವರು ಮತ್ತೆ ನಟನೆಗೆ ಮರಳಿ ಬಂದಿದ್ದಾರೆ.

ಎಎಲ್‌ಟಿ ಬಾಲಾಜಿ ಅವರ ವೆಬ್‌ ಸರಣಿ ‘ಮೆಂಟಲ್‌ಹುಡ್‌’ನಲ್ಲಿ ಕರೀಷ್ಮಾ ನಟಿಸುತ್ತಿದ್ದಾರೆ. ‘ಕರೀಷ್ಮಾಗೆ ಸೂಕ್ತವಾಗುವ ಕಥೆ ಬರೆಯುವುದು ಒಂದು ದೊಡ್ಡ ಜವಾಬ್ದಾರಿ’ ಎನ್ನುವ ಮಾತನ್ನು ಬಾಲಾಜಿ ಕೂಡ ಹೇಳಿಕೊಂಡಿದ್ದಾರೆ.

‘ಕರೀನಾ ಜತೆಗೆ ಕೆಲಸ ಮಾಡಲು ನನಗೆ ತುಂಬಾ ಇಷ್ಟ. ನಾವಿಬ್ಬರು ಪರಸ್ಪರರ ಭಾವನೆಗಳನ್ನು ಗೌರವಿಸುತ್ತೇವೆ. ನಿಜವಾಗಿಯೂ ಒಳ್ಳೆಯ ಸ್ಕ್ರಿಪ್ಟ್‌ ಬಂದರೆ, ಇಬ್ಬರಿಗೂ ಸೂಕ್ತವಾಗುವಂತಿದ್ದರೆ ಖಂಡಿತಾ ಇಬ್ಬರು ಒಟ್ಟಿಗೆ ನಟಿಸಲು ಅಭ್ಯಂತರವಿಲ್ಲ’ ಎಂದಿದ್ದಾರೆ ಕರೀಷ್ಮಾ. 

‘ನಾವಿಬ್ಬರು ಒಟ್ಟಿಗೆ ತೆರೆ ಹಂಚಿಕೊಳ್ಳಬಹುದಾದಂತಹ ಪರಿಪೂರ್ಣ ಸ್ಕ್ರಿಪ್ಟ್‌ ಅನ್ನು ಯಾರಾದರೂ ಸಿದ್ಧಪಡಿಸಬಹುದೆಂದು ಭಾವಿಸಿದ್ದೇನೆ. ಇದೊಂದು ದೊಡ್ಡ ಜವಾಬ್ದಾರಿ ಎನ್ನುವುದೂ ಗೊತ್ತಿದೆ. ಸೂಕ್ತ ಸ್ಕ್ರಿಪ್ಟ್‌ ಬಂದರೆ ಖಂಡಿತಾ ನಾವಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಲಿದ್ದೇವೆ’ ಎಂದು ಕರೀಷ್ಮಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

45ರ ಹರೆಯದ ನಟಿ ಕರೀಷ್ಮಾ, ತಾವು ನಟಿಸಲಿರುವ ಮುಂದಿನ ಚಿತ್ರದ ಬಗ್ಗೆ ಈವರೆಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಇವರ ಸಹೋದರಿ ಕರೀನಾ ಕಪೂರ್‌ ಖಾನ್‌ ಸದ್ಯ ಅಮೀರ್‌ ಖಾನ್‌ ನಾಯಕನಾಗಿರುವ ‘ಲಾಲ್‌ ಸಿಂಗ್‌ ಛಡ್ಡಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು