ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಜಿ.ಎಫ್‌ 2: ಮಾತೃ ಭಾವನೆಯ ‘ಗಗನ ನೀ..ಭುವನ ನೀ...’ ಹಾಡು ಬಿಡುಗಡೆ

Last Updated 6 ಏಪ್ರಿಲ್ 2022, 10:52 IST
ಅಕ್ಷರ ಗಾತ್ರ

ಕೆ.ಜಿ.ಎಫ್‌ ಸಿನಿಮಾದ ಮೊದಲ ಭಾಗದಲ್ಲಿ ಮಾಸ್‌ ಹಾಡುಗಳ ನಡುವೆಯೇ ತಾಯಿ ಪ್ರೀತಿಯ ಭಾವನಾತ್ಮಕ ಸಾಹಿತ್ಯ ಹಾಗೂ ಅದರ ಹಿನ್ನಲೆ ಸಂಗೀತ ಪ್ರೇಕ್ಷಕರ ಎದೆಯೊಳಗೆ ತಂಗಾಳಿಯಂತೆ ಇಳಿದಿತ್ತು. ಈ ಶೈಲಿಯಲ್ಲಿಸಂಗೀತ ನಿರ್ದೇಶಕ ರವಿ ಬಸ್ರೂರು ಹಿಡಿತ ಸಾಧಿಸಿದಂತಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಕೆ.ಜಿ.ಎಫ್‌–2 ಸಿನಿಮಾದ ‘ತೂಫಾನ್‌’ ಹಾಡು ಇದಕ್ಕೆ ಸಾಕ್ಷ್ಯ. ಇದೀಗ ಚಿತ್ರದ ಎರಡನೇ ಲಿರಿಕಲ್‌ ಹಾಡು ‘ಗಗನ ನೀ.. ಭುವನ ನೀ..’ ಬಿಡುಗಡೆಯಾಗಿದ್ದು, ಮತ್ತೊಮ್ಮೆ ಮಾತೃಪ್ರೇಮದಲೆಯಲ್ಲಿ ಪ್ರೇಕ್ಷಕರನ್ನು ಬಸ್ರೂರು ತೇಲಾಡಿಸಿದ್ದಾರೆ.

ಚಂದನವನದ ಬಹುನಿರೀಕ್ಷಿತ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ, ಯಶ್‌ ನಟನೆಯ ಕೆ.ಜಿ.ಎಫ್‌–2 ಏ.14ಕ್ಕೆ ಬಿಡುಗಡೆಯಾಗುತ್ತಿದೆ. ಮೊದಲ ಭಾಗದಲ್ಲಿ ಯಶ್‌ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಅರ್ಚನಾ ಜೋಯಿಸ್‌ ನಟನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಚಿತ್ರದುದ್ದಕ್ಕೂ ಅಲ್ಲಲ್ಲಿ ನಾಯಕನನ್ನು ಕಾಡುವ ತಾಯಿಯ ನೆನಪು, ಆಕೆಯ ಮಾತು, ಆಣೆ ಎಲ್ಲವೂ ಕಥೆಯ ಓಘಕ್ಕೆ ಮತ್ತಷ್ಟು ವೇಗ ನೀಡಿತ್ತು. ಎರಡನೇ ಭಾಗದಲ್ಲೂ ತಾಯಿಯ ನೆನಪು ಭಾವನಾತ್ಮಕ ಘಟನೆಗಳು ನಾಯಕನನ್ನು ಕಾಡಲಿದೆ ಎನ್ನುವುದಕ್ಕೆ ಸಾಕ್ಷ್ಯವೆಂಬಂತೆ ‘ಗಗನ ನೀ’ ಹಾಡು ಮೂಡಿಬಂದಿದೆ. ಇದನ್ನು ‘ಪ್ರತಿ ತಾಯಿಯ ಧ್ವನಿ’ ಎಂದು ಟ್ವೀಟ್‌ ಮೂಲಕ ಬಣ್ಣಿಸಿದ್ದಾರೆ ಯಶ್‌.

ಹಾಡಿನಲ್ಲಿ, ‘ಸಾವಿರ ಪಡೆಗಳು ಸಮರವೆ ಸಾರಲಿ ಕ್ಷಣದಲಿ...ಒಬ್ಬನೇ ಸೈನಿಕ ನಿನಗೆ ನೀ ಆಯುಧ ಜಗದಲಿ’ ಎನ್ನುವ ತಾಯಿಯ ಮಾತು ಚಿತ್ರದಲ್ಲಿ ನಾಯಕನ ಮುಂದಿನ ನಡೆಯನ್ನು ಚಿತ್ರಿಸಿದೆ.

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿರುವ ‘ಕೆ.ಜಿ.ಎಫ್‌–2’ ಚಿತ್ರದಲ್ಲಿ ಬಾಲಿವುಡ್‌ನ ಸಂಜಯ್‌ ದತ್‌, ರವೀನಾ ಠಂಡನ್‌ ಬಣ್ಣಹಚ್ಚಿದ್ದು, ಶ್ರೀನಿಧಿ ಶೆಟ್ಟಿ, ಪ್ರಕಾಶ್‌ ರೈ, ಮಾಳವಿಕಾ ಅವಿನಾಶ್‌, ಬಿ.ಸುರೇಶ್‌, ಯಶ್‌ ಶೆಟ್ಟಿ, ಅರ್ಚನಾ ಜೋಯಿಷ್‌, ಅಯ್ಯಪ್ಪ ಪಿ.ಶರ್ಮ ಇನ್ನಿತರರು ತಾರಾಬಳಗದಲ್ಲಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT