ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾಸ್‌ ನಟನೆಯ ‘ಆದಿಪುರುಷ್‌’ ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ನಟನೆ?

Last Updated 29 ಆಗಸ್ಟ್ 2020, 10:07 IST
ಅಕ್ಷರ ಗಾತ್ರ

ನಿರ್ದೇಶಕ ಓಂ ರಾವುತ್‌ ಮತ್ತು ನಟ ಪ್ರಭಾಸ್‌ ಕಾಂಬಿನೇಷನ್‌ನಡಿ ‘ಆದಿಪುರುಷ್‌’ ಸಿನಿಮಾ ಮೂಡಿಬರುತ್ತಿದೆ. 3ಡಿ ತಂತ್ರಜ್ಞಾನದಡಿ ನಿರ್ಮಾಣವಾಗುತ್ತಿರುವ ಚಿತ್ರ ಇದು. ಹಿಂದಿ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುವ ಈ ಸಿನಿಮಾ ಬಳಿಕ ಕನ್ನಡ, ತಮಿಳು, ಮಲಯಾಳ ಸೇರಿದಂತೆ ಕೆಲವು ವಿದೇಶಿ ಭಾಷೆಗಳಿಗೂ ಡಬ್‌ ಆಗಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಅಂದಹಾಗೆ ಇದಕ್ಕೆ ಬಂಡವಾಳ ಹೂಡಿರುವುದು ಟಿ ಸೀರಿಸ್‌ನ ಭೂಷಣ್‌ ಕುಮಾರ್‌.

ಈ ಎಪಿಕ್‌ ಡ್ರಾಮಾಕ್ಕೆ ‘ರಾಮಾಯಣ’ ಮಹಾಗ್ರಂಥವೇ ಪ್ರೇರಣೆ. ಇದರಲ್ಲಿ ಪ್ರಭಾಸ್‌ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಸೀತೆಯಾಗಿ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ರಾವಣನ ಪಾತ್ರದಲ್ಲಿ ಬಿಟೌನ್ ನಟ ಸೈಫ್‌ ಅಲಿ ಖಾನ್‌ ನಟಿಸುವ ಸಾಧ್ಯತೆಯಿದೆಯಂತೆ. ಆದರೆ, ಪ್ರಭಾಸ್‌ ಹೊರತಾಗಿ ಸಿನಿಮಾದ ಪಾತ್ರವರ್ಗ ಮತ್ತು ತಂತ್ರಜ್ಞರ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

ಇತ್ತೀಚೆಗೆ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ರಾಮಮಂದಿರ’ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಸುಮಾರು ₹ 500 ಕೋಟಿ ವೆಚ್ಚದಡಿ ನಿರ್ಮಾಣವಾಗುತ್ತಿರುವ ‘ಆದಿಪುರುಷ್‌’ ಸಿನಿಮಾದಲ್ಲಿ ಪ್ರಧಾನಿ ಭಾಗವಹಿಸಿದ್ದ ಈ ಶಿಲಾನ್ಯಾಸ ಕಾರ್ಯಕ್ರಮದ ದೃಶ್ಯಗಳನ್ನು ಬಳಸಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಿಂದ ಕೇಳಿಬರುತ್ತಿದೆ.

ಹಾಗಾಗಿ, ನರೇಂದ್ರ ಮೋದಿ ಅವರೂ ಈ ಚಿತ್ರದ ಒಂದು ಭಾಗವಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಚಿತ್ರತಂಡ ಮಾತ್ರ ರಾಮಮಂದಿರದ ಶಿಲಾನ್ಯಾಸದ ದೃಶ್ಯಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

‘ಆದಿಪುರುಷ್’ ಸಿನಿಮಾದ ಶೇಕಡ ಅರ್ಧದಷ್ಟು ದೃಶ್ಯಗಳನ್ನು ವಿಎಫ್ಎಕ್ಸ್‌ ತಂತ್ರಜ್ಞಾನ ಬಳಸಿಕೊಂಡು ಚಿತ್ರೀಕರಿಸಲಾಗುತ್ತದೆ. ಹಾಗಾಗಿ, ನಿರ್ಮಾಣದ ಅರ್ಧದಷ್ಟು ಬಜೆಟ್‌ ವಿಎಫ್‌ಎಕ್ಸ್‌ ಭಾಗದ ಚಿತ್ರೀಕರಣಕ್ಕೆ ವೆಚ್ಚವಾಗಲಿದೆಯಂತೆ. 2022ಕ್ಕೆ ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT