ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಘುಪತಿ ಮನೋಗತ

Last Updated 22 ಮೇ 2020, 6:27 IST
ಅಕ್ಷರ ಗಾತ್ರ

ಜೀ ಕನ್ನಡ ವಾಹಿನಿಯ ‘ಜೊತೆ ಜೊತೆಯಲಿ’ಧಾರಾವಾಹಿ ನೋಡಿದವರೆಲ್ಲಾ ‘ಅನು–ಆರ್ಯವರ್ಧನ್’, ‘ಸುಬ್ಬು–ಪುಷ್ಪ’ ದಂಪತಿಗಳನ್ನು ಮೆಚ್ಚಿ ಹೊಗಳಿದರೆ ‘ರಘುಪತಿ’ ಪಾತ್ರಕ್ಕೆ ಸದಾ ಬೈಯುತ್ತಾರೆ, ರಘುಪತಿ ಪಾತ್ರ ತೆರೆ ಮೇಲೆ ಬಂದಾಗ ಮುಖ ಸಿಂಡರಿಸುತ್ತಾರೆ. ತಾನು ಹೇಳಿದ್ದೇ ನಡೆಯಬೇಕು ಎಂದು ವಾದ ಮಾಡುವ ರಘುಪತಿ ಪಾತ್ರಕ್ಕೆ ಬಣ್ಣ ಹಚ್ಚಿದವರು ಹೊನ್ನಾವರ ಮೂಲದ ಕಿರಣ್ ಕುಮಾರ್.

ಶಾಲೆಯಲ್ಲಿ ಓದುತ್ತಿದ್ದಾಗ ಛದ್ಮವೇಷ ಸ್ಪರ್ಧೆಯೊಂದರಲ್ಲಿ ಭಾಗವಹಿಸುವ ಮೂಲಕ ನಟನೆಯ ಕನಸು ಇವರಲ್ಲಿ ಚಿಗುರೊಡೆಯುತ್ತದೆ.ನಂತರ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಹೀಗೆ ನಾಟಕದ ಮೇಲೆ ಒಲವು ಮೂಡಿ ಕಾಲೇಜು ಮುಗಿದ ಮೇಲೆ ನಿನಾಸಂಗೆ ಸೇರುತ್ತಾರೆ. ಅಲ್ಲಿ ಒಂದು ವರ್ಷ ಅವಧಿಯ ಕೋರ್ಸ್ ಮುಗಿಸಿದ ಮೇಲೆ, ಒಂದು ವರ್ಷ ತಿರುಗಾಟದಲ್ಲಿ ತೊಡಗುತ್ತಾರೆ. ನಂತರ 2 ವರ್ಷಗಳ ಕಾಲ ಬ್ಯಾಕ್‌ಸ್ಟೇಜ್‌ನಲ್ಲಿ ಕೆಲಸ ಮಾಡುತ್ತಾರೆ. ನಂತರ ನಾಗಾಭರಣ ನಿರ್ದೇಶನದ ‘ಗೆಳತಿ’ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಹೀಗೆ ಕಿರುತೆರೆ ಅಂಗಳಕ್ಕೆ ಕಾಲಿಡುತ್ತಾರೆ ಕಿರಣ್‌.

ಆಮೇಲೆ ಅನಿವಾರ್ಯ ಕಾರಣಗಳಿಂದ ಊರಿಗೆ ಮರಳುವ ಸಂದರ್ಭ ಬರುತ್ತದೆ. ಊರಿನಲ್ಲಿದ್ದಾಗ ಇವರ ಊರಿಗೆ ‘ಆತ್ಮಸಾಕ್ಷಿ’ ಎಂಬ ಸಿನಿಮಾದ ನಿರ್ದೇಶಕರು ಶೂಟಿಂಗ್ ಲೊಕೇಷನ್‌ ನೋಡಲು ಬಂದಿರುತ್ತಾರೆ. ಅಲ್ಲಿ ಪರಿಚಯದವರೊಬ್ಬರ ಮೂಲಕ ಆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಹೀಗೆ ಸಿನಿಮಾದಲ್ಲೂ ಅಭಿನಯಿಸಲು ಆರಂಭಿಸುತ್ತಾರೆ.

‘ಇದು ಎಂಥ ಲೋಕವಯ್ಯಾ’, ‘ಅಳಗುಳಿಮನೆ‘, ‘ಮದರಂಗಿ’, ‘ಮುಕ್ತ ಮುಕ್ತ’, ‘ಶುಭಮಂಗಳ’, ‘ಜನುಮದ ಜೋಡಿ’, ‘ಅನಾವರಣ’, ‘ಅನುವಾದ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ‘ಜೊತೆ ಜೊತೆಯಲಿ’ ಹಾಗೂ ಸುವರ್ಣ ವಾಹಿನಿಯ ‘ಮತ್ತೆ ವಸಂತ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಕಿರಣ್‌.

‘ಯೂ ಟರ್ನ್‌’, ‘ಕವಲುದಾರಿ’, ‘ಅಮರಾಮತಿ’, ‘ಚೂರಿಕಟ್ಟೆ’, ‘ಜಟ್ಟ’, ‘ಮೈತ್ರಿ’, ‘ತುಂಡ್‌ ಹೈಕಳ ಸಹವಾಸ’, ‘ವಧು ಬೇಕಾಗಿದೆ’ ‘ಅವನೇ ಶ್ರೀಮನ್ನಾರಾಯಣ’ ಸೇರಿದಂತೆ 34ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಜನರನ್ನು ರಂಜಿಸಿದ್ದಾರೆ.

’ಆ್ಯಕ್ಟ್ 1978’, ‘ಯುವರತ್ನ’, ‘ಪುಕ್ಸ್‌ಟ್ಟೆ ಲೈಪು’, ’ಬುದ್ಧಿವಂತ 2’, ‘ಜೋರ್ಡನ್‌’ (ಮಕ್ಕಳ ಸಿನಿಮಾ) ಸದ್ಯಕ್ಕೆ ಇವರ ಕೈಯಲ್ಲಿರುವ ಚಿತ್ರಗಳು.

‘ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ ಮೇಲೆ ಜನ ನನ್ನನ್ನು ಗುರುತಿಸಲು ಆರಂಭಿಸಿದ್ದಾರೆ. ಮೊದಲೆಲ್ಲಾ ಜನ ’’ನಿಮ್ಮನ್ನು ಎಲ್ಲೋ ನೋಡಿದ್ದೇನೆ, ಎಲ್ಲಿ ಎಂದು ಗೊತ್ತಾಗುತ್ತಿಲ್ಲ’’ ಎಂದಾಗ ನಾನು ಸಿನಿಮಾ, ಧಾರಾವಾಹಿ ನಟಿಸುತ್ತೇನೆ ಎಂದು ನನ್ನ ಪರಿಚಯ ಮಾಡಿಕೊಳ್ಳುತ್ತಿದೆ. ಆದರೆ ಈಗ ಜನ ಪಾತ್ರದೊಂದಿಗೆ ನನ್ನನ್ನು ಗುರುತಿಸುತ್ತಾರೆ. ಈ ಬದಲಾವಣೆಗೆ ಜೊತೆ ಜೊತೆಯಲಿ ಧಾರಾವಾಹಿ ಕಾರಣ’ ಎಂದು ಖುಷಿಯಿಂದ ಹೇಳುತ್ತಾರೆ.

ನಟನೆ ಎಂಬುದು ಕೇವಲ ಒಬ್ಬ ವ್ಯಕ್ತಿಯಿಂದಾಗುವುದಲ್ಲ. ನಟನೆ ಎಂದರೆ ನಿರ್ದೇಶಕ, ಸಂಭಾಷಣೆಕಾರ, ಛಾಯಾಗ್ರಾಹಕ ಹಾಗೂ ನಟರ ನಡುವೆ ನಡೆಯುವ ಒಂದು ಕ್ರಿಯೆ. ಈ ನಾಲ್ಕರ ಮಿಶ್ರಣದಲ್ಲಿ ಮೂಡಿ ಬರುವ ಒಂದು ಸುಂದರ ಚಿತ್ರಣ ನಟನೆ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ನಟನೆಯ ಲೋಕದಲ್ಲೇ ಮುಂದುವರಿಯುತ್ತೇನೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT