ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ಭರ್ಜರಿ ಗಳಿಕೆ ‘ಮಾಮಾಕಂ’ ಹೊಸ ದಾಖಲೆ

Last Updated 16 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಮ ಲಯಾಳ ಚಿತ್ರರಂಗದ ಸೂಪರ್‌ಸ್ಟಾರ್ ಮಮ್ಮೂಟ್ಟಿ ಕಳರಿಪಯಟ್ಟು ಯೋಧನಾಗಿ ಕಾಣಿಸಿಕೊಂಡಿರುವ ಐತಿಹಾಸಿಕ ಚಿತ್ರ ‘ಮಾಮಾಕಂ’ ಸಿನಿ ಪ್ರಿಯರ ನಿರೀಕ್ಷೆ ಹುಸಿಗೊಳಿಸಿಲ್ಲ. ‘ಮಾಮಾಕಂ’ ಗುರುವಾರ ವಿಶ್ವದಾದ್ಯಂತ ಏಕಕಾಲಕ್ಕೆ ತೆರೆ ಕಂಡಿದೆ. ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಓಪನಿಂಗ್‌ ಸಿಕ್ಕಿದ್ದು ಬಾಕ್ಸ್‌ ಆಫೀಸ್‌ನಲ್ಲಿ ಎರಡೂ ಕೈಗಳಿಂದ ಹಣ ಬಾಚಿಕೊಳ್ಳುತ್ತಿದೆ.

ಮಲಯಾಳ ಮಾತ್ರವಲ್ಲ ತಮಿಳು, ತೆಲುಗು, ಹಿಂದಿ ಅವತರಣಿಕೆಯಲ್ಲೂ ಬಿಡುಗಡೆಯಾಗಿರುವ ‘ಮಾಮಾಕಂ’ ಮೊದಲ ದಿನವೇ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ವಿಶ್ವದಾದ್ಯಂತ ಮೊದಲ ದಿನದ ಗಳಿಕೆಯೇ ₹23.7 ಕೋಟಿ! ಮಲಯಾಳ ಚಿತ್ರರಂಗದ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆ ಎಂದು ಹೇಳಲಾಗಿದೆ.

ಈ ಹಿಂದೆ ಮಲಯಾಳ ಚಿತ್ರರಂಗದ ಮತ್ತೊಬ್ಬ ಸ್ಟಾರ್‌ ನಟ ಮೋಹನ್ ಲಾಲ್‌ ನಟಿಸಿದ್ದ ಆಕ್ಷನ್‌–ಡ್ರಾಮಾ ಚಿತ್ರ ‘ಒಡಿಯನ್‌’ ತೆರೆಕಂಡ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆ ಹೊಂದಿತ್ತು. ಆ ದಾಖಲೆಯನ್ನು ‘ಮಾಮಾಕಂ’ ಅಳಸಿ ಹಾಕಿದೆ.

ಕೇರಳದ ವಾಣಿಜ್ಯ ನಗರಿ ಕೊಚ್ಚಿಯ ಮಲ್ಟಿಪ್ಲೆಕ್ಸ್‌ಗಳ ಮೊದಲ ದಿನದ ಕಲೆಕ್ಷನ್‌ ಬರೋಬ್ಬರಿ ₹12.60 ಕೋಟಿ! ಇದು ಕೂಡ ಒಂದು ದಾಖಲೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಎಂ. ಪದ್ಮಕುಮಾರ್‌ ನಿರ್ದೇಶನದ ಈ ಐತಿಹಾಸಿಕ ಚಿತ್ರ ತಿರುವನಂತಪುರ ಮಲ್ಟಿಪ್ಲೆಕ್ಸ್‌ಗಳಲ್ಲೂ ₹6.58 ಕೋಟಿ ಗಳಿಸಿದೆ. ಕೊಚ್ಚಿಯ ಸಿಂಗಲ್ ಸ್ಕ್ರೀನ್‌ ಥಿಯೇಟರ್‌ನಲ್ಲಿ ಮೊದಲ ದಿನ ಚಿತ್ರ 16 ಪ್ರದರ್ಶನ ಕಂಡಿದೆ.

ಚಿತ್ರ ಶ್ರೀಮಂತವಾಗಿ ಮೂಡಿಬಂದಿದ್ದು, ಅಚ್ಚುಕಟ್ಟಾಗಿ ಕತೆಯನ್ನುನಿರೂಪಿಸಲಾಗಿದೆ. ಸಿನಿಮಾ ಮೇಕಿಂಗ್‌ ಎಲ್ಲರಿಗೂ ಇಷ್ಟವಾಗಿದೆ. ಮಮ್ಮೂಟ್ಟಿ ಅಭಿನಯ ಚಿತ್ರದ ಹೈಲೈಟ್‌.ಕಳರಿಪಯಟ್ಟು ಯೋಧನ ಪಾತ್ರದಲ್ಲಿ ಮಿಂಚಿರುವ ಮಮ್ಮೂಟ್ಟಿಗೆ ಸವಾಲು ಒಡ್ಡುವಂತೆ ಉನ್ನಿ ಮುಕುಂದನ್‌, ಮಾಸ್ಟರ್‌ ಅಚ್ಯುತನ್‌ ನಟಿಸಿದ್ದಾರೆ. ಪ್ರಾಚಿ ತೆಹ್ಲಾನ್‌, ಅನು ಸಿತಾರಾ, ಕನಿಹಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಂಜೀವ್‌ ಪಿಳೈ ಸ್ಕ್ರಿಪ್ಟ್‌, ನಟ–ಲೇಖಕ ಶಂಕರ್‌ ರಾಮಕೃಷ್ಣನ್‌ ಸಂಭಾಷಣೆ ಅದ್ಭುತವಾಗಿ ಮೂಡಿ ಬಂದಿದೆ.

ಮಮ್ಮೂಟ್ಟಿ ಜೀವನದ ಬಿಗ್‌ ಬಜೆಟ್‌ ಚಿತ್ರ

₹ 45 ಕೋಟಿ ವೆಚ್ಚದಲ್ಲಿ ಸಿದ್ಧವಾಗಿರುವ ‘ಮಾಮಾಕಂ’ ಬಿಗ್‌ ಬಜೆಟ್ ಪೌರಾಣಿಕ ಚಿತ್ರ.ಮಮ್ಮೂಟ್ಟಿ ವೃತ್ತಿ ಜೀವನದ ಇದುವರೆಗಿನ ದೊಡ್ಡ ಬಜೆಟ್‌ ಚಿತ್ರವೂ ಹೌದು.

14ನೇ ಶತಮಾನದ ಆಸುಪಾಸಿನಲ್ಲಿ ಕೇರಳದ ಮಲಬಾರ್‌ ಪ್ರದೇಶದಲ್ಲಿ ಆಚರಣೆಯಲ್ಲಿದ್ದ ದೊಡ್ಡ ಹಬ್ಬದ ಹೆಸರುಮಾಮಾಕಂ. 12 ವರ್ಷಕ್ಕೊಮ್ಮೆ ತಿಂಗಳುಗಟ್ಟಲೇ ನಡೆಯುತ್ತಿದ್ದ ಈ ಹಬ್ಬ ಮಲಯಾಳಿಗರ ಸಾಂಸ್ಕೃತಿಕ ಹಬ್ಬವಾಗಿ ಗುರುತಿಸಿಕೊಂಡಿತ್ತು.

ಈ ಹಬ್ಬದ ಸುತ್ತ ನಡೆಯುವ ರಾಜಕೀಯ, ಸಾಮಂತ ಆಳರಸರ ಕಾದಾಟವನ್ನು ಎಳೆಯಾಗಿಟ್ಟುಕೊಂಡು ಮಲಬಾರಿನ ಮಧ್ಯಕಾಲದ ಇತಿಹಾಸವನ್ನು ನವಿರಾಗಿ ಕಟ್ಟಿಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT