ಬುಧವಾರ, ಜುಲೈ 28, 2021
23 °C

ಚಿಯಾನ್‌ ವಿಕ್ರಮ್‌ 60ನೇ ಸಿನಿಮಾಕ್ಕೆ ಕಾರ್ತಿಕ್‌ ಸುಬ್ಬರಾಜ್‌ ಆ್ಯಕ್ಷನ್ ಕಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಜನಿಕಾಂತ್‌ ನಟಿಸಿದ್ದ ‘ಪೆಟ್ಟಾ’ ಚಿತ್ರದ ಬಳಿಕ ಕಾರ್ತಿಕ್‌ ಸುಬ್ಬರಾಜ್ ನಿರ್ದೇಶಿಸಿರುವ ಸಿನಿಮಾ ‘ಜಗಮೆ ತಂಧಿರಾಮ್‌’. ಗ್ಯಾಂಗ್‌ಸ್ಟರ್‌ ಸುತ್ತ ಇದರ ಕಥೆ ಹೆಣೆಯಲಾಗಿದೆ. ತಮಿಳಿನ ಬಹುನಿರೀಕ್ಷಿತ ಈ ಚಿತ್ರದ ಬಿಡುಗಡೆಯ ಮೇಲೆ ಕೊರೊನಾದ ಕರಿನೆರಳು ಬಿದ್ದಿದೆ. ಹಾಗಾಗಿ, ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಇದಾದ ಬಳಿಕ ಕಾರ್ತಿಕ್‌ ಸುಬ್ಬರಾಜ್ ಯಾವ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎಂಬ ಕುತೂಹಲ ಕಾಲಿವುಡ್ ಅಂಗಳದಲ್ಲಿತ್ತು. ಮತ್ತೆ ಅವರು ಗ್ಯಾಂಗ್‌ಸ್ಟರ್‌ ಸಿನಿಮಾ ನಿರ್ದೇಶಿಸಲು ಅಣಿಯಾಗಿದ್ದಾರೆ.

ಈ ಹೊಸ ಚಿತ್ರಕ್ಕೆ ಚಿಯಾನ್‌ ವಿಕ್ರಮ್ ಹೀರೊ. ಅಂದಹಾಗೆ ಇದು ವಿಕ್ರಮ್‌ ಅವರ 60ನೇ ಚಿತ್ರವೂ ಹೌದು. ಸೆವೆನ್‌ ಸ್ಕ್ರೀನ್ ಸ್ಟುಡಿಯೊ ಇದಕ್ಕೆ ಬಂಡವಾಳ ಹೂಡಲಿದೆ. ಲಾಕ್‌ಡೌನ್‌ ಮುಗಿದ ಬಳಿಕ ಈ ಬಗ್ಗೆ ಅಧಿಕೃತವಾಗಿ ಘೋಷಿಸಲು ಸಿನಿಮಾ ನಿರ್ಮಾಣ ಸಂಸ್ಥೆ ನಿರ್ಧರಿಸಿದೆ.

ಮೂರು ವರ್ಷದ ಹಿಂದೆ ‘ಇರು ಮುಗನ್‌’ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿಯೇ ಕಾರ್ತಿಕ್‌ ಅವರು ಈ ಸ್ಕ್ರಿಪ್ಟ್‌ ಅನ್ನು ವಿಕ್ರಮ್‌ಗೆ ನಿರೂಪಿಸಿದ್ದರಂತೆ. ಈ ಗ್ಯಾಂಗ್‌ಸ್ಟರ್‌ ಕಥೆಯ ಬಹುತೇಕ ಭಾಗದ ಚಿತ್ರೀಕರಣವನ್ನು ಚೆನ್ನೈನಲ್ಲಿಯೇ ನಡೆಸಲು ನಿರ್ಧರಿಸಿದ್ದಾರೆ. ಇನ್ನೂ ವಿಕ್ರಮ್‌ ಹೊರತಾಗಿ ಉಳಿದ ಪಾತ್ರವರ್ಗದ ಆಯ್ಕೆ ಅಂತಿಮಗೊಂಡಿಲ್ಲ.

ಪ್ರಸ್ತುತ ವಿಕ್ರಮ್‌ ನಟನೆಯ ‘ಕೋಬ್ರಾ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಇದನ್ನು ಆರ್. ಅಜಯ್ ಜ್ಞಾನಮುತ್ತು ನಿರ್ದೇಶಿಸಿದ್ದಾರೆ. ಸೈಂಟಿಪಿಕ್‌ ಥ್ರಿಲ್ಲರ್‌ ಚಿತ್ರ ಇದು. ಇದರಲ್ಲಿ ಇಪ್ಪತ್ತೈದು ವಿಭಿನ್ನ ಲುಕ್‌ನಲ್ಲಿ ವಿಕ್ರಮ್ ಕಾಣಿಸಿಕೊಂಡಿದ್ದಾರಂತೆ.

ಕಾರ್ತಿಕ್‌ ಸುಬ್ಬರಾಜ್‌ ಮತ್ತು ನಟ ಧನುಷ್‌ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಜಗಮೆ ತಂಧಿರಾಮ್‌’ ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿದೆ.

ಇದು ಆ್ಯಕ್ಷನ್‌– ಥ್ರಿಲ್ಲರ್‌ ಸಿನಿಮಾ. ಇತ್ತೀಚೆಗೆ ಪಾಸ್‌ಪೋರ್ಟ್‌ ಸ್ಟಾಂಪ್‌ಗಳನ್ನು ಬಳಸಿ ನಿರ್ಮಿಸಿದ್ದ ಚಿತ್ರದ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಧನುಷ್‌ ವಿರುದ್ಧ ‘ಗೇಮ್ ಆಫ್ ಥ್ರೋನ್ಸ್’ ಇಂಗ್ಲಿಷ್‌ ಚಿತ್ರದ ಖ್ಯಾತಿಯ ಸ್ಕಾಟ್ಲೆಂಡ್‌ ನಟ ಜೇಮ್ಸ್‌ ಕಾಸ್ಮೋ ತೊಡೆ ತೊಟ್ಟಿದ್ದಾರೆ. ಮದ್ರಾಸ್‌ ಮೂಲದ ಗ್ಯಾಂಗ್‌ಸ್ಟರ್‌ ಮತ್ತು ಅಂತರರಾಷ್ಟ್ರೀಯ ಮಾಫಿಯಾದ ನಡುವಿನ ಸಂಘರ್ಷವೇ ಇದರ ಹೂರಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು