ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಗ್ರಹ ಸುಂದರಿಯ ಕ್ರೌರ್ಯ ಕಥೆ

Last Updated 1 ಜೂನ್ 2019, 20:15 IST
ಅಕ್ಷರ ಗಾತ್ರ

ಚಿತ್ರ: ಸುವರ್ಣ ಸುಂದರಿ
ನಿರ್ಮಾಣ:
ಎಂ.ಎಲ್.ಲಕ್ಷ್ಮಿ
ನಿರ್ದೇಶನ: ಸೂರ್ಯ ಎಂ.ಎಸ್.ಎನ್
ತಾರಾಗಣ: ಸಾಕ್ಷಿ ಚೌಧರಿ, ಪೂರ್ಣ, ಜಯಪ್ರದಾ, ಅವಿನಾಶ್, ಸಾಯಿಕುಮಾರ್

ಭಯಾನಕತೆ, ಪುನರ್ಜನ್ಮ, ಪ್ರೇತ ಚೇಷ್ಟೆ, ಪಾಳು ಬಂಗಲೆ ಇವೆಲ್ಲ ಟಿಪಿಕಲ್ ಹಾರರ್ ಥ್ರಿಲ್ಲರ್ ಸಿನಿಮಾಗಳ ಕಥಾತಂತ್ರಗಳು. ಇದೇ ಸೂತ್ರ ಇಟ್ಟುಕೊಂಡು ನಿರ್ಮಾಣವಾದರೂ ಭಿನ್ನ ಆಯಾಮಗಳ ಕಥಾ ನಿರೂಪಣೆಯಿಂದ ‘ಸುವರ್ಣ ಸುಂದರಿ’ ಸಿನಿಮಾ ಗಮನ ಸೆಳೆಯುತ್ತದೆ‌.

ಸೂರ್ಯ ಎಂ.ಎಸ್‌. ಎನ್. ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಪ್ರೇಕ್ಷಕರ ಕುತೂಹಲವನ್ನು ಚಿತ್ರದ ಕೊನೆಯವರೆಗೆ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ‌. ದೇವಿ ವಿಗ್ರಹವೊಂದಕ್ಕೆ ಸಂಬಂಧಿಸಿದ ಕಥಾವಸ್ತು ಇಟ್ಟುಕೊಂಡು ಭೂತಕಾಲದಲ್ಲಿ ನಡೆದ ಮತ್ತು ವರ್ತಮಾನದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಸಮನಾಗಿ ವಿವರಿಸುತ್ತಾ ಚಿತ್ರದ ಕಥೆ ಮುನ್ನಡೆಯುತ್ತದೆ.

ಭಯ ಹುಟ್ಟಿಸುವ ದೃಶ್ಯಗಳು ದೀರ್ಘ ಎನಿಸಿದರೂ ಕಥೆ ಎಲ್ಲಿಯೂ ಹಾದಿ ತಪ್ಪದಂತೆ ನಿರ್ದೇಶಕರು ಎಚ್ಚರಿಕೆ ವಹಿಸಿದ್ದಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಚಿತ್ರವು 300 ವರ್ಷಗಳಷ್ಟು ಹಿಂದಿನ ಕಥೆಯ ಎಳೆಯೊಂದಿಗೆ ಆರಂಭವಾಗುತ್ತದೆ. ಕೊನೆಗೆ 15ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ.

ಚಿನ್ನದ ದೇವಿ ವಿಗ್ರಹವೊಂದು, ಅದು ಯಾರಿಗೆ ಸಿಗುತ್ತದೋ ಅವರಿಗೆ ಕೆಡುಕು ಉಂಟು ಮಾಡುತ್ತದೆ. ಎಷ್ಟೇ ಕಾಲ ಕಳೆದರೂ ಆ ವಿಗ್ರಹದ ಈ ಗುಣ ಬದಲಾಗುವುದಿಲ್ಲ. ಇದು ಬೇರೆ, ಬೇರೆ ಕಾಲಘಟ್ಟಗಳಲ್ಲಿ ಹೇಗೆ ಜನರನ್ನು ಕಾಡಿದೆ ಎಂಬುದೇ ಈ ಚಿತ್ರದ ಕಥಾ ಹಂದರ.

ಈ ಸಿನಿಮಾವು 1997ರಲ್ಲಿ ಬಿಡುಗಡೆಯಾಗಿದ್ದ ಮಲಯಾಳದ ‘ಜೂನಿಯರ್ ಮ್ಯಾಂಡ್ರಿಕ್’ ಸಿನಿಮಾವನ್ನು ನೆನಪಿಸುತ್ತದೆ. ಅಲ್ಲೂ ವಿಗ್ರಹವೇ ಪ್ರಮುಖ ಕಥಾವಸ್ತು. ಹಿರಿಯ ನಟಿ ಜಯಪ್ರದಾ ಅವರ ಅಭಿನಯ ಚಿತ್ರಕ್ಕೆ ಹೆಚ್ಚು ತೂಕ ತಂದುಕೊಟ್ಟಿದೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಸಾಯಿ ಕುಮಾರ್ ಕೂಡ ಮೋಡಿ ಮಾಡುತ್ತಾರೆ.

ಸಣ್ಣ ಪಾತ್ರದಲ್ಲಿ ನಟಿಸಿದ್ದರೂ ಅವಿನಾಶ್ ಹಾಗೂ ತಿಲಕ್ ಗಮನ ಸೆಳೆಯುತ್ತಾರೆ. ಚಿತ್ರದಲ್ಲಿ ವಿಷುವಲ್ ಎಫೆಕ್ಟ್ ಸುಂದರವಾಗಿ ಮೂಡಿ ಬಂದಿದೆ. ಫ್ಲ್ಯಾಶ್‌ಬ್ಯಾಕ್‌, ಅತಿಮಾನುಷ ಅಂಶಗಳ ಹಾವಳಿ ಇತರ ಹಾರರ್ ಚಿತ್ರಗಳಂತೆ ಇದರಲ್ಲೂ ಇದೆ. ಹಾಡುಗಳು ಆಪ್ತ ಎನಿಸಿದರೂ ಗಂಭೀರ ಕಥಾ ನಿರೂಪಣೆಯ ನಡುವೆ ಕೆಲವೆಡೆ ಅನಗತ್ಯ ತುರುಕಿದಂತೆ ಭಾಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT