ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮಾಡ್ರಿ ಸರಿಹೋಗ್ತಾನೆ

Last Updated 5 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಅಪ್ಪಟ ಉತ್ತರ ಕರ್ನಾಟಕದ ಭಾಷಾ ಸೊಗಡು ಮತ್ತು ಸಂಸ್ಕೃತಿ ಬಿಂಬಿಸುವ ‘ಮದುವೆ ಮಾಡ್ರಿ ಸರಿಹೋಗ್ತಾನೆ’ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ. ನಾಯಕನಾಗಿ ನಟಿಸಿರುವ ಶಿವಚಂದ್ರಕುಮಾರ್‌ಗೆ ಇದು ಚೊಚ್ಚಲ ಸಿನಿಮಾ. ಈ ಚಿತ್ರಕ್ಕೆಗೋಪಿ ಕೆರೂರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಬ್ಯಾಂಕ್‌ ಉದ್ಯೋಗ ತೊರೆದು ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಕಾಲಿಟ್ಟಿರುವ ಶಿವಚಂದ್ರಕುಮಾರ್‌ ತಮ್ಮ ಸಿನಿಮಾ ಬದುಕಿನ ಕನಸುಗಳನ್ನು ‘ಮೆಟ್ರೊ’ ಜತೆಗೆ ಹಂಚಿಕೊಂಡಿದ್ದಾರೆ.

‘2017ರ ಸಾಲಿನ ಮಿಸ್ಟರ್‌ ಇಂಡಿಯಾ ಸ್ಪರ್ಧೆಯ ಅಂತಿಮ 10 ಸ್ಪರ್ಧಿಗಳಲ್ಲಿ ನಾನು ಸಹ ಒಬ್ಬನಾಗಿದ್ದೆ. ಇದರಲ್ಲಿ6ನೇ ಸ್ಥಾನ ಸಿಕ್ಕಿತು. ಆ ಸ್ಪರ್ಧೆಯ ನಂತರ ಬಾಲಿವುಡ್‌ ಮತ್ತು ಟಾಲಿವುಡ್‌ನಲ್ಲಿ ನಟಿಸುವ ಅವಕಾಶಗಳು ಅರಸಿ ಬಂದವು. ಆದರೆ, ಕನ್ನಡಚಿತ್ರರಂಗದಿಂದ ವೃತ್ತಿ ಆರಂಭಿಸುವ ಕನಸು ಕಟ್ಟಿಕೊಂಡು, ‘ಮದುವೆ ಮಾಡ್ರಿ ಸರಿಹೋಗ್ತಾನೆ’ ಚಿತ್ರಕ್ಕೆ ಬಣ್ಣ ಹಚ್ಚಿದ್ದೇನೆ. ನನ್ನ ಸಾಮರ್ಥ್ಯ ಮತ್ತು ಕಲಾಸಕ್ತಿ ತೋರಿಸಲು ಗೋಪಿ ಕೆರೂರ್‌ ವೇದಿಕೆ ಒದಗಿಸಿದ್ದಾರೆ’ ಎನ್ನುತ್ತಾರೆಶಿವಚಂದ್ರಕುಮಾರ್‌.

‘ನನ್ನ ಮೂಲಹೆಸರು ಸಿದ್ಧಾರ್ಥ. ಚಿತ್ರೋದ್ಯಮಕ್ಕೆ ಈ ಹೆಸರು ಸರಿಕಾಣುವುದಿಲ್ಲವೆಂದು ನಿರ್ದೇಶಕರು ನನ್ನ ಹೆಸರು ಬದಲಿಸಿದ್ದಾರೆ. ನನ್ನ ತಂದೆ ಚಿತ್ರದುರ್ಗದ ಚಳ್ಳಕೆರೆಯವರು. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ. ಪಿಇಎಸ್‌ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದು, ಐಸಿಐಸಿಐ ಬ್ಯಾಂಕಿನಲ್ಲಿ ಡೆಪ್ಯುಟಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದೆ.ನಟನಾಗಬೇಕೆಂಬ ಕನಸು ಗಟ್ಟಿಯಾಗಿದ್ದರಿಂದ ವೃತ್ತಿಗೆ ವಿದಾಯ ಹೇಳಿ, ಚಿತ್ರರಂಗದಲ್ಲಿಪೂರ್ಣ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಮಾತು ವಿಸ್ತರಿಸಿದರು.

‘ಸಿದ್ಧಾರ್ಥ ರಿಯಲ್‌ ಎಸ್ಟೇಟ್‌ ಕಂಪನಿ ನಡೆಸುವ ನನ್ನ ತಂದೆಗೆ ನಾನು ಚಿತ್ರರಂಗಕ್ಕೆ ಕಾಲಿಡುವುದು ಇಷ್ಟವಿರಲಿಲ್ಲ. ಮಗ ಇಲ್ಲಿ ಕಷ್ಟಪಡುವುದು ಬೇಡ ಎನ್ನುವುದು ಅವರ ಭಾವನೆಯಾಗಿತ್ತು. ಆದರೆ, ನನ್ನ ತಾಯಿ ನನ್ನಬೆನ್ನಿಗೆ ನಿಂತು, ನನ್ನ ಕನಸು ನನಸಾಗಿಸಿದರು’ ಎಂದರು. ಶಿವಚಂದ್ರಕುಮಾರ್‌ಗೆ ನಾಯಕಿಯಾಗಿ ಆರಾಧ್ಯ ನಟಿಸಿದ್ದಾರೆ. ಅವರಿಗೂ ಇದು ಚೊಚ್ಚಲ ಸಿನಿಮಾ. ಈ ಚಿತ್ರದಲ್ಲಿ ಹನ್ನೊಂದು ಹಾಡುಗಳು ಇದ್ದು, ‘ಪ್ರೇಮಲೋಕ’ ಚಿತ್ರದ ನಂತರ ಮತ್ತೊಂದು ಅದ್ದೂರಿ ಮ್ಯೂಸಿಕಲ್‌ ಸಿನಿಮಾ ಎನಿಸುವ ನಿರೀಕ್ಷೆಯನ್ನು ಈ ಚಿತ್ರ ಹುಟ್ಟು ಹಾಕಿದೆ.

ಚಿತ್ರದಲ್ಲಿ ನಿಭಾಯಿಸಿರುವ ಪಾತ್ರದ ಬಗ್ಗೆ ಮಾತು ಹೊರಳಿಸಿದ ಶಿವ, ‘ಚಿತ್ರದಲ್ಲಿ ನನ್ನದುಉಂಡಾಡಿ ಗುಂಡನ ಪಾತ್ರ. ಮನೆಯ ಜವಾಬ್ದಾರಿ ವಹಿಸಿಕೊಳ್ಳದೆ ಅಡ್ಡಾಡುತ್ತಿರುತ್ತೇನೆ. ಮಗನಿಗೆ ಮದುವೆ ಮಾಡ್ರಿ ಸರಿಹೋಗ್ತಾನೆ ಎಂದು ಹಿತೈಷಿಗಳು ಹೇಳುತ್ತಾರೆ. ಆಗ ನನಗೆ ಒಬ್ಬ ಹುಡುಗಿ ಮೇಲೆ ಪ್ರೀತಿ ಹುಟ್ಟುತ್ತದೆ. ಒಬ್ಬ ಮನುಷ್ಯನಲ್ಲಿ ನಿಜವಾದ ಪ್ರೀತಿ ಅಂಕುರಿಸಿದರೆ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎನ್ನುವುದನ್ನು ಈ ಚಿತ್ರ ಹೇಳಲಿದೆ. ಇದರಲ್ಲಿ ಬರೀ ಲವ್‌, ರೊಮ್ಯಾನ್ಸ್‌ ಮಾತ್ರ ಇಲ್ಲ. ಕುಟುಂಬದಭಾವುಕತೆ, ನಕ್ಕು ನಗಿಸುವ ಹಾಸ್ಯವೂ ಸಮಪ್ರಮಾಣದಲ್ಲಿ ಬೆರೆತಿದೆ’ ಎನ್ನಲು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT