ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಕರ ಇವ ಭೋರ್ಗರ...: ಕೆಜಿಎಫ್‌ ಸಿನಿಮಾ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಂದರ್ಶನ

Last Updated 6 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

‘ಕೆಜಿಎಫ್‌ ಚಾಪ್ಟರ್‌ 1’ ಚಿತ್ರದ ಸಂಗೀತ ಸಂಯೋಜನೆಗಾಗಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದ ರವಿ ಬಸ್ರೂರ್ ಎರಡನೇ ಭಾಗಕ್ಕೆ ಸಂಗೀತ ನೀಡುವಲ್ಲಿ ಮುಳುಗಿದ್ದಾರೆ. ಇದರ ಸಂಗೀತ ಸಂಯೋಜನೆಯ ಕೆಲಸ ಶೇಕಡ 60ರಷ್ಟು ಪೂರ್ಣಗೊಂಡಿದೆ.

***

ರವಿ ಬಸ್ರೂರ್‌ ಹೆಸರು ಕೇಳಿದಾಕ್ಷಣ ‘ಕೆಜಿಎಫ್‌ ಚಾಪ್ಟರ್‌ 1’ ಸಿನಿಮಾದ ‘ಭೀಕರ ಇವ ಭೋರ್ಗರ...’ ಸೇರಿದಂತೆ ಹಿನ್ನೆಲೆ ಸಂಗೀತದ ಹಲವು ಸಣ್ಣ ತುಣುಕುಗಳು ಕಿವಿಯಲ್ಲಿ ಗುನುಗುತ್ತವೆ. ಇವು ಅವರೊಳಗಿನ ಸಂಗೀತದ ಪ್ರತಿಭೆಗೆ ಸಾಕ್ಷಿಯಾಗಿವೆ. ಮೊದಲ ಅಧ್ಯಾಯದಲ್ಲಿ ಹೊಸತನದ ಸಂಗೀತ ಉಣಬಡಿಸಿದ್ದ ಅವರು, ಎರಡನೇ ಭಾಗದಲ್ಲೂ ಕೇಳುಗರಿಗೆ ಹಿತವಾದ ಸಂಗೀತ ನೀಡುವ ಕೆಲಸದಲ್ಲಿ ಮುಳುಗಿದ್ದಾರೆ.

ನಿರ್ದೇಶಕ ಪ್ರಶಾಂತ್‌ ನೀಲ್‌ ಮತ್ತು ನಟ ಯಶ್‌ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಮೇಲೆ ಕುತೂಹಲ ಇಮ್ಮಡಿಗೊಂಡಿದೆ. ಇದರ ಸಂಗೀತ ಸಂಯೋಜನೆಯ ಕೆಲಸ ಶೇಕಡ 60ರಷ್ಟು ಪೂರ್ಣಗೊಂಡಿದೆಯಂತೆ. ಆ ಬಗ್ಗೆ ರವಿ ಬಸ್ರೂರ್‌ ವಿವರಿಸುವುದು ಹೀಗೆ; ‘ಈಗ ಪೂರ್ಣಗೊಂಡಿರುವ ಕೆಲಸ ಮತ್ತೆ ಯಾವಾಗ ಬದಲಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಮೊದಲ ಅಧ್ಯಾಯದ ಬಿಡುಗಡೆಯ ಹಿಂದಿನ ದಿನವೂ ಸಾಹಿತ್ಯ, ಸಂಗೀತ ಬದಲಾಗಿತ್ತು. ಯಾವುದೇ ಹಾಡನ್ನೂ ಅಂತಿಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಬಾಕಿ ಇರುವ ಕೆಲಸ ಮುಗಿದಾಗಲಷ್ಟೇ ಅದು ಸರಿಯಾಗಿದೆಯೋ ಅಥವಾ ಇಲ್ಲವೋ ಎಂದು ಹೇಳಲು ಸಾಧ್ಯ’.

‘ಚಾಪ್ಟರ್ 1’ರಲ್ಲಿ ‘ಧೀರ... ಧೀರ...’ ಹಾಡು ಇತ್ತು. ಈ ಸಾಂಗ್‌ ಎರಡನೇ ಅಧ್ಯಾಯದಲ್ಲೂ ಇರಲಿದ್ದು, ಪೂರ್ಣವಾಗಿ ಮೂಡಿಬರಲಿದೆಯಂತೆ. ‘ಚಾಪ್ಟರ್‌ 2ರಲ್ಲಿ ಎಷ್ಟು ಹಾಡುಗಳಿವೆ ಎಂದು ಈಗಲೇ ಹೇಳಲು ಆಗುವುದಿಲ್ಲ. ದೃಶ್ಯಗಳ ಮೇಲೆ ಹಾಡುಗಳು ಹುಟ್ಟುತ್ತವೆ. ಮೊದಲ ಅಧ್ಯಾಯದ ಶೂಟಿಂಗ್‌ನ ಆರಂಭದಿಂದಲೂ ಸಂಗೀತದ ಕೆಲಸ ಶುರು ಮಾಡಿದ್ದೆ. ಚಾಪ್ಟರ್‌ 2ರಲ್ಲೂ ಅದೇ ರೀತಿಯ ಕೆಲಸ ನಡೆಯುತ್ತಿದೆ’ ಎಂಬುದು ಅವರ ವಿವರಣೆ.

‘ಪ್ರತಿಯೊಂದು ಸಿನಿಮಾಕ್ಕೂ ಸಂಗೀತ ನಿರ್ದೇಶಕರು ಶ್ರಮವಹಿಸಿ ದುಡಿಯುತ್ತಾರೆ. ಒಳ್ಳೆಯ ಸಂಗೀತ ನೀಡಲು ಹಗಲಿರುಳು ಶ್ರಮಿಸುತ್ತಾರೆ. ಆದರೆ, ನಾವು ನೀಡಿದ ಸಂಗೀತವನ್ನು ಸೂಪರ್‌ ಹಿಟ್‌ ಮಾಡುವುದು ಪ್ರೇಕ್ಷಕರು. ನಮ್ಮ ಕೈಯಲ್ಲಿ ಏನೂ ಇಲ್ಲ’ ಎನ್ನುವುದು ಅವರ ಅಭಿಮತ.

ಪ್ರೇಕ್ಷಕರು ಮತ್ತು ಸಂಗೀತ ನಿರ್ದೇಶಕನ ಸಂಬಂಧದ ಬಗ್ಗೆ ಅವರಲ್ಲಿ ಸ್ಪಷ್ಟತೆಯಿದೆ. ‘ಚಾಪ್ಟರ್‌ 2ರಲ್ಲಿ ಏನನ್ನು ಕೊಡುತ್ತೇನೆ ಎಂದು ಈಗಲೇ ಹೇಳಿದರೆ ಅದು ಉಡಾಫೆಯಾಗುತ್ತದೆ. ಅದು ಸರಿಯೂ ಅಲ್ಲ. ಕೊಡುವುದಷ್ಟೇ ನನ್ನ ಕೆಲಸ. ನನ್ನ ಮತ್ತು ವೀಕ್ಷಕರ ನಡುವಿನ ಸಂಬಂಧ ಕೇವಲ ಕಿವಿಗಳು ಮತ್ತು ಕಣ್ಣುಗಳಿಗಷ್ಟೇ ಸೀಮಿತ. ಬಾಯಲ್ಲಿ ನನಗೂ ಮತ್ತು ವೀಕ್ಷಕರಿಗೂ ಮಾತೇ ಇರುವುದಿಲ್ಲ. ಹಾಗಿದ್ದರೆ ಚೆನ್ನಾಗಿರುತ್ತದಲ್ಲವೇ’ ಎಂದು ನಗುತ್ತಾರೆ.

‘ನಾನು ಈಗಲೇ ಮಾತನಾಡಲು ಹೋದರೆ ತಪ್ಪಾಗುತ್ತದೆ. ಚಿತ್ರದ ಬಿಡುಗಡೆಗೂ ಮುನ್ನವೇ ದೊಡ್ಡದಾಗಿ ಹೇಳಿಬಿಟ್ಟ. ಈಗ ಅದರಲ್ಲಿ ಏನಿದೆ ಎನ್ನುವ ಪ್ರಶ್ನೆಗಳು ಜನ್ಮ ತಾಳುತ್ತವೆ. ಸಂಗೀತ ನೀಡಿ ಕೈಕಟ್ಟಿಕೂರುವುದಷ್ಟೆ ನನ್ನ ಕೆಲಸ’ ಎನ್ನುತ್ತಾರೆ ಅವರು.

ರವಿ ಬಸ್ರೂರ್‌ ನಿರ್ದೇಶಿಸಿದ ‘ಗಿರ್ಮಿಟ್‌’ ಚಿತ್ರ ಪಂಚಭಾಷೆಯಲ್ಲಿ ಬಿಡುಗಡೆಯಾಗಿತ್ತು. ಅವರಿಗೆ ಮತ್ತೊಂದು ಹೊಸ ಸಿನಿಮಾ ನಿರ್ದೇಶಿಸುವ ಯೋಜನೆಯೂ ಇದೆಯಂತೆ. ಆದರೆ, ‘ಕೆಜಿಎಫ್‌ ಚಾಪ್ಟರ್‌ 2’ ಕೆಲಸ ಪೂರ್ಣಗೊಂಡ ನಂತರವಷ್ಟೇ ಮತ್ತೆ ನಿರ್ದೇಶನದತ್ತ ಹೊರಳುವ ಇರಾದೆ ಅವರದ್ದು.

‘ಕೋವಿಡ್‌– 19 ಪರಿಣಾಮ ಎಲ್ಲಾ ಕ್ಷೇತ್ರದ ಜನರು ತೊಂದರೆಗೆ ಸಿಲುಕಿದ್ದಾರೆ. ಸಿನಿಮಾ ಕ್ಷೇತ್ರ ಇದರಿಂದ ಹೊರತಲ್ಲ. ಸದ್ಯಕ್ಕೆ ಕೆಜಿಎಫ್‌ ಚಾಪ್ಟರ್‌ 2ರ ಯಾವುದೇ ಹಾಡು ಬಿಡುಗಡೆ ಮಾಡುತ್ತಿಲ್ಲ. ಚಿತ್ರತಂಡ ಪೋಸ್ಟರ್‌ಗಳನ್ನಷ್ಟೇ ಬಿಡುಗಡೆ ಮಾಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಈಗ ಅನಿವಾರ್ಯ. ಹಾಗಾಗಿ, ಎಲ್ಲರೂ ಒಟ್ಟಾಗಿ ಸೇರಲು ತೊಡಕಾಗಿದೆ. ತಲೆಯಲ್ಲಿ ಕೊರೊನಾವೇ ತುಂಬಿಕೊಂಡಿದೆ. ಹಾಗಾಗಿ, ಕ್ರಿಯೇಟಿವಿಟಿಗೆ ಜಾಗ ಎಲ್ಲಿದೆ’ ಎಂದು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT