ಬಹುತೇಕ ಹೊಸಬರಿಂದಲೇ ಕೂಡಿರುವ ‘ಲೈಫ್ ಆಫ್ ಮೃದುಲ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
ಮದನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮದನ್‌ಕುಮಾರ್ ಸಿ., ಚಿತ್ರವನ್ನು ನಿರ್ಮಿಸಿ, ನಾಯಕರಾಗಿ ನಟಿಸಿದ್ದಾರೆ. ಚೇತನ್ ತ್ರಿವೇಣ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
‘ನಾನೊಬ್ಬ ಕೆಟ್ಟ ವಿಮರ್ಶಕ. ಅಷ್ಟು ಸುಲಭವಾಗಿ ಸಿನಿಮಾ ಒಪ್ಪಿಕೊಳ್ಳುವವನಲ್ಲ. ನಿರ್ದೇಶಕರು ಪ್ರಚಾರಕ್ಕೆ ಬೈಟ್ಸ್ ಕೊಡಬೇಕೆಂದು ಕೋರಿಕೊಂಡರು. ಚಿತ್ರ ನೋಡಿದ ಮೇಲೆ ಕೊಡುತ್ತೇನೆಂದು ಷರತ್ತು ಹಾಕಿದ್ದೆ. ನಂತರ ಎರಡು ಗಂಟೆ ಸಿನಿಮಾ ನೋಡಿಸಿಕೊಂಡು ಹೋಯಿತು. ಹೆಣ್ಣಿನ ತೊಳಲಾಟ, ಆಕೆಯನ್ನು ರಕ್ಷಣೆ ಮಾಡುವ ರೀತಿಯನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರವು ಗಾಢವಾಗಿ ಮನಸ್ಸಿಗೆ ತಟ್ಟುತ್ತದೆ’ ಎಂದರು ಹಿರಿಯ ನಟ ದತ್ತಣ್ಣ.
ಕಾಲ್ಪನಿಕ ಡಾರ್ಕ್ ಡ್ರಾಮಾ ಜಾನರ್‌ನ ಕಥೆಯಾಗಿದ್ದು, ಮೃದುಲಾ ಎಂಬುವಳ ಜೀವನದಲ್ಲಿ ಎದುರಾಗುವ ಮೂರು ವಿಭಿನ್ನ ಕಾಲ ಘಟ್ಟಗಳು ಚಿತ್ರದಲ್ಲಿದೆ. ನಾಯಕಿಯಾಗಿ ಪೂಜಾ ಲೋಕಪುರ್ ಅಭಿನಯಿಸಿದ್ದಾರೆ. ರಾಹುಲ್ ಎಸ್.ವಾಸ್ತರ್ ಸಂಗೀತ, ಅಚ್ಚುಸುರೇಶ್ ಛಾಯಾಚಿತ್ರಗ್ರಹಣ, ವಸಂತಕುಮಾರ್ ಕೆ., ಸಂಕಲನವಿದೆ.