ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕೋನಿ ಮತ್ತಾಯಿ ಪ್ರೇಮಕಥೆ ಸಂಚಲನ

Last Updated 25 ಜುಲೈ 2019, 19:46 IST
ಅಕ್ಷರ ಗಾತ್ರ

ಬೇರೆ ದೇಶ, ಊರು ಮತ್ತು ವ್ಯಕ್ತಿಗಳ ಹೆಸರಿಗೆ ಸ್ಥಳೀಯ ಹೆಸರು ಅಥವಾ ಸರ್‌ನೇಮ್ ಸೇರಿಸಿ ರಂಜನೀಯ ಸಿನಿಮಾ ನಿರ್ಮಿಸುವುದು ಮಾಲಿವುಡ್‌ಗೆ ಹೊಸತೇನೂ ಅಲ್ಲ. ಕಟ್ಟಪ್ಪನಯಿಲೆ ಋತಿಕ್ ರೋಷನ್, ಅರ್ಜೆಂಟೀನಾ ಫ್ಯಾನ್ಸ್ ಕ್ಲಬ್, ಸುಡಾನಿ ಫ್ರಂ ನೈಜೀರಿಯಾ ಮುಂತಾದ ಹೆಸರಿನ ಚಿತ್ರಗಳು ಈಗಾಗಲೇ ಪ್ರೇಕ್ಷಕರ ಮನತಣಿಸಿವೆ. ಇಂಥ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ ‘ಮಾರ್ಕೋನಿ ಮತ್ತಾಯಿ’.

ರೇಡಿಯೊದಲ್ಲಿ ಹಾಡು ಕೇಳುವುದನ್ನೇ ಹವ್ಯಾಸ ಮಾಡಿಕೊಂಡಿರುವ ಸೆಕ್ಯುರಿಟಿ ಗಾರ್ಡ್ ಒಬ್ಬನ ಸುತ್ತ ಈ ಚಿತ್ರಕಥೆ ಹೆಣೆಯಲಾಗಿದೆ. ಹಿರಿಯ ನಟ ಜಯರಾಂ ಮುಖ್ಯಭೂಮಿಕೆಯಲ್ಲಿ ಈ ಚಿತ್ರ ತೆರೆಕಂಡಿದೆ. ಸನಿಲ್‌ ಕಳತ್ತಿಲ್ ನಿರ್ದೇಶನದ ಈ ಚಿತ್ರದಲ್ಲಿ ಮತ್ತಾಯಿ ಆಗಿ ಜಯರಾಂ ಬಣ್ಣ ಹಚ್ಚಿದ್ದಾರೆ. ಸೇನೆಯಿಂದ ನಿವೃತ್ತಿಯಾದ ನಂತರ ಸೆಕ್ಯುರಿಟಿ ಗಾರ್ಡ್ ಕಂಪನಿ ಸೇರುವ ಮತ್ತಾಯಿ ಬ್ಯಾಂಕ್‌ನಲ್ಲಿ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಾನೆ. ಆತನ ಜೀವನದ ನಾನಾ ಮುಖಗಳನ್ನು ಭಾವವೈವಿಧ್ಯದೊಂದಿಗೆ ಚಿತ್ರದಲ್ಲಿ ‘ಬೆಳಕಿಗೆ’ ತರಲಾಗಿದೆ.

ಆತನಿಗೆ ರೇಡಿಯೊ ಕೇಳುವ ‘ಹುಚ್ಚು’. ಹಾಗಾಗಿ, ಮತ್ತಾಯಿಯನ್ನು ಎಲ್ಲರೂ ಮಾರ್ಕೋನಿ ಮತ್ತಾಯಿ ಎಂದೇ ಕರೆಯುತ್ತಾರೆ. ನಟಿ ಆತ್ಮೀಯ ರಾಜ ಅವರು ನಾಯಕಿಯ ಪಾತ್ರವಹಿಸಿದ್ದಾರೆ. ತಮಿಳು ನಟ ವಿಜಯ್ ಸೇತುಪತಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ಮಾಲಿವುಡ್‌ ಪ್ರವೇಶಿಸಿದ್ದಾರೆ. ಇದು ಸಿನಿಮಾ ಪ್ರಿಯರು ಖುಷಿಯನ್ನು ಹೆಚ್ಚಿಸಿದೆ.

ಮಾಲಿವುಡ್‌ನ ಹಾಸ್ಯಕ್ಕೆ ಹೊಸ ಆಯಾಮ ನೀಡಿರುವ, ಯುವಜನರ ಕಣ್ಮಣಿ ಅಜು ವರ್ಗೀಸ್ ಜೊತೆಗೆ ಹರೀಶ್ ಕಣಾರನ್, ಸಿದ್ಧಾರ್ಥ್ ಶಿವ, ಸುಧೀರ್ ಕರಮನ, ಕಲಾಭವನ್ ಪ್ರಜೋದ್‌ ತಾರಾಗಣದಲ್ಲಿದ್ದಾರೆ. ನಿಮಾ ಆರಂಭವಾಗುವುದು ರೇಡಿಯೊ ಮುಂದೆ ಕುಳಿತ ಹತ್ತಾರು ಮಂದಿ ವಿಶೇಷ ಸೂಚನೆಯೊಂದನ್ನು ಗಮನವಿಟ್ಟು ಕೇಳುವ ದೃಶ್ಯವೊಂದರ ಮೂಲಕ. ಕೇರಳಕ್ಕೆ ಕಥೆಯೊಂದನ್ನು ಹೇಳಲು ವಿಶಿಷ್ಟವಾದ ವ್ಯಕ್ತಿಯೊಬ್ಬರು ಬರುತ್ತಿದ್ದಾರೆ ಎಂಬುವುದೇ ಆ ಸೂಚನೆ. ಆ ವ್ಯಕ್ತಿ (ವಿಜಯ್ ಸೇತುಪತಿ) ಕಾರಿನಲ್ಲಿ ಬಂದಿಳಿಯುವಾಗ ಸ್ವಾಗತ ನೀಡಲಾಗುತ್ತದೆ. ಅವರು ಮತ್ತಾಯಿಯನ್ನು ದೂರವಾಣಿ ಮೂಲಕ ಮಾತನಾಡಿಸಿ ಅವರ ಪ್ರಣಯದ ಕಥೆ ಕೇಳಲು ಆರಂಭಿಸುತ್ತಾರೆ. ಚಿತ್ರದ ನಿಜ ಕಥೆ ಆರಂಭವಾಗುವುದು ಅಲ್ಲಿಂದಲೇ. ಮುಂದಿನದ್ದು ಪ್ರೇಕ್ಷಕರಿಗೆ ಹಾಸ್ಯಭರಿತ, ಪ್ರಣಯಲೇಪಿತ ರಸ ರೋಮಾಂಚನ.

ಬೆಳದಿಂಗಳ ರಾತ್ರಿಯಲ್ಲಿ ನದಿಯ ಮಧ್ಯೆ ದೋಣಿಯಲ್ಲಿ ರಸಮಯ ಕ್ಷಣಗಳನ್ನು ಕಳೆಯುವ ನಾಯಕ- ನಾಯಕಿ ಹೊಳೆಯುವ ಚಂದ್ರನತ್ತ ದೃಷ್ಟಿ ಹಾಯಿಸಿ ಹಾಡುವ ‘ಚೆಮ್ಮುಗಿಲಣಿ ಮಾನತ್ತ್.. ಕಿನ್ನರಮಣಿ ಮುಳಕ್ಕಂ ಕೇಳ್ಕುಣ್ಣುಂಡಂಬಂಬೋ… ರಾವಿರಿಯಣ ನೇರತ್ತ್ ಚಂದಿರನದಿ ದೂರತ್ತ್ ಪೂಕ್ಕುನ್ನುಂಡಂಬಂಬೋ… ತೊಟ್ಟೇ ಇಡನೆಂಜಿಲೊನ್ನ್ ತೊಟ್ಟೇ…’ ಎಂಬ ಹಾಡು ಸಿನಿಪ್ರಿಯರ ಬಾಯಲ್ಲಿ ನಲಿದಾಡುತ್ತಿದೆ.

ಈ ಹಾಡಿನ ಮೂಲಕಉಣ್ಣಿಮೇನೋನ್ ಮತ್ತೆ ಚಿತ್ರಗೀತೆ ಗಾಯನದ ಹಾದಿಗೆ ಮರಳಿದ್ದಾರೆ. ಎ.ಜಿ. ಪ್ರೇಮಚಂದ್ರನ್ ನಿರ್ಮಾಣದ ಈ ಚಿತ್ರ ಹಳತು- ಹೊಸತರ ಸಮ್ಮಿಲನದೊಂದಿಗೆ ಎಲ್ಲ ವರ್ಗದ ಪ್ರೇಕ್ಷಕರಿಗೆ ಮುದ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT