ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯದ ಬೇಗುದಿ ಕಥನ ‘ಮನುಸಂಗಡಾ’

Last Updated 5 ಡಿಸೆಂಬರ್ 2019, 10:22 IST
ಅಕ್ಷರ ಗಾತ್ರ

ಆ ಊರಿನ ಮಸಣಕ್ಕೆ ಇರುವುದೊಂದೇ ದಾರಿ. ಯಾರೇ ಸತ್ತರೂ ಸರ್ವಣೀಯರ ಓಣಿಯಲ್ಲೇ ಹಾದು ಹೋಗಬೇಕು. ಆದರೆ, ದಲಿತರ ಶವ ಈ ಹಾದಿಯಲ್ಲಿ ಸಾಗಬಾರದೆಂಬ ಸಾಮಾಜಿಕ ಕಟ್ಟುಪಾಡು. ಕಲ್ಲು–ಮುಳ್ಳಿನ ಹಾದಿಯೇ ಅವರಿಗೆ ಇರುವ ಏಕೈಕ ದಾರಿ. ಮೇಲ್ಜಾತಿ ಜನರ ಈ ರೂಢಿಗತ ನಡಾವಳಿ ‌ವಿರುದ್ಧ ಸಿಡಿದೇಳುವ ‘ಮನುಸಂಗಡಾ’ (ನಾವು ಮನುಷ್ಯರು) ಸಿನಿಮಾ ಅಸಹಾಯಕರ ಹೋರಾಟ ಕಥನ.

‘ಜನರ ಹಕ್ಕುಗಳ ನಿರಾಕರಣೆ ಮಾನವೀಯತೆಗೆ ಒಡ್ಡಿದ ಸವಾಲು’ ಎನ್ನುವ ನೆಲ್ಸನ್ ಮಂಡೇಲಾ ಅವರ ಪ್ರಸಿದ್ಧ ಉಕ್ತಿಯೊಂದಿಗೆ ಸಿನಿಮಾ ಆರಂಭಗೊಳ್ಳುತ್ತದೆ. ತಮಿಳುನಾಡಿನ ಚಿದಂಬರಂ ಸುತ್ತಲಿನ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ ಈ ಸಿನಿಮಾದ ಕಥಾವಸ್ತು. ಕೋಲಪ್ಪನ್‌ (ರಾಜೀವ್ ಆನಂದ್) ಚೆನ್ನೈನ ಸ್ಟೀಲ್‌ ಕಂಪನಿಯೊಂದರಲ್ಲಿ ದುಡಿಯುವ ಸಾಮಾನ್ಯ ನೌಕರ. ಮುಂಜಾನೆ 4ರ ಸುಮಾರಿಗೆ ತಂದೆ ಚಿನ್ನಪ್ಪನ ಹಠಾತ್‌ ನಿಧನದ ಸುದ್ದಿ ಮೊಬೈಲ್‌ ರಿಂಗಣದೊಂದಿಗೆ ಮುಟುತ್ತದೆ. ದುಗುಡ, ಆತಂಕದಿಂದಲೇ ಊರು ಸೇರುತ್ತಾರೆ.

ಅಷ್ಟೋತ್ತಿಗಾಗಲೇ ಸ್ನೇಹಿತ ಆನಂದ್‌ ಸಂಪತ್ (ಸೆಲ್ವ) ಶವಪಟ್ಟಿಗೆ ಏರ್ಡಾಡು ಮಾಡಿರುತ್ತಾರೆ. ಪುಟ್ಟಗುಡಿಸಲ ಮುಂದೆ ಕೋಲ‍‍ಪ್ಪನ್ ತಾಯಿ (ಮಣಿ ಮೇಘಲೈ) ಗೋಳಾಟ ಇಡೀ ಕೇರಿ ಆವರಿಸಿಕೊಂಡಿರುತ್ತದೆ. ಉಳ್ಳವರ ಹಟ್ಟಿ ಜೀತ ಮಾಡಿದ ಆಳು ಮಕ್ಕಳು ಸತ್ತಾಗ ಸಂಸ್ಕಾರಕ್ಕೂ ದಾರಿ ಇಲ್ಲದ ವ್ಯವಸ್ಥೆ ವಿರುದ್ಧ ಕೋಲಪ್ಪನ್‌ಗೆ ಕೆಂಡದಂತಹ ಕೋಪ. ನಿಜವಾದ ಕಥೆ ಇಲ್ಲಿಂದಲೇ ಆರಂಭ.

ಸಿಡುಕು ಸ್ವಭಾವದ ಸ್ವಾಭಿಮಾನಿ ಯುವಕ ಕೋಲ‍ಪ್ಪನ್, ಆ ಊರಿನ ಜಾತಿ ದುರುಳರಿಗೆ ಬಿಸಿತುಪ್ಪ. ಪರಿಣಾಮ ಹೆಜ್ಜೆ ಹೆಜ್ಜೆಗೂ ಅಪಮಾನ, ಸೇಡಿನ ದಳ್ಳುರಿಗೆ ಸಿಲುಕಿ ಬೇಯುತ್ತಾರೆ. ಕೋ‍ಲಪ್ಪನ್‌ ಪ್ರೇಯಿಸಿ ರೇವತಿ (ಶೀಲಾ ರಾಜಕುಮಾರ್) ಸಾವಿನ ಮನೆ ವಿಳಾಸ ಹುಡುಕುತ್ತಾ ದಾರಿಯಲ್ಲಿ ಸಿಕ್ಕ ಮೂವರು ಯುವಕರಲ್ಲಿ ವಿಚಾರಿಸಿದಾಗ; ಗೌರ್ವನರ್‌ ಬಂಗಲೆ ಎಂದು ಕಿಚಾಯಿಸುತ್ತಾರೆ. ಈ ದೃಶ್ಯ ರೋಗಗ್ರಸ್ತ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಕ್ಷೇತ್ರದ ಎಂಎಲ್‌ಎ ಮೇಲ್ಜಾತಿ ಕೇರಿಗೆ ಭೇಟಿ ನೀಡಿ ತನ್ನ ಸಮುದಾಯದ ಮುಖಂಡರಿಗೆ ಬೆಂಬಲ ನೀಡುತ್ತಾರೆ. ‘ಬೇಲಿಯೇ ಎದ್ದು ಹೊಲ ಮೇಯ್ದರೆ ನ್ಯಾಯವಾದರೂ ಎಲ್ಲಿ ಸಿಗುತ್ತದೆ’ ಎನ್ನುವ ಕೋಲ‍ಪ್ಪನ್‌ ಅಸಹಾಯಕತೆ ನಿಟ್ಟುಸಿರು ನೋಡುಗರ ಎದೆ ಭಾರವಾಗಿಸುತ್ತದೆ. ಜನಪ್ರತಿನಿಧಿ ಬೆಂಬಲದಿಂದ ಅವರೆಲ್ಲಾ ಬೊಬ್ಬರಿಸುತ್ತಾರೆ. ಮಸಣದ ದಾರಿಗೆ ಅಡ್ಡಲಾಗಿ ಜಲ್ಲಿ, ಬಂಡೆಕಲ್ಲು ಸುರಿದು ದಾರಿ ಮುಚ್ಚಿಸುತ್ತಾರೆ. ರಕ್ಕಸತನ ಪ್ರದರ್ಶಿಸುತ್ತಾರೆ.

ನ್ಯಾಯದ ಪರಿಪಾಲಕರಾದ ಪೊಲೀಸರು, ಕಂದಾಯ ಅಧಿಕಾರಿಗಳೇ ಹಳ್ಳಿಯ ಸಾಮಾಜಿಕ ಶಿಷ್ಟಾಚಾರ ಪಾಲಿಸುವಂತೆ ಒತ್ತಡ ಹೇರುತ್ತಾರೆ. ಈ ಬಡ ಕೇರಿ ಜನರಿಗೆ ಅಂಬೇಡ್ಕರ್, ಪೆರಿಯಾರ್ ಅನುಯಾಯಿ ‘ತಲೈವ’(ಮುಖಂಡ) ಗೌತಮ್‌ (ಸೇತು ಡಾರ್ವಿನ್‌) ಒಬ್ಬರೇ ಬೆಂಬಲಿಗರು. ಅವರ ಮನೆ ಕದ ತಟ್ಟಿದಾಗ ಕೋರ್ಟ್‌ ಮೆಟ್ಟಿಲೇರುವ ಚಿಂತನೆ ನಡೆಯುತ್ತದೆ.

ಬಡ ಕಕ್ಷಿದಾರನ ಅಳಲು ಕೇಳಿದ ವಕೀಲರು ತುರ್ತು ಅರ್ಜಿ ವಿಚಾರಣೆಗಾಗಿ ಮದ್ರಾಸ್‌ ಹೈಕೋರ್ಟ್‌ಗೆ ಮನವಿ ಮಾಡುತ್ತಾರೆ. ವಾದ – ವಿವಾದ ಆಲಿಸಿದ ನ್ಯಾಯಾಧೀಶರು, ಹಕ್ಕುಗಳ ನಿರಾಕರಣೆ ಸಾಮಾಜಿಕ ಘನತೆ ಉಲ್ಲಂಘಿಸಿದಂತೆ. ಇದು ಸಂವಿಧಾನ ವಿರೋಧಿ ಕೃತ್ಯ. ದಲಿತರ ಶವ ಸಾಗಿಸಲು ಸುಗಮ ದಾರಿ ವ್ಯವಸ್ಥೆ ಕಲ್ಪಿಸುವುದು ಸ್ಥಳೀಯ ಡಿವೈಎಸ್‌ಪಿ, ಕಂದಾಯ ಅಧಿಕಾರಿಗಳ ಜವಾಬ್ದಾರಿ ಎಂದು ತೀರ್ಪು ‍ಪ್ರಕಟಿಸುತ್ತಾರೆ.

ಆದೇಶದ ಪ್ರತಿ ಹಿಡಿದು ಊರಿಗೆ ಬರುತ್ತಾರೆ. ಆಗಲೇ ಚಿನ್ನಪ್ಪ ಸತ್ತು ಮೂರು ದಿನ ಕಳೆದಿರುತ್ತದೆ. ಮನೆ ಬಾಗಿಲು ಮುತ್ತಿಕೊಳ್ಳುವ ಪೊಲೀಸರು ಕೋರ್ಟ್‌ ಆದೇಶ ಧಿಕ್ಕರಿಸುತ್ತಾರೆ. ಶವಪೆಟ್ಟಿಗೆ ವಶಕ್ಕೆ ಪಡೆಯಲು ಮುಂದಾಗುತ್ತಾರೆ. ಪೊಲೀಸರ ಷಡ್ಯಂತರ ಅರಿಯುವ ಕೇರಿ ಜನರು ಶವಪೆಟ್ಟಿಗೆಯನ್ನು ಗುಡಿಸಲಿನೊಳಗೆ ಹೊತ್ತೊಯ್ಯುತ್ತಾರೆ. ಸೀಮೆಎಣ್ಣೆ ಸುರಿದುಕೊಂಡು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಯಾವುದೇ ಬೆದರಿಕೆಗೂ ಬಗ್ಗುವುದಿಲ್ಲ. ‍ಅಲ್ಲಿಂದ ಕಾಲ್ಕಿಳುವ ಪೊಲೀಸರು ನಯವಂಚನೆ ಕೆಲಸ ಮಾಡುತ್ತಾರೆ.

ಶವ ಸಂಸ್ಕಾರಕ್ಕೆ ಸಿದ್ಧತೆ ನಡೆದು, ತರಾತುರಿಯಲ್ಲಿ ಚಟ್ಟ ಕಟ್ಟಲಾಗುತ್ತದೆ. ತಮಟೆ ನಾದಕ್ಕೆ ಸೆಲ್ವ, ಕೋಲಪ್ಪನ್‌ ಕುಣಿದು ಅದಮಿಟ್ಟುಕೊಂಡ ನೋವು ಮರೆಯುತ್ತಾರೆ. ಅಂತಿಮವಾಗಿ ಶವಯಾತ್ರೆ ಆರಂಭಗೊಳ್ಳುತ್ತದೆ. ಊರಿನ ಮಧ್ಯದ ರಸ್ತೆಗೆ ಬಂದಾಗ ಪೊಲೀಸರ ದೊಡ್ಡ ಪಡೆಯೇ ಅಡ್ಡಲಾಗಿ ನಿಂತಿರುತ್ತದೆ. ಮೊದಲೇ ಅನ್ಯಾಯದ ಬೇಗುದಿಯಲ್ಲಿ ಕುದಿಯುತ್ತಿದ್ದ ಅಸಹಾಯಕ ಜನರು ಘರ್ಷಣೆಗೆ ಇಳಿಯುತ್ತಾರೆ. ಎಲ್ಲರನ್ನು ಬಗ್ಗು ಬಡಿಯುವ ಪೊಲೀಸರು ವ್ಯಾನಿನೊಳಗೆ ನೂಕುತ್ತಾರೆ. ಪೊಲೀಸರೇ ಬಲವಂತವಾಗಿ ಶವವನ್ನು ಕಲ್ಲು – ಮುಳ್ಳಿನ ಹಾದಿಯಲ್ಲಿ ಮಸಣಕ್ಕೆ ಹೊತ್ತೊಯ್ಯುತ್ತಾರೆ !

ಮಾರನೇ ದಿನದ ಸದ್ಗತಿಯ ಕಾರ್ಯ ನೆರವೇರಿಸಲು ಕೋಲ‍ಪ್ಪನ್‌, ನೆಂಟರಿಷ್ಟರೊಂದಿಗೆ ಮಸಣಕ್ಕೆ ಹೋದಾಗ ಮತ್ತೊಂದು ಆಘಾತ ಕಾದಿರುತ್ತದೆ. ಮೂರು – ನಾಲ್ಕು ಕಡೆ ಗುಂಡಿ ತೋಡಿ ಮುಚ್ಚಲಾಗಿರುತ್ತದೆ. ಶವ ಹೂತಿಟ್ಟ ಯಾವ ಕುರುಹು ಕಾಣುವುದಿಲ್ಲ. ಅಳುತ್ತಾ ಕೋಲಪ್ಪನ್‌ ಕುಸಿದು ಬೀಳುತ್ತಾರೆ. ಸಾಕ್ಷ್ಯಚಿತ್ರ ಮಾದರಿಯ ಈ ಸಿನಿಮಾವನ್ನು ಅಮ್‌ಶಾನ್‌ ಕುಮಾರ್ ಯಾವ ಉತ್ರೇಕ್ಷೆಯೂ ಇಲ್ಲದೆ ನಿರ್ದೇಶಿಸಿದ್ದಾರೆ. ಬಡವರ ವೇದನೆ ಪ್ರತಿ ಪ್ರೇಮಂನಲ್ಲೂ ಕಾಣುತ್ತದೆ. ಉಳಿದೆಲ್ಲವೂ ಗೌಣ.

ಕಡೆಗೆ ದಲಿತರಿಗೆ ಸತ್ತಾಗಲೂ ನ್ಯಾಯ ಸಿಗುವುದಿಲ್ಲ ! ಇದು ತಮಿಳುನಾಡಿನ ಹಳ್ಳಿಯೊಂದರ ಕಥೆಯಷ್ಟೇ ಅಲ್ಲ; ದೇಶದ ಪ್ರತಿ ಹಳ್ಳಿಯ ಕಥೆ. ತುಂಡು ಭೂಮಿ, ಸ್ಮಶಾನ, ನೀರು, ಜಾತಿ ತಾರತಮ್ಯ ವಿರುದ್ಧ ಹೋರಾಟ ಸಾಗುತ್ತಲೇ ಇದೆ. ಇಂತಹ ಅನೇಕಾರ್ಥಗಳನ್ನು ಈ ಸಿನಿಮಾ ಧ್ವನಿಸುತ್ತದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ, ಪ್ರಶಸ್ತಿಗಳಿಗೂ ಭಾಜನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT