ಭಾನುವಾರ, ಜನವರಿ 24, 2021
24 °C

ಪ್ರೇಮ್‌ ಕಹಾನಿ ತೆರೆದಿಟ್ಟ ಮಿಲಿಂದ್ ಸೋಮನ್‌ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಮಿಲಿಂದ್ ಸೋಮನ್‌ ಪತ್ನಿ ಅಂಕಿತಾ ಕೊನ್ವರ್‌ ತಮ್ಮ ಪ್ರೇಮ ಕತೆಯ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ಜೋಡಿ ಹಕ್ಕಿಗಳಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಿಲಿಂದ್ ಹಾಗೂ ಅಂಕಿತಾ 2018ರಲ್ಲಿ ವಿವಾಹ ಬಂಧನಕ್ಕೆ ಒಳಗಾದರು. ಹಿರಿಯ ನಟ ಮಿಲಿಂದ್‌ ತಮಗಿಂತ ಸಾಕಷ್ಟು ಸಣ್ಣ ವಯಸ್ಸಿನ ಯುವತಿಯೊಂದಿಗೆ ಓಡಾಡುವ ಕಾರಣಕ್ಕೆ ಟೀಕೆ ಎದುರಿಸಿದ್ದರು. ಅವರಿಬ್ಬರು ಜೊತೆಗಿದ್ದ ಫೋಟೊಗಳನ್ನು ಪೋಸ್ಟ್‌ ಮಾಡಿದಾಗಲೆಲ್ಲ ಅಭಿಮಾನಿಗಳಿಂದ ಬಿರುಸು ನುಡಿಗಳನ್ನು ಎದುರಿಸಬೇಕಾಯಿತು. ಆದರೆ ಮದುವೆ ನಂತರ ಟೀಕೆಗಳು ಕ್ರಮೇಣ ಕಡಿಮೆಯಾದವು. ಈಗ ಜೋಡಿಹಕ್ಕಿಗಳ ಫೋಟೊಗೆ ಸಾಕಷ್ಟು ಲೈಕ್‌ ಸಿಗುತ್ತಿದೆ.

ತಮ್ಮ ಮೊದಲ ಭೇಟಿ, ನಂತರ ಪ್ರೀತಿ, ಮದುವೆಯ ಕುರಿತು ಸಾಕಷ್ಟು ವಿಚಾರಗಳನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಅಂಕಿತಾ ಹಂಚಿಕೊಂಡಿದ್ದಾರೆ.

‘ನಾನು ಏರ್‌ ಏಷ್ಯಾ ಸಂಸ್ಥೆಯೊಂದಿಗೆ ಕ್ಯಾಬಿನ್‌ ಸಹಾಯಕಿಯಾಗಿ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿಯೇ ನನ್ನ ಬಾಯ್‌ಫ್ರೆಂಡ್‌ ಸಾವನ್ನಪ್ಪಿದ್ದ. ಈ ಆಘಾತದಿಂದ ನಾನು ಹೊರಬರಲಾಗದೇ ಒದ್ದಾಡುತ್ತಿದ್ದೆ. ನನಗೆ ಚೆನ್ನೈಗೆ ವರ್ಗವಾಯಿತು’ ಎಂದು ತಮ್ಮ ಬದುಕಿನ ನೋವಿನ ಪುಟಗಳನ್ನು ಅವರು ತೆರೆದಿಟ್ಟರು.

‘ಮೊದಲ ಬಾರಿಗೆ ಹೋಟೆಲ್‌ ಒಂದರಲ್ಲಿ ನಾನು ಮಿಲಿಂದ್ ಅವರನ್ನು ನೋಡಿದೆ. ಇನ್ನೊಂದು ದಿನ ಹೋಟೆಲ್‌ನ ನೈಟ್‌ಕ್ಲಬ್‌ನಲ್ಲಿ ನೋಡಿದೆ. ಅವರೂ ನನ್ನ ಕಡೆ ನೋಡಿದರು. ಫ್ರೆಂಡ್ಸ್‌ ಒತ್ತಾಯ ಮಾಡಿದ್ದಕ್ಕೆ ಹೋಗಿ ಮಾತನಾಡಿಸಿದೆ. ಅಲ್ಲಿ ಅವರ ನಂಬರ್‌ ನನಗೆ ಸಿಕ್ಕಿತು. ಕೆಲವು ದಿನ ಯಾವುದೇ ಮೆಸೇಜ್‌ ಕಳಿಸಲಿಲ್ಲ. ಆದರೆ ಅವರನ್ನು ನನಗೆ ಮರೆಯಲಾಗಲಿಲ್ಲ. ಸಂದೇಶ ಕಳಿಸಿ ಮತ್ತೆ ಭೇಟಿಯಾದೆ’ ಎಂದು ತಮ್ಮ ಮೊದಲ ಭೇಟಿಯನ್ನು ವಿವರಿಸಿದರು.

‘ಕೆಲ ಭೇಟಿಗಳಲ್ಲಿ ನಾವು ಕೇವಲ ಫ್ರೆಂಡ್ಸ್‌ ಆಗಿದ್ದೆವು. ಇವರೇ ನನ್ನ ಬಾಳ ಸಂಗಾತಿ ಆಗುತ್ತಾರೆ ಅನ್ನುವಷ್ಟು ಆಪ್ತ ಭಾವ ಬಂದಿರಲಿಲ್ಲ. ಆದರೆ ನನ್ನ ಬಾಯ್‌ಫ್ರೆಂಡ್‌ ಸಾವಿನ ಬಗ್ಗೆ ಹೇಳಿದಾಗ ಅವರು ನನಗೆ ಸಮಾಧಾನ ಮಾಡಿದ ರೀತಿ ಇಷ್ಟವಾಯಿತು. ಅವರ ಭಾವನೆ ಹಾಗೂ ಭಾವತೀವ್ರತೆ ನನ್ನ ಮೇಲೆ ಪ್ರಭಾವ ಬೀರಿತು. ಅಲ್ಲಿಂದ ನಾನು ಅವರನ್ನು ಇಷ್ಟಪಡಲು ಆರಂಭಿಸಿದೆ’ ಎಂದು ಮೊದಲ ಬಾರಿ ಹುಟ್ಟಿದ ಪ್ರೀತಿಯನ್ನು ಹೇಳಿಕೊಂಡರು.

‘ಐದು ವರ್ಷ ನಾವು ಡೇಟಿಂಗ್‌ನಲ್ಲಿ ಇದ್ದೆವು. ಮದುವೆಯಾಗುವುದಾಗಿ ನಿರ್ಧರಿಸಿದ ಬಳಿಕ ಕುಟುಂಬದವರೊಂದಿಗೆ ಮಾತನಾಡಿದೆವು. ವಯಸ್ಸಿನ ಅಂತರದ ಕಾರಣಕ್ಕೆ ಅವರು ಯೋಚಿಸುತ್ತಿದ್ದರು. ಆದರೆ ನಮಗೆ ದೂರವಾಗಲು ಅದು ಕಾರಣವಾಗಿರಲಿಲ್ಲ. ನಮ್ಮ ಖುಷಿಯನ್ನು ನೋಡಿ ಅವರು ಒಪ್ಪಿಕೊಂಡರು’ ಎಂದರು.

‘ಅಲಿಬಾಗ್‌ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾದೆವು. ಸ್ಪೇನ್‌ನಲ್ಲಿ ಜಲಪಾತದ ಕೆಳಗೆ ವೈಟ್ ವೆಡ್ಡಿಂಗ್‌, ‘ಎಂಡ್‌ ಆಫ್‌ ದ ವರ್ಲ್ಡ್‌’ ಎನ್ನುವ ಸ್ಥಳದಲ್ಲಿ ಮೂರನೇ ಬಾರಿ ಮದುವೆಯಾದೆವು’ ಎಂದು ಮೂರು ಮದುವೆಯ ಗುಟ್ಟನ್ನು ಬಿಚ್ಚಿಟ್ಟರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು