ಮಂಗಳವಾರ, ಅಕ್ಟೋಬರ್ 27, 2020
22 °C

ವೈರಮುತ್ತು ವಿರುದ್ಧ ಮೀಟೂ ಆರೋಪ ಮತ್ತೆ ಮುನ್ನೆಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೀಟೂ ಚಳವಳಿಗೆ ಸುಮಾರು 2 ವರ್ಷ ತುಂಬುತ್ತಿದೆ. ಇದೀಗ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಚಿತ್ರ ಸಾಹಿತಿ ವೈರಮುತ್ತು ಅವರ ವಿರುದ್ಧ ಮಾಡಿದ ಮೀ ಟೂ ಆರೋಪದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

ಮೂರನೇ ವ್ಯಕ್ತಿಯನ್ನು ಉದ್ದೇಶಿಸಿ ಹೇಳುವ ಅರ್ಥದಲ್ಲಿರುವ ಚಿನ್ಮಯಿ ಅವರ ಟ್ವೀಟ್‌ನ ಸಾರಾಂಶ ಹೀಗಿದೆ.

ಮೀಟೂ ಅಭಿಯಾನದ ಎರಡನೇ ಅಲೆಗೆ ಸುಮಾರು 2 ವರ್ಷ ತುಂಬಿತು. ಅವಳು ಈ ವಿಚಾರ ಹೇಳಿಕೊಳ್ಳಲು ಎರಡು ವರ್ಷ ತೆಗೆದುಕೊಂಡಳು. ಏಕೆಂದರೆ ಈ ವಿಚಾರ ಸಂಬಂಧಿಸಿ ಅವಳ ಕುಟುಂಬದ ಬೆಂಬಲ ಇರಲಿಲ್ಲ. ಮಾತ್ರವಲ್ಲ ಸಮಾಜ ಇಣುಕಿ ನೋಡುವಷ್ಟೂ ಮುಖ್ಯ ವಿಷಯ ಅನಿಸಲಿಲ್ಲ... ಎಂದು ವಿಷಾದದಿಂದ ಬರೆದುಕೊಂಡಿದ್ದಾರೆ.

ಜಾಲತಾಣದೊಳಗೆ ನಡೆದಿರುವ ಮಾತುಕತೆಯ ಸ್ಕ್ರೀನ್‌ಶಾಟ್‌ನ್ನು ಚಿನ್ಮಯಿ ಅವರು ಟ್ವೀಟ್‌ನಲ್ಲಿ ಪ್ರದರ್ಶಿಸಿದ್ದಾರೆ. ಅದರಲ್ಲಿ ಹೆಸರುಗಳನ್ನು ಮರೆಮಾಚಲಾಗಿದೆ.

ನಾನು ಕಾಲೇಜಿನಲ್ಲಿದ್ದಾಗ ಪುಸ್ತಕ ಬಿಡುಗಡೆ ಸಮಾರಂಭವೊಂದಕ್ಕೆ ಹೋಗಿದ್ದೆ. ಅಲ್ಲಿ ವೈರಮುತ್ತು ಅವರ ಆಟೋಗ್ರಾಫ್‌ ಪಡೆಯಲು ಮುಂದಾದೆ. ಅವರು ತಮ್ಮ ಸಹಿ ಹಾಕಿ ತಮ್ಮ ಫೋನ್‌ ನಂಬರನ್ನೂ ಕೊಟ್ಟರು. ನಾನು ತುಂಬಾ ಸಣ್ಣವಳಿದ್ದೆ. ಹಾಗಾಗಿ ಅದನ್ನು ನಾನು ನಿರ್ಲಕ್ಷಿಸಿದೆ. ಕೆಲಕಾಲದ ಬಳಿಕ ನಾನು ಒಂದು ಚಾನೆಲ್ನಲ್ಲಿ ವಿಜೆ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲಿ ನನ್ನನ್ನು ಭೇಟಿಯಾದ ವೈರಮುತ್ತು ನನ್ನ ಫೋನ್‌ ನಂಬರ್‌ ಕೇಳಿದರು. ಎರಡನೇ ಬಾರಿ ಯೋಚಿಸದೇ  ನಿಷ್ಕಪಟ ಮನಸ್ಸಿನಿಂದ ಫೋನ್‌ ನಂಬರ್‌ ಕೊಟ್ಟೆ.

ಆ ಬಳಿಕ ಬಂದ ಕರೆಗಳ ಹಿಂಸೆ ವಿಪರೀತವಾಗಿತ್ತು. ಅವರ ಕರೆಯ ಉದ್ದೇಶ ತಿಳಿದಾಗ ನನಗೆ ಆಘಾತವಾಗಿತ್ತು. ಅವರು ನನ್ನನ್ನು ಮೌಂಟ್‌ರೋಡ್‌ನ ಒಂದು ಸ್ಥಳಕ್ಕೆ ಕರೆದರು. ನಾನು ಅಲಕ್ಷಿಸಿದೆ. ಕರೆಗಳ ಪ್ರಮಾಣ ಎಷ್ಟಾಯಿತೆಂದರೆ ಗಂಟೆಗೆ 50 ರಿಂದ 60 ಕರೆಗಳು ನಿರಂತರ ಬರತೊಡಗಿದವು. 

ನನ್ನನ್ನು ಅವರು ದೇವತೆ ಎಂದು ಕರೆಯುತ್ತಿದ್ದರು. ನಾನು ಅವರಿಗೆ ಕನಸಿನಲ್ಲಿ ಕಾಣಿಸುತ್ತಿದ್ದೆನಂತೆ.

ಕೊನೆಗೆ ನಾನು ನನ್ನ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ಬಳಿ ಹೇಳಿದೆ. ಅವರು ವೈರಮುತ್ತು ಪತ್ನಿಯ ಬಳಿ ಮಾತನಾಡಿ ಅವರ ಬಾಯಿ ಮುಚ್ಚಿಸಿದರು ಎಂದಿದ್ದಾರೆ.

ಚಿನ್ಮಯಿ ಅವರ ಈ ಟ್ವೀಟ್‌ಗೆ 81 ಮಂದಿ ರಿಟ್ವೀಟ್‌ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ವೈರಮುತ್ತು ನಡವಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು