‘ಮಜಿಲಿ’ ಫಸ್ಟ್ ಲುಕ್ ಔಟ್

7

‘ಮಜಿಲಿ’ ಫಸ್ಟ್ ಲುಕ್ ಔಟ್

Published:
Updated:
Prajavani

ಟಾಲಿವುಡ್‌ನ ಮುದ್ದಾದ ಜೋಡಿ ಎಂದು ಗುರುತಿಸಿಕೊಂಡವರು ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ. ಈ ದಂಪತಿ ಮದುವೆಯಾದ ಬಳಿಕ ಮೊದಲ ಬಾರಿ ಸಿನಿಮಾವೊಂದರಲ್ಲಿ ನಾಯಕ– ನಾಯಕಿಯರಾಗಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಹಲವು ದಿನಗಳ ಹಿಂದೆಯೇ ಹೊರಬಿದ್ದಿತ್ತು.

ಆ ಸಿನಿಮಾಕ್ಕೆ ‘ಮಜಿಲಿ’ ಎಂಬ ಹೆಸರನ್ನೂ ಇಡಲಾಗಿದೆ. ಆ ಸಿನಿಮಾದ ಹೊಸ ಸುದ್ದಿಯೊಂದು ಟಾಲಿವುಡ್ ಅಂಗಳಕ್ಕೆ ಬಿದ್ದಿದೆ. ‘ನಿನ್ನು ಕೋರಿ’ ಸಿನಿಮಾ ನಿರ್ದೇಶಕ ಶಿವ ನಿರ್ವಾಣ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಸಿನಿಮಾದ ಫಸ್ಟ್ ಲುಕ್ ಹೊರಬಿದ್ದಿದೆ. ಫಸ್ಟ್‌ ಲುಕ್‌ನಲ್ಲಿ ಸಮಂತಾ ಹಾಗೂ ನಾಗಚೈತನ್ಯ ಮುದ್ದು–ಮುದ್ದಾಗಿ ಕಾಣಿಕೊಂಡಿದ್ದಾರೆ. 

ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ವೈವಾಹಿಕ ಜೀವನದ ಜೊತೆ ಜೊತೆಗೆ ವೃತ್ತಿರಂಗದಲ್ಲೂ ಬ್ಯುಸಿಯಾಗಿದ್ದರು. ‘ಯೇ ಮಾಯಾ ಚೇಸಾವೆ’, ‘ಆಟೊ ನಗರ್‌ ಸೂರ್ಯ’, ‘ಮನಂ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಆದರೆ, ವಿವಾಹದ ಬಳಿಕ ಅವರಿಬ್ಬರೂ ಯಾವ ಸಿನಿಮಾದಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ ‘ಮಜಿಲಿ’ ಸಿನಿಮಾದಲ್ಲಿ ಕ್ಯೂಟ್ ಕಪಲ್ಸ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಫಸ್ಟ್‌ ಲುಕ್‌ಗೆ ಫಿದಾ ಆಗಿರುವ ಅವರಿಬ್ಬರ ಅಭಿಮಾನಿಗಳು ನಾಗ್–ಸಮಂತಾ ಅವರನ್ನು ಹಾಡಿಕೊಂಡಾಡಿದ್ದಾರೆ. ವೈಜಾಗ್‌ ಪ್ರದೇಶದಲ್ಲಿ ನಡೆಯುವ ರೊಮ್ಯಾಂಟಿಕ್ ಪ್ರೇಮಕಥೆ ಇದಾಗಿದ್ದು, ಸಾಧಾರಣ ವ್ಯಕ್ತಿಗಳ ಪಾತ್ರದಲ್ಲಿ ಅವರಿಬ್ಬರು ಕಾಣಿಸಿಕೊಂಡಿದ್ದಾರೆ. ಸಾಹು ಗರಪತಿ ಹಾಗೂ ಹರೀಶ್‌ ಪೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದಿವ್ಯಾಂಶ್‌ ಕೌಶಿಕ್‌ ಅವರು ಈ ಸಿನಿಮಾದ ಮುಖ್ಯಪಾತ್ರವೊಂದರಲ್ಲಿ ಬಣ್ಣ ಹಚ್ಚುತ್ತಿದ್ದು, ರಾವ್ ರಮೇಶ್ ಹಾಗೂ ಪೊಸಾನಿ ರಮೇಶ್ ನಟಿಸುತ್ತಿದ್ದಾರೆ. ಗೋಪಿ ಸುಂದರ್‌ ಅವರ ಸಂಗೀತ ಈ ಚಿತ್ರಕ್ಕಿದೆ.

ನಾಗಚೈತನ್ಯ ಅವರ ‘ಶೈಲಜಾ ರೆಡ್ಡಿ ಅಲ್ಲುಡು’ ಹಾಗೂ ‘ಸವ್ಯಸಾಚಿ’ ಸಿನಿಮಾಗಳು ಈ ಹಿಂದೆ ಬಿಡುಗಡೆಯಾಗಿದ್ದವು. ಆದರೆ, ಆ ಚಿತ್ರಗಳು ಅಷ್ಟೇನೂ ಸದ್ದು ಮಾಡಲಿಲ್ಲ. ಹೀಗಾಗಿ, ಈ ಸಿನಿಮಾದ ಮೂಲಕ ದೊಡ್ಡ ಬ್ರೇಕ್‌ಗಾಗಿ ಅವರು ಕಾಯುತ್ತಿದ್ದಾರೆ. ‘ರಂಗಸ್ಥಲಂ’ ಸಿನಿಮಾದ ಬಳಿಕ ಸಮಂತಾ ಅವರಿಗೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಈಗ ಪತಿಯೊಂದಿಗೆ ಮತ್ತೆ ಮೋಡಿ ಮಾಡಲು ಮುಂದಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !