ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೈತ್‌ನಲ್ಲಿ ತಮಿಳು ನಟ ವಿಜಯ್​ ಅಭಿನಯದ ‘ಬೀಸ್ಟ್’ ಸಿನಿಮಾ ನಿಷೇಧ: ವರದಿ

Last Updated 6 ಏಪ್ರಿಲ್ 2022, 7:43 IST
ಅಕ್ಷರ ಗಾತ್ರ

ನವದೆಹಲಿ: ತಮಿಳು ನಟ ದಳಪತಿ ವಿಜಯ್‌ ಅಭಿನಯದ ‘ಬೀಸ್ಟ್‌’ ಸಿನಿಮಾ ಇದೇ ಏಪ್ರಿಲ್ 13ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

ತಮಿಳಿನ ಬಹುನಿರೀಕ್ಷಿತ ‘ಬೀಸ್ಟ್‌’ ಸಿನಿಮಾವನ್ನು ಕುವೈತ್‌ನಲ್ಲಿ ನಿಷೇಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕುವೈತ್​ನ ಮಾಹಿತಿ ಸಚಿವಾಲಯವು ‘ಬೀಸ್ಟ್’ ಬಿಡುಗಡೆಗೆ ಅನುಮತಿ ನಿರಾಕರಿಸಿದೆ. ಆದರೆ, ಇದಕ್ಕೆ ಸೂಕ್ತ ಕಾರಣಗಳನ್ನು ನೀಡಿಲ್ಲ.

ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ಪ್ರಕಾರ, ಬೀಸ್ಟ್ ಚಿತ್ರದಲ್ಲಿ ಪಾಕಿಸ್ತಾನದ ಕುರಿತ ವಿಚಾರಗಳು, ಭಯೋತ್ಪಾದನೆ ಹಾಗೂ ಹಿಂಸೆಯ ವೈಭವೀಕರಣವಿರುವುದರಿಂದ ಅನುಮತಿ ನಿರಾಕರಿಸಲಾಗಿದೆ ಎಂದಿದ್ದಾರೆ.

ಕುವೈತ್​ನಲ್ಲಿ ಬ್ಯಾನ್ ಆದ ಚಿತ್ರಗಳಲ್ಲಿ ‘ಬೀಸ್ಟ್​’ ಮೊದಲನೆಯ ಚಿತ್ರವಲ್ಲ. ಇತ್ತೀಚೆಗೆ ದುಲ್ಕರ್ ಸಲ್ಮಾನ್ ಅಭಿನಯದ ‘ಕುರುಪ್’, ವಿಷ್ಣು ವಿಶಾಲ್ ಅಭಿನಯದ ‘ಎಫ್​ಐಆರ್​’ ಚಿತ್ರಗಳನ್ನು ನಿಷೇಧಿಸಲಾಗಿತ್ತು. ಕುವೈತ್​ ಸೆನ್ಸಾರ್ ಮಂಡಳಿ ಚಿತ್ರಗಳ ವಿಷಯಗಳಲ್ಲಿ ಇತ್ತೀಚೆಗೆ ಕಠಿಣ ನಿಲುವು ತಳೆದಿದೆ ಎಂದೂ ರಮೇಶ್ ಬಾಲಾ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ಬೀಸ್ಟ್​ ಟ್ರೇಲರ್​ನಲ್ಲಿ ಚಿತ್ರಕಥೆ ಕುರಿತು ಮಾಹಿತಿ ಹಂಚಿಕೊಳ್ಳಲಾಗಿತ್ತು. ಭಯೋತ್ಪಾದಕರು ಮಾಲ್‌ವೊಂದನ್ನು ಹೈಜಾಕ್ ಮಾಡುವ ಮೂಲಕ ಅಲ್ಲಿನ ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುತ್ತಾರೆ. ಆಗ ನಾಯಕ (ವಿಜಯ್‌) ಮಾಲ್‌ನ ಒಳಗೇ ಇರುತ್ತಾರೆ. ಆತ ಎಲ್ಲರನ್ನೂ ಹೇಗೆ ಕಾಪಾಡುತ್ತಾನೆ ಎನ್ನುವುದು ಚಿತ್ರದ ಕಥಾಹಂದರವಾಗಿದೆ.

‘ಬೀಸ್ಟ್’ ವಿಜಯ್ ಅವರ 65ನೇ ಚಿತ್ರವಾಗಿದೆ. 2021ರಲ್ಲಿ ಚಿತ್ರದ ಚಿತ್ರೀಕರಣ ಆರಂಭಿಸಲಾಗಿತ್ತು. ಆದರೆ, ಕೋವಿಡ್‌ ಕಾರಣದಿಂದಾಗಿ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು. ಇದೀಗ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ವಿಜಯ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ.

ಸನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್‌ ದಿಲೀಪ್‌ಕುಮಾರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಏಪ್ರಿಲ್ 14ರಂದು ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ –2’ ಬಿಡುಗಡೆಯಾಗಲಿದೆ. ಬಾಕ್ಸ್‌ ಆಫೀಸ್‌ನಲ್ಲಿ ಎರಡೂ ಚಿತ್ರಗಳ ನಡುವೆ ಪೈಪೋಟಿ ನಡೆಯಲಿದೆ ಎಂದು ಸಿನಿಮಾ ತಜ್ಞರು ಹೇಳುತ್ತಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT