ಸೋಮವಾರ, ಜುಲೈ 26, 2021
27 °C

ಕರ್ಣಂ ಮಲ್ಲೇಶ್ವರಿ ಬಯೋಪಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದ ಇಂದಿನ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಡಿ ಕ್ರೀಡಾಪಟುಗಳು ಸಾಧನೆ ಮಾಡುವುದು ಸುಲಭವಲ್ಲ. ಅಂದಹಾಗೆ ಸಿನಿಮಾ ನಟ, ನಟಿಯರಿಗೆ ಇರುವಷ್ಟೇ ಅಭಿಮಾನಿಗಳು, ತಾರಾಮೌಲ್ಯ ಕ್ರೀಡಾಪಟುಗಳಿಗೂ ಇದೆ.

ಸಮೂಹ ಮಾಧ್ಯಮಗಳಲ್ಲಿ ಕ್ರಿಕೆಟಿಗರಿಗೆ ಸಿಗುವಷ್ಟೇ ಮನ್ನಣೆ ಕಾಮನ್‌ವೆಲ್ತ್‌ ಗೇಮ್ಸ್‌, ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ನಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೂ ಸಿಗುತ್ತದೆ. ಅವರು ಸವೆಸಿದ ಕಷ್ಟಕೋಟಲೆಯ ಹಿಂದೆ ಕಥೆಯೊಂದು ಇರುತ್ತದೆ. ಅದು ಹಲವು ಮಂದಿಗೆ ಪ್ರೇರಣೆಯೂ ಹೌದು. ಹಾಗಾಗಿಯೇ, ದಶಕಗಳ ಕಾಲ ತೆರೆಯ ಮೇಲೆ ಹಾಡು, ನೃತ್ಯ, ಫೈಟಿಂಗ್‌, ಕಾಮಿಡಿ ನೋಡುತ್ತಾ ಬಂದಿರುವ ಸಿನಿಪ್ರೇಕ್ಷಕರಿಗೆ ಬಯೋಪಿಕ್‌ಗಳು ಇಷ್ಟವಾಗುತ್ತಿವೆ ಎಂದರೆ ಅಚ್ಚರಿಪಡಬೇಕಿಲ್ಲ.

‘ಮೇರಿ ಕೋಮ್’, ‘ದಂಗಲ್’, ‘ಭಾಗ್ ಮಿಲ್ಕಾ ಭಾಗ್‌’, ‘ಎಂ.ಎಸ್. ದೋನಿ’, ‘ಸಚಿನ್ ತೆಂಡೂಲ್ಕರ್’, ‘ಅಜರ್’, ‘ಸೂರ್ಮಾ’ ಹೀಗೆ ಕ್ರೀಡಾಪಟುಗಳ ಜೀವನಗಾಥೆಗಳು ಬೆಳ್ಳಿತೆರೆಯನ್ನು ಆವರಿಸಿ ಸಿನಿರಸಿಕರ ಮನ ಸೆಳೆದಿವೆ. ಈಗ ಆಂಧ್ರಪ್ರದೇಶದ ವೇಟ್‌ಲಿಫ್ಟರ್‌ ಕರ್ಣಂ ಮಲ್ಲೇಶ್ವರಿ ಅವರ ಸರದಿ.

ಶ್ರೀಕಾಕುಳಂ ಜಿಲ್ಲೆಯ ಅಮಡಲವಾಲಸದಲ್ಲಿ ಜನಿಸಿದ ಕರ್ಣಂ ಮಲ್ಲೇಶ್ವರಿ ಅವರದು ಭಾರತೀಯ ವೇಟ್‌ಲಿಫ್ಟಿಂಗ್‌ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ವೇಟ್‌ಲಿಫ್ಟಿಂಗ್‌ ಮೂಲಕ ಭಾರತಕ್ಕೆ ಒಲಿಂಪಿಕ್ಸ್‌ ಪದಕ ತಂದುಕೊಟ್ಟ ಹಿರಿಮೆ ಅವರದು. ಈ ಕ್ರೀಡೆಗಾಗಿ ತರಬೇತಿ ಆರಂಭಿಸಿದಾಗ ಅವರಿಗೆ 12ರ ಪ್ರಾಯ. ಸತತ ಪರಿಶ್ರಮದ ಮೂಲಕ ಭಾರತದ ಹೆವಿ ವೇಟ್‌ಲಿಫ್ಟರ್‌ ಆಗಿ ಅವರು ಹೊರಹೊಮ್ಮಿದರು. 1994 ಮತ್ತು 1995ರಲ್ಲಿ 54 ಕೆಜಿ ವಿಭಾಗದಲ್ಲಿ ವರ್ಲ್ಡ್‌ ಚಾಂಪಿಯನ್‌ಶಿಪ್‌ ಗೆದ್ದರು. 1998ರ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು. 2000ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿದರು.

1997ರಲ್ಲಿ ರಾಜೇಶ್‌ ತ್ಯಾಗಿ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರಿಗೆ ಒಬ್ಬ ಪುತ್ರ ಇದ್ದಾನೆ. 2002ರ ಕಾಮನ್‌ವೆಲ್ಸ್‌ ಗೇಮ್ಸ್‌ ಮೂಲಕ ಮತ್ತೆ ಕ್ರೀಡಾ ಕ್ಷೇತ್ರದತ್ತ ಹೊರಳಲು ಅವರು ಸಜ್ಜಾಗಿದ್ದರು. ಆದರೆ, ತಂದೆಯ ಸಾವಿನಿಂದಾಗಿ ಅವರು ಹಿಂದಡಿ ಇಡುವಂತಾಯಿತು. 2004ರ ಒಲಿಂಪಿಕ್ಸ್ ಬಳಿಕ ಅವರು ಕ್ರೀಡೆಯಿಂದ ನಿವೃತ್ತರಾದರು.

ಪ್ರಸ್ತುತ ಬೆಳ್ಳಿಪರದೆ ಮೇಲೆ ಕರ್ಣಂ ಮಲ್ಲೇಶ್ವರಿ ಅವರ ಜೀವನಗಾಥೆ ಹೇಳಲು ನಿರ್ಮಾಪಕ ಕೋನ ವೆಂಕಟ್‌ ಮತ್ತು ಎಂ.ವಿ.ವಿ. ಸತ್ಯನಾರಾಯಣ ನಿರ್ಧರಿಸಿದ್ದಾರೆ. ಈ ಸಿನಿಮಾಕ್ಕೆ ಸಂಜನಾ ರೆಡ್ಡಿ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ.

ನಟಿಸಲ್ಲ ಎಂದ ನಿತ್ಯಾ ಮೆನನ್?

ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾ. ತೆಲುಗು ಸೇರಿದಂತೆ ಎಲ್ಲಾ ಭಾಷೆಯಲ್ಲೂ ಚಿತ್ರ ಬಿಡುಗಡೆ ಮಾಡುವುದು ನಿರ್ಮಾಪಕರ ಉದ್ದೇಶ. ಹಾಗಾಗಿ, ಜನಪ್ರಿಯ ನಟಿಯನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಲು ಚಿತ್ರತಂಡ ನಿರ್ಧರಿಸಿತ್ತಂತೆ.

‘ಮಿಷನ್‌ ಮಂಗಲ್’ ಚಿತ್ರದ ಖ್ಯಾತಿಯ ನಿತ್ಯಾ ಮೆನನ್‌ ಅವರನ್ನು ಕರ್ಣಂ ಮಲ್ಲೇಶ್ವರಿ ಅವರ ಪಾತ್ರದಲ್ಲಿ ನಟಿಸುವಂತೆ ಚಿತ್ರತಂಡ ಕೋರಿತಂತೆ. ಆದರೆ, ನಾನು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ ನಿತ್ಯಾ ಮೆನನ್‌. ಅದಕ್ಕೆ ನಿರ್ದಿಷ್ಟ ಕಾರಣ ಏನೆಂಬುದು ತಿಳಿದುಬಂದಿಲ್ಲ. ಹಾಗಾಗಿ, ಸೂಕ್ತ ನಟಿಯ ಆಯ್ಕೆಗೆ ಕೋನ ಆ್ಯಂಡ್‌ ಕಂಪನಿ ಹುಡುಕಾಟ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು