ಗುರುವಾರ , ಆಗಸ್ಟ್ 11, 2022
23 °C

ಎರಡು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರವು ಎರಡು ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಸ್ಪರ್ಧಾ ವಿಭಾಗಗಳಿಗೆ ಆಯ್ಕೆಯಾಗಿದೆ.

ಮುಂದಿನ ಜನವರಿ 16ರಂದು ಢಾಕಾದಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಈ ಚಿತ್ರ ಭಾರತವನ್ನು ಪ್ರತಿನಿಧಿಸಲಿದೆ. ಇದೇ ತಿಂಗಳಲ್ಲಿ ರೋಮ್‌ನಲ್ಲಿ ನಡೆಯಲಿರುವ ಏಷ್ಯಾಟಿಕಾ ಚಲನಚಿತ್ರೋತ್ಸವದಲ್ಲಿಯೂ ಈ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.

ಇದು ಜಯಂತ ಕಾಯ್ಕಿಣಿ ಅವರ ‘ಹಾಲಿನ ಮೀಸೆ’ ಕಥೆ ಆಧರಿಸಿದ ಚಿತ್ರ. ಸಂಗಮ ಫಿಲ್ಮ್ಸ್‌ ಬ್ಯಾನರ್‌ ಅಡಿ ಎಸ್‌.ವಿ. ಶಿವಕುಮಾರ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪುರಂದರದಾಸರ ಕೀರ್ತನೆಯೊಂದರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸಾಲನ್ನು ಚಿತ್ರದ ಶೀರ್ಷಿಕೆಗೆ ಬಳಸಲಾಗಿದೆ. ಸುಖ ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಶ್ಶಾಂತಿಗೆ ಎರವಾಗುತ್ತಿದೆಯೇ ಅನ್ನುವ ಆತಂಕ ಚಿತ್ರದ ಸತ್ವ. 60ರ ದಶಕದ ಕನಸು ಮತ್ತು ಈ ಕಾಲದ ಅಂದರೆ ಈ ಹೊಸ ಶತಮಾನದ ತಳಮಳ ಹೀಗೆ ಎರಡು ಕಾಲಘಟ್ಟಗಳಲ್ಲಿ ಈ ಕಥಾನಕ ನಡೆಯುತ್ತದೆ. 

ಉಡುಪಿ, ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. 

2010ರಲ್ಲಿ ಬಸಂತ ಕುಮಾರ್ ಪಾಟೀಲ್ ನಿರ್ಮಿಸಿದ ‘ಕೂರ್ಮಾವತಾರ’ ಚಿತ್ರದ ನಂತರ ಕಾಸರವಳ್ಳಿ ಅವರು ಸಾಕ್ಷ್ಯಚಿತ್ರಗಳ ನಿರ್ಮಾಣದತ್ತ ವಾಲಿದ್ದರು. ಹತ್ತು ವರ್ಷಗಳ ನಂತರ ಪುನಃ ಕಥಾ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಇದು ಅವರ 15ನೇ ಚಿತ್ರ. ಹಾಗೆಯೇ ಯಶಸ್ವಿ ಧಾರಾವಾಹಿಗಳ ನಿರ್ಮಾಪಕ ಎಸ್.ವಿ. ಶಿವಕುಮಾರ್‌ ಅವರು ನಿರ್ಮಿಸುತ್ತಿರುವ 3ನೇ ಚಿತ್ರ ಇದು.

ಚಿತ್ರದ ನಿರ್ಮಾಣ ಕಳೆದ ವರ್ಷವೇ ಪೂರ್ಣಗೊಂಡಿತ್ತು. ಆದರೆ ಕೊರೊನಾ ಕಾರಣಕ್ಕೆ ಬಿಡುಗಡೆ, ಪ್ರದರ್ಶನ ಸಾಧ್ಯವಾಗಿರಲಿಲ್ಲ.  ಎಚ್‌.ಎಂ.ರಾಮಚಂದ್ರ ಛಾಯಾಗ್ರಹಣ, ಎಸ್‌.ಆರ್‌. ರಾಮಕೃಷ್ಣ ಸಂಗೀತವಿದೆ. 

ದೃಶ್ಯ ಕಾಸರಗೋಡು, ಆರಾಧ್ಯ ಕೃಷ್ಣಪ್ರಸಾದ್‌, ಪವಿತ್ರಾ, ಮಾಲತೇಶ್‌, ಚೆಸ್ವಾ, ರಶ್ಮಿ ಪ್ರಸಾದ್‌ ತಾರಾಗಣದಲ್ಲಿದ್ದಾರೆ. ಕೊರೊನಾ ಆತಂಕ ದೂರವಾದ ಬಳಿಕ ಚಿತ್ರವನ್ನು ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು