ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ವ್ಯಸನಕ್ಕೆ ಮದ್ದು ಅರೆದ ದೊಡ್ಡರಂಗೇಗೌಡರು!

Last Updated 17 ಜುಲೈ 2020, 0:59 IST
ಅಕ್ಷರ ಗಾತ್ರ

ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ರಚನೆ, ನಟನೆ ಹೀಗೆ ಹಲವು ಕೌಶಲದೊಂದಿಗೆ ಸುಮಾರು ಐದೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಸಾಹಿತಿ ದೊಡ್ಡರಂಗೇಗೌಡ. ಈಗ ಅವರು ಮೊದಲ ಬಾರಿಗೆ ನಿರ್ದೇಶಕನ ಟೊಪ್ಪಿಯನ್ನೂಧರಿಸಿದ್ದಾರೆ. ಮೊಬೈಲ್‌ ವ್ಯಸನದಿಂದ ಉಂಟಾಗುವ ಪರಿಣಾಮ ಕುರಿತ ಕಥಾಹಂದರದ ‘ಹಾರುವ ಹಂಸಗಳು’ ಎನ್ನುವ ಮಕ್ಕಳ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರ ಗಮನ ಸೆಳೆಯುವಂತಿದೆ.

ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿಭಾಯಿಸುವ ಜತೆಗೆದೊಡ್ಡರಂಗೇಗೌಡರುಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು ಪ್ರಮಾಣಪತ್ರ ನೀಡಿದ್ದು, ಚಿತ್ರವನ್ನು ಶೀಘ‍್ರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

‘ಕಳೆದ ವರ್ಷ ನಾನು ಬರೆದಿದ್ದ ‘ಆತಂಕ’ ಎಂಬ ನಾಟಕದ ಕಥಾವಸ್ತು ಆಧರಿಸಿ ಈ ಚಿತ್ರದ ಚಿತ್ರಕಥೆ ಹೆಣೆದಿದ್ದೇನೆ ಎಂದು ‘ಪ್ರಜಾಪ್ಲಸ್‌’ ಜತೆಗೆ ಮಾತಿಗಾರಂಭಿಸಿದ ಗೌಡರು, ‘ಸ್ಮಾರ್ಟ್‌ಫೋನ್‌ ಎಂಬ ಮಾಯಾವಿ ಮಕ್ಕಳಿಂದಿಡಿದು ಮುದುಕರವೆರೆಗೆ ಎಲ್ಲರನ್ನೂ ಹೇಗೆ ದಾಸಾನುದಾಸರನ್ನಾಗಿಸಿಕೊಂಡಿದೆ ಎನ್ನುವ ಸದ್ಯದ ಮತ್ತು ವಾಸ್ತವದ ರೂಕ್ಷಸ್ಥಿತಿಯನ್ನು ಮನಕ್ಕೆ ಮುಟ್ಟುವಂತೆ ಮತ್ತು ತಟ್ಟುವಂತೆ‘ಹಾರುವ ಹಂಸಗಳು’ ಚಿತ್ರದಲ್ಲಿ ತೆರೆದಿಟ್ಟಿದ್ದೇವೆ’ ಎಂದು ಮಾತುವಿಸ್ತರಿಸಿದರು.

‘ನಮ್ಮ ಹಿರಿಯರು, ಹಿಂದಿನ ಸಮಾಜ ಯಾವುದನ್ನು ಮೃದು, ಎಳೆಯ ಮನಸುಗಳಿಂದ ಮರೆಮಾಡಿ ಇಟ್ಟಿತ್ತೋ ಅದೆಲ್ಲವನ್ನೂಸ್ಮಾರ್ಟ್‌ ಫೋನುಗಳು, ವಿನೂತನ ಆ್ಯಪ್‌ಗಳು ಮುಕ್ತಮುಕ್ತವಾಗಿ ತೆರೆದಿಟ್ಟಿವೆ. ಕೆಲಸಕ್ಕೆ ಬಾರದ ಆ್ಯಪ್‌ಗಳಲ್ಲಿ ಮಕ್ಕಳು, ಯುವಜನರು, ದೊಡ್ಡವರು ಮುಳುಗಿ ಹೋಗಿದ್ದಾರೆ. ಈ ಸಮಾಜ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಎನ್ನುವ ‘ಆತಂಕ’ದಲ್ಲೇ ಅದಕ್ಕೊಂದು ಪರಿಹಾರ ಸೂಚಿಸುವ ಉಮೇದಿನಲ್ಲಿ ಈ ಚಿತ್ರ ಮಾಡಿದ್ದೇನೆ. ನನ್ನ ಕಲ್ಪನೆ, ಕಸನು, ಹಂಬಲ ಏನೆನ್ನುವುದನ್ನು ಈ ಚಿತ್ರದ ಕೊನೆಯಲ್ಲಿ ಹೇಳಿದ್ದೇವೆ’ ಎನ್ನುವ ಅವರು, ಕ್ಲೈಮ್ಯಾಕ್ಸ್ ಕುತೂಹಲ ಕಾಯ್ದುಕೊಂಡರು.

‘ಪುಟ್ಟಣ್ಣ ಕಣಗಾಲ್‌ ನನಗೆ ಗುರು ಸಮಾನರು. ಅವರ ಚಿತ್ರ ಬದುಕಿನ ಹಾದಿ ನಮಗೆ ಮೇಲ್ಪಂಕ್ತಿ.ಬರವಣಿಗೆಯ ಜತೆಗೆ 18 ಚಿತ್ರಗಳಲ್ಲಿ ನಟನೆ ಕೂಡ ಮಾಡಿದ್ದೇನೆ. ಐದೂವರೆ ದಶಕದ ಅನುಭವವನ್ನು ಈ ಚಿತ್ರಕ್ಕೆ ಧಾರೆ ಎರೆದಿದ್ದೇನೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ತಂತ್ರಜ್ಞರನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ. ಅವರೆಲ್ಲರ ಸಹಕಾರದಿಂದ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ’ ಎನ್ನಲು ಅವರು ಮರೆಯಲಿಲ್ಲ.

‘ಒಂದು ಮನೆಯಲ್ಲಿ ನಾಲ್ಕು ಮಂದಿ ಇದ್ದರೆ ನಾಲ್ಕೂ ಮಂದಿಯೂಕೈಯಲ್ಲಿ ಮೊಬೈಲ್‌ ಹಿಡಿದು ಕುಳಿತುಕೊಳ್ಳುತ್ತಾರೆ. ಮೊಬೈಲ್‌ ಧ್ಯಾನದಲ್ಲಿದ್ದಾರೆ. ಮೊಬೈಲ್‌ನೊಳಗೆ ಐಕ್ಯರಾಗಿದ್ದಾರೆ. ಅದರ ಪರಿಣಾಮ ಸಂಬಂಧಗಳು ಹದಗೆಟ್ಟು ಹೋಗಿವೆ. ಮಕ್ಕಳಂತೂ ಪಬ್‌ಜಿಯಂತ ಆಟದಲ್ಲಿ ತಲ್ಲೀನರಾಗಿದ್ದಾರೆ. ಮನಸು, ಮೈಗೆ ಮುದ ನೀಡುವಂತಹ ಈಜು, ಗೋಲಿ, ಲಗೋರಿ, ಬುಗುರಿ, ಕಬಡ್ಡಿ, ಚಿನ್ನಿದಾಂಡು ಆಟಗಳು ಮಕ್ಕಳಿಗೆ ಮರೆತು ಹೋಗಿದೆ. ದೊಡ್ಡವರೆನಿಸಿಕೊಂಡವರುಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಇನ್‌ಸ್ಟಾಗ್ರಾಂನಲ್ಲಿ ಮುಳುಗಿ ಹೋಗಿದ್ದಾರೆ.ಬದುಕಿಗೆ, ಜ್ಞಾನಾರ್ಜನೆಗೆ ಬೇಕಾದ ಮಾಹಿತಿಯನ್ನು ಅಂತರ್ಜಾಲದಲ್ಲಿ ಪಡೆಯಲು ಸಮಯ ವಿನಿಯೋಗಿಸುತ್ತಿಲ್ಲ. ಕೆಲಸಕ್ಕೆ ಬಾರದ್ದು, ಅಶ್ಲೀಲವಾದದ್ದರ ವೀಕ್ಷಣೆಯಲ್ಲಿ ಕಾಲ ಹರಣ ಮಾಡುತ್ತಿದ್ದಾರೆ.ಪ್ರಪಂಚ ವಿನಾಶವಾಗಲು ಆಟಂ ಬಾಂಬು ಬೇಕಾಗಿಲ್ಲ.ಮೊಬೈಲ್ ಗೀಳೇ ಬದುಕಿಗೆ ಹೇಗೆ ಮಾರಕವಾಗುತ್ತಿದೆ ಎನ್ನುವುದನ್ನು ಈ ಚಿತ್ರ ತೆರೆದಿಡಲಿದೆ’ ಎನ್ನುವ ಮಾತು ಸೇರಿಸಿದರು.

‘ಇದೊಂದು ಕಲಾತ್ಮಕ ಮತ್ತು ಶೈಕ್ಷಣಿಕಚಿತ್ರ.ಹೊರಾಂಗಣ ಚಿತ್ರೀಕರಣ ಮಾಡಿದ ಉದ್ದೇಶ ಪಟ್ಟಣದ ಮಕ್ಕಳಿಗೆ ಹಳ್ಳಿ ಮತ್ತು ಹಳ್ಳಿಯ ಬದುಕಿನ ದರ್ಶನ ಮಾಡಿಸಿದ್ದೇವೆ. ಇದನ್ನು ನೋಡಿ ಕೆಲವರಾದರೂ ಶೈಕ್ಷಣಿಕವಾಗಿ ರೂಪಾಂತರಗೊಂಡರೆ ಈ ಚಿತ್ರಕ್ಕೆ ಒಂಬತ್ತು ತಿಂಗಳು ಹಾಕಿದ ಶ್ರಮಕ್ಕೆ ಸಾರ್ಥಕತೆ ಬರುತ್ತದೆ’ ಎನ್ನುವುದು ಅವರ ಅನಿಸಿಕೆ.

‘ಮದ್ದೂರಿನದೊಡ್ಡ ಅಬ್ಬಲೂರು ತೋಟ, ಶಾಲೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರಿನ ಪ್ರಜ್ಞಾ ಶಾಲೆ ಮತ್ತು ವಿವಿಧ ಶಾಲೆಗಳಿಂದ 9 ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಬಾಲ ನಟಓಜಸ್‌ ದೀಪ್‌ ವಿ. ಸೇರಿ ಎಲ್ಲ ಮಕ್ಕಳ ಅಭಿನಯ ಮತ್ತು ಅವರ ಗ್ರಹಿಕೆ ಅದ್ಭುತವಾಗಿದೆ. ಕಥೆಗೆ ಪೂರಕವಾಗಿ ಸಹಜ ಅಭಿನಯ ತೋರಿದ್ದಾರೆ. ಕಥೆ ಮತ್ತು ಪರಿಕಲ್ಪನೆಗೆ ನ್ಯಾಯ ಸಲ್ಲಿಸಿದ್ದಾರೆ. ಕೊರೊನಾ ಇಲ್ಲದಿದ್ದರೆ ಚಿತ್ರ ಬಿಡುಗಡೆ ಜುಲೈನಲ್ಲಿ ಆಗುತ್ತಿತ್ತು. ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ತೆರೆಗೆ ತರುವ ಆಲೋಚನೆ ಇದೆ. ಅಷ್ಟರಲ್ಲಿ ಚಿತ್ರಮಂದಿರಗಳು ಬಾಗಿಲು ತೆರೆಯದಿದ್ದರೆ ಓಟಿಟಿಯಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ. ಚಿತ್ರವನ್ನು ಪ್ರತಿ ಶಾಲಾ, ಕಾಲೇಜುಗಳಿಗೆ ತಲುಪಿಸುವ ಹಂಬಲವಿದೆ’ ಎನ್ನುವ ಮಾತು ಸೇರಿಸಿದರು.

ದೀಪಾಂಕರ್‌ ಫಿಲ್ಮ್ಸ್ ಬ್ಯಾನರ್‌ನಡಿಎಚ್‌. ವಾಸುಪ್ರಸಾದ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಪಿ.ವಿ.ಆರ್‌.ಸ್ವಾಮಿ, ಸಂಗೀತ ಸುರೇಶ್‌ ಮತ್ತು ಉಪಾಸನಾ ಮೋಹನ್‌, ಸಂಕಲನ ಓಂಕಾರಮೂರ್ತಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT