ಶನಿವಾರ, ಮೇ 28, 2022
30 °C

ಎಂ.ಎಸ್‌.ಧೋನಿ ಸಿನಿಮಾದ ನಟ ಸಂದೀಪ್‌ ನಾಹರ್‌ ಆತ್ಮಹತ್ಯೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಎಂ.ಎಸ್‌.ಧೋನಿ ಚಿತ್ರದಲ್ಲಿ ಸಂದೀಪ್‌ ನಾಹರ್‌ ಮತ್ತು ಸುಶಾಂತ್‌ ಸಿಂಗ್‌

ಮುಂಬೈ: ಸುಶಾಂತ್‌ ಸಿಂಗ್‌ ರಜಪೂತ್‌ ಅಭಿನಯದ 'ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ' ಚಿತ್ರದಲ್ಲಿ ನಟಿಸಿದ್ದ ಸಂದೀಪ್‌ ನಾಹರ್‌ ಸೋಮವಾರ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೀವನ ಅಂತ್ಯ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಟ ಸಂದೀಪ್‌ ನಾಹರ್‌ ಫೇಸ್‌ಬುಕ್‌ನಲ್ಲಿ ಸುದೀರ್ಘ ಬರಹದ ಪೋಸ್ಟ್‌ ಮತ್ತು ವಿಡಿಯೊ ಹಂಚಿಕೊಂಡಿದ್ದರು. ಪೋಸ್ಟ್‌ ಪ್ರಕಾರ, ಅವರು ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಮುಂಬೈನಲ್ಲಿ ವಾಸ್ತವಿದ್ದ ಚಂಡೀಗಢ ಮೂಲದ ನಾಹರ್‌, ಸ್ಯಾಂಡಿ ಎಂದೇ ಪರಿಚಿತರಾಗಿದ್ದರು.

ಆತ್ಮಹತ್ಯೆಗೆ ಸುಮಾರು ಮೂರು ಗಂಟೆಗೂ ಮುನ್ನ ವಿಡಿಯೊ ಪೋಸ್ಟ್‌ ಮಾಡಿರಬಹುದೆಂದು ಪೊಲೀಸರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

30 ವರ್ಷ ವಯೋಮಾನದ ನಟ ನಾಹರ್‌, ಮುಂಬೈ ಉಪನಗರದ ಗೋರೆಗಾಂನಲ್ಲಿರುವ ಪ್ಲ್ಯಾಟ್‌ನಲ್ಲಿ ರಾತ್ರಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಪತ್ನಿ ಕಾಂಚನ್‌ ಮತ್ತು ಸ್ನೇಹಿತರು ಎಸ್‌ವಿಆರ್‌ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲೇ ಆತ್ಮಹತ್ಯೆ ಪತ್ರ ಮತ್ತು ಒಂಬತ್ತು ನಿಮಿಷಗಳ ವಿಡಿಯೊ ಅನ್ನು ನಾಹರ್‌ ಪ್ರಕಟಿಸಿದ್ದರು. ಅದರಲ್ಲಿ ಅವರ ಹೆಂಡತಿ ಮತ್ತು ಬಾಲಿವುಡ್‌ನಲ್ಲಿನ ರಾಜಕೀಯದ ಕುರಿತು ಆರೋಪಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಎಂ.ಎಸ್‌.ಧೋನಿ ಚಿತ್ರದಲ್ಲಿ ಕ್ರಿಕೆಟಿಗ ಧೋನಿಯ ಸ್ನೇಹಿತನ ಪಾತ್ರದಲ್ಲಿ ಮೆಚ್ಚುಗೆ ಪಡೆದಿದ್ದರು. ಅಕ್ಷಯ್‌ ಕುಮಾರ್‌ ನಾಯಕನಾಗಿರುವ ಕೇಸರಿ ಚಿತ್ರದಲ್ಲಿ ಬ್ರಿಟಿಷ್‌ ಭಾರತೀಯ ಸೇನೆಯ ಸಿಖ್ ಸೈನಿಕನ ಪಾತ್ರದಲ್ಲಿ ಅಭಿನಯಿಸಿದ್ದರು.

ಅವರ ವಿಡಿಯೊ ಮತ್ತು ಫೇಸ್‌ಬುಕ್‌ ಪೋಸ್ಟ್‌ ಆಧಾರದಲ್ಲಿ ನಾಹರ್‌ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

'ಹೆಂಡತಿ ಜೊತೆಗೆ ಸದಾ ಜಗಳ, ಆಕೆ ಮತ್ತು ಅತ್ತೆಯಿಂದ ನಿರಂತರವಾಗಿ ಕಿರುಕುಳ ಹಾಗೂ ಬೆದರಿಕೆ ಅನುಭವಿಸುತ್ತಿರುವ ಕುರಿತು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಬಹಳ ಹಿಂದೆಯೇ ನಾನು ಆತ್ಮಹತ್ಯೆಗೆ ಶರಣಾಗಬೇಕಿತ್ತು, ಆದರೆ ಸಮಯ ಮುಂದುವರಿದಂತೆ ಪರಿಸ್ಥಿತಿ ಸುಧಾರಿಸಬಹುದೆಂಬ ಭರವಸೆ ಇತ್ತು. ಆದರೆ, ಅದು ಅವರು ಬದಲಾಗಿಲ್ಲ. ಈ ನಿರ್ಧಾರದ ಬಳಿಕ ನನಗೆ ಏನಾಗುವುದೋ ತಿಳಿಯದು, ಈಗ ಬದುಕಿನಲ್ಲಂತೂ ನರಕು ಅನುಭವಿಸುತ್ತಿದ್ದೇನೆ.'

'ನನ್ನದು ಒಂದೇ ಮನವಿ, ನಾನು ಇಲ್ಲವಾದ ಬಳಿಕ, ದಯಮಾಡಿ ಕಾಂಚನ್‌ಗೆ (ಹೆಂಡತಿ) ಏನೂ ಹೇಳಬೇಡಿ, ಅವಳನ್ನು ನೋಡಿಕೊಳ್ಳಿ' ಎಂದು ನಾಹರ್‌ ವಿಡಿಯೊದಲ್ಲಿ ಹೇಳಿದ್ದಾರೆ.

ಪೋಸ್ಟ್‌ ಬರಹದಲ್ಲಿ ಬಾಲಿವುಡ್‌ನಲ್ಲಿರುವ 'ರಾಜಕೀಯ', ವೃತ್ತಿಪರತೆ ಇಲ್ಲದೆ ನಡೆಸುವ ಕಾರ್ಯಗಳು, ಅಲ್ಲಿ ಭಾವಶೂನ್ಯರಾಗಿ ಕಾರ್ಯನಿರ್ವಹಿಸುವ ಜನರು, ತಾನು ಅನುಭವಿಸಿದ ಸಂಕಟಗಳ ಕುರಿತು ಬಿಚ್ಚಿಟ್ಟಿದ್ದಾರೆ.

ನಾಹರ್‌ ಸಾವಿನ ಬಗ್ಗೆ ತಿಳಿಯಲು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು