ಮಂಗಳವಾರ, ಮೇ 17, 2022
24 °C

ಚಿರು ನೆನಪು ಬಿಚ್ಚಿಟ್ಟ ಮೇಘನಾ ರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಭಿನಯದ ‘ರಾಜಮಾರ್ತಾಂಡ’ ಚಿತ್ರದ ಟ್ರೇಲರ್‌ ಶುಕ್ರವಾರ(ಫೆ.19) ಬಿಡುಗಡೆಯಾಗಲಿದ್ದು, ಈ ಸಂದರ್ಭದಲ್ಲಿ ಪತ್ನಿ, ನಟಿ ಮೇಘನಾ ರಾಜ್‌ ಚಿರು ಅವರನ್ನು ನೆನಪಿಸಿಕೊಂಡಿದ್ದಾರೆ.

‘ರಾಜಮಾರ್ತಾಂಡ ಚಿರುವಿನ ಮನಸ್ಸಿಗೆ ಎಷ್ಟು ಹತ್ತಿರವಾಗಿತ್ತು ಎಂಬುವುದು ನನಗಿಂತ ಚಿರುವಿನ ಅಭಿಮಾನಿಗಳಿಗೇ ಹೆಚ್ಚು ಗೊತ್ತಿದೆ. ಏಕೆಂದರೆ, ಈ ಚಿತ್ರದ ಬಗ್ಗೆ ಮೊದಲ ದಿನದಿಂದಲೂ ಚಿರು ಬಹಳ ಉತ್ಸುಕರಾಗಿದ್ದರು. ಉತ್ಸುಕರಾಗಿದ್ದರು ಎನ್ನುವುದಕ್ಕಿಂತ ಚಿತ್ರದಲ್ಲಿನ ತಮ್ಮ ಪಾತ್ರವನ್ನು ಎಷ್ಟು ಇಷ್ಟಪಟ್ಟು ಮಾಡುತ್ತಿದ್ದರು ಎಂದರೆ, ಸಿನಿಮಾ ಡೈಲಾಗ್‌ಗಳು ನಮಗೆ ಇಂದಿಗೂ ನೆನಪಿದೆ. ಈ ಸಿನಿಮಾ ಚಿರು ಅವರ ಮನಸ್ಸಿಗೆ ಹತ್ತಿರವಾಗಿತ್ತು. ತಮ್ಮ ಸಿನಿಮಾ ಬದುಕಿನಲ್ಲಿ ವಿಶೇಷವಾದ ಚಿತ್ರ ಎಂದು ಇದನ್ನು ಅಂದುಕೊಂಡಿದ್ದರು. ಬಹಳ ವಿಭಿನ್ನವಾದ ಪಾತ್ರ ಇದರಲ್ಲಿದೆ. ಚಿರುವನ್ನು ಆ ಪಾತ್ರದಲ್ಲಿ ನೋಡಿ ನಾನು ಮೆಚ್ಚಿದ್ದೇನೆ’ ಎಂದು ಮೇಘನಾ ವಿಡಿಯೊದಲ್ಲಿ ಹೇಳಿದ್ದಾರೆ. 

‘ಇದೇ ಮೊದಲ ಬಾರಿಗೆ ತಂದೆಯ ಸಿನಿಮಾ ಟ್ರೇಲರ್‌ ಅನ್ನು ಮಗ ಬಿಡುಗಡೆಗೊಳಿಸುತ್ತಿದ್ದಾನೆ. ಅಪ್ಪನಿಗೋಸ್ಕರ, ಅಪ್ಪನಿಗಾಗಿ, ಸಿನಿಮಾ ತಂಡಕ್ಕಾಗಿ ನನ್ನ ಮಗ ರಾಜಮಾರ್ತಾಂಡ ಟ್ರೇಲರ್‌ ಅನಾವರಣ ಮಾಡುತ್ತಿದ್ದಾನೆ. ಧ್ರುವ ಈ ಚಿತ್ರದಲ್ಲಿ ಚಿರುವಿಗೆ ಡಬ್‌ ಮಾಡಿದ್ದು, ಮಗ ಟ್ರೇಲರ್‌ ಬಿಡುಗಡೆ ಮಾಡುತ್ತಿರುವ ಕಾರಣ ನಮ್ಮ ಇಡೀ ಕುಟುಂಬಕ್ಕೆ ಈ ಚಿತ್ರ ವಿಶೇಷವಾಗಿದೆ. ಇಡೀ ಚಿತ್ರ ತಂಡಕ್ಕೆ ಶುಭಹಾರೈಕೆ. ಪೊಗರು ಚಿತ್ರದ ಜೊತೆಯೇ ಟ್ರೇಲರ್‌ ಬಿಡುಗಡೆ ಇನ್ನೊಂದು ವಿಶೇಷ’ ಎಂದರು.

ಫೆ.19ರಂದು ಬೆಳಗ್ಗೆ 7 ಗಂಟೆಗೆ ಜೂ.ಚಿರು ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಲಿದ್ದಾರೆ ಎಂದು ನಿರ್ದೇಶಕ ಕೆ.ರಾಮ್‌ನಾರಾಯಣ್‌ ಫೇಸ್‌ಬುಕ್‌ನಲ್ಲಿ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು