ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕೆ ಗುರ್ರ್ ಎಂದ ಗುರುಕಿರಣ್‌

Last Updated 27 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಗುಂ‌ ಗುರು ಕೂದಲು, ಸದಾ ನಗುವ ಕಣ್ಣುಗಳು ಮತ್ತು ದೊಡ್ಡದೊಂದು ನಗೆ..

ಇದು ಗುರುಕಿರಣ್‌ ಟ್ರೇಡ್‌ಮಾರ್ಕ್‌. ಆದರೆ ಸಂಗೀತ ನಿರ್ದೇಶನದ ವಿಷಯಕ್ಕೆ ಬಂದರೆ ಗುರು ತುಂಬ ವಿಭಿನ್ನ. ಅಲ್ಲಿ ಸಂಗೀತ ಉಪಕರಣಗಳ ಜೊತೆಗಿನ ಸರಸಕ್ಕೇ ಹೆಚ್ಚು ಆದ್ಯತೆ. ಜೊತೆಗೆ ಮಾಧುರ್ಯದ ಮೋಹ. ಕನ್ನಡ ಚಿತ್ರರಂಗದ ವಿಶಿಷ್ಟ ಗುರುಪರಂಪರೆಯೊಂದರ ಕೊನೆಯ ಕೊಂಡಿ ಈ ಗುರುಕಿರಣ್‌. ಹಂಸಲೇಖ ತನ್ನದೇ ಆದ ಸಂಗೀತದಾರಿಯೊಂದನ್ನು ನಿರ್ಮಿಸಿದರು. ಆ ದಾರಿಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆದವರು ಅವರ ಶಿಷ್ಯ ವಿ.ಮನೋಹರ್‌. ಗುರುಕಿರಣ್‌ ಮನೋಹರ್‌ ಅವರ ಶಿಷ್ಯ. ಈ ಮೂರೂ ಮಂದಿ ಗುರುಶಿಷ್ಯರು ಒಬ್ಬರಿಗಿಂತ ಒಬ್ಬರು ಭಿನ್ನ ದಾರಿಯಲ್ಲಿ ನಡೆದಿರುವುದು ವಿಶೇಷ.

ಸಿನಿಮಾ ಸಂಗೀತ ನಿರ್ದೇಶಕ ಆಗುತ್ತೇನೆಂಬ ಯಾವ ನಿರ್ದಿಷ್ಟ ಗುರಿಯೂ ಗುರುಕಿರಣ್‌ಗೆ ಇರಲಿಲ್ಲ. ಬೆಂಗಳೂರಿಗೆ ಬಂದವರು ಮನೋಹರ್‌ರನ್ನು ಭೇಟಿಯಾದರು. ಅವರ ಜತೆಗೆ ಸಂಗೀತವೂ ಜತೆಯಾಯಿತು. ನೋಡನೋಡುತ್ತಾ ಗಾಂಧಿನಗರದಲ್ಲಿ 20 ವರ್ಷಗಳೇ ಉರುಳಿಹೋಗಿವೆ!

ಹೌದಲ್ಲವೇ! 20 ವರ್ಷಗಳ ನಂತರವೂ ಅದು ಹೇಗೆ ಇಷ್ಟೊಂದು ಬ್ಯುಸಿ ಆಗಿದ್ದೀರಿ?

ಗುರು– ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಶ್ರದ್ಧೆಯಿಂದ ಮಾಡಬೇಕು, ಏಕಕಾಲಕ್ಕೆ 2–3 ಕೆಲಸಗಳನ್ನು ಮಾಡಬಾರದು ಎನ್ನುವುದು ನನ್ನ ಪಾಲಿಸಿ. ಸಂಗೀತ ಕೈಹಿಡಿದಿದೆ. ಅದೇ ಒಂದು ಹುಚ್ಚಾಗಿದೆ. ಅದರಲ್ಲೇ ನಾನು ನೆಮ್ಮದಿಯಾಗಿದ್ದೇನೆ. ಅನ್ನ ಕಂಡುಕೊಂಡಿದ್ದೇನೆ. ಹಾಗಾಗಿ ಅದನ್ನೇ ಇನ್ನಷ್ಟು ಶ್ರದ್ಧೆಯಿಂದ ಮಾಡಬೇಕು, ಮಾಡುತ್ತಿದ್ದೇನೆ. ಇದರ ಮಧ್ಯೆ ನಿರ್ದೇಶನ, ನಿರ್ಮಾಣ ಎಂದೆಲ್ಲ ಬಂದರು. ಆದರೆ ನಾನು ಆ ಕಡೆಗೆ ಗಮನ ಕೊಟ್ಟಿಲ್ಲ.

ನಡುನಡುವೆ ಈ ಆ್ಯಕ್ಟಿಂಗ್‌ ಹುಚ್ಚು ಬೇರೆ ಇದ್ದಂಗಿದೆ?

ಇಲ್ಲ, ಇಲ್ಲ. ಅದು ಯಾರಾದರೂ ಕರೆದರೆ ಇಷ್ಟವಾದರೆ ಮಾತ್ರ ಮಾಡುತ್ತೇನೆ. ಸಣ್ಣ ಪಾತ್ರಗಳು. ಈ ಸೀಸನ್‌ನಲ್ಲೂ ನಾಲ್ಕೈದು ಮಂದಿ ಕರೆದರು. ಹೋಗಿಲ್ಲ.

ಈಗ ಏನೆಲ್ಲ ನಡೆದಿದೆ?

ರವಿಚಂದ್ರನ್‌ರ ಸಿನಿಮಾ ದಶರಥ ಮತ್ತು ಇನ್ನೊಂದು ಸಿನಿಮಾ ಕಾಲಚಕ್ರ ಎರಡಕ್ಕೂ ಸಂಗೀತ ನೀಡಿದ್ದೇನೆ. ಶ್ರೀವತ್ಸ ನಿರ್ದೇಶನದ, ದ್ವಾರಕೀಶ್ ಚಿತ್ರ ಬ್ಯಾನರ್‌ನ ಶಿವರಾಜ್‌ಕುಮಾರ್‌ ಅಭಿನಯದ ಇನ್ನೊಂದು ಚಿತ್ರದ ಸಂಗೀತ ಕೈಗೆತ್ತಿಕೊಂಡಿದ್ದೇನೆ.ಎರಡು ಸಿನಿಮಾಗಳಿಗೆ ಬ್ಯಾಕ್‌ಗ್ರೌಂಡ್ ಸಂಗೀತ, ಅದರಲ್ಲಿ ಒಂದು ಬಾಕಿ ಇದೆ. ನ್ಯೂರಾನ್ ಅಂತ ಇನ್ನೊಂದು ಹೊಸ ಚಿತ್ರದ ಸಂಗೀತ ಒಪ್ಪಿಕೊಂಡಿದ್ದೇನೆ.

ಬೆಳಿಗ್ಗೆ ಎಷ್ಟು ಹೊತ್ತಿಗೆ ಹಾಸಿಗೆಯಿಂದ ಏಳುತ್ತೀರಿ?

ಅಯ್ಯೊ.. ನನ್ನ ಕೆಲಸ ಸ್ಪೀಡ್‌ ಆಗೋದೇ ರಾತ್ರಿಗೆ. ಸಾಮಾನ್ಯವಾಗಿ ರಾತ್ರಿ ಎರಡು ಗಂಟೆವರೆಗೂ ಕೆಲಸ ಮಾಡುತ್ತೇನೆ. ಬೆಳಿಗ್ಗೆ ಏಳೂವರೆಗೆ ಏಳುವುದು.

ಕನ್ನಡದ ಸಿನಿಮಾ ಸಂಗೀತದಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಗಳೇನು?

ಡಿಜಿಟಲೈಸೇಷನ್‌ ಆದ ಬಳಿಕ ಸಿನಿಮಾ ಸಂಗೀತದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹಾಗೆಯೇ ಸಂಗೀತದ ಬಿಸಿನೆಸ್‌ನಲ್ಲೂ. ಹತ್ತು ವರ್ಷಗಳ ಹಿಂದೆ
ಮ್ಯೂಸಿಕ್‌ಗೆ ಒಟ್ಟು ಬಜೆಟ್‌ನ ಶೇಕಡಾ 30ರಷ್ಟು ಖರ್ಚು ಮಾಡುತ್ತಿದ್ದರು. ಈಗ ಪಾರದರ್ಶಕತೆ ಇಲ್ಲ, ಡೌನ್‌ಲೋಡ್ ಫ್ರೀ ಆದ್ದರಿಂದ ಪೈರಸಿ ಜಾಸ್ತಿಯಾಗಿದೆ. ಮ್ಯೂಸಿಕ್‌ನಿಂದ ನಿರ್ಮಾಪಕರಿಗೆ ಆದಾಯ ಕಡಿಮೆ ಆಯಿತು. ಹಾಗಾಗಿ ಸಂಗೀತದ ಬಜೆಟ್‌ಗೂ ಕಡಿವಾಣ ಬಿದ್ದಿದೆ. ಮುಂಚಿನಂತಲ್ಲ. ಈಗ ತುಂಬ ಜನ ಬರ‍್ತಿದಾರೆ. ಯಾರು ಬೇಕಾದ್ರೂ ಸಂಗೀತ ಮಾಡಬಹುದು. ಯಾವುದಾದರೂ ಮ್ಯೂಸಿಕ್ ನಡೀತದೆ. ಶೇಕಡಾ 70 ರಷ್ಟು ಸಿನಿಮಾ ಹೀಗೆಯೇ. ಶೇಕಡಾ 30ರಷ್ಟು ಸಿನಿಮಾದವರು ಗುಣಮಟ್ಟಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಮುಂಚೆ ವರ್ಷಕ್ಕೆ 80–90 ಸಿನಿಮಾ ಬರುತ್ತಿದ್ದರೆ ಈಗ 200 ಸಿನಿಮಾ ಬರುತ್ತಿದೆಯಲ್ಲ..

ಒಂದು ಕಾಲದಲ್ಲಿ ಕನ್ನಡದ ಸಿನಿಮಾ ಸಂಗೀತ ಎಲ್ಲ ವಯಸ್ಸಿನವರಿಗೂ ಟಚ್ ಆಗ್ತಿತ್ತು. ಈಗ ಯುವಜನರಿಗೆ ಮಾತ್ರ ಆಗಿದೆಯಾ?

ಎಲ್ಲಿ ಮಿಸ್ ಹೊಡೀತು ಎನ್ನುವುದು ನನಗೂ ಗೊತ್ತಾಗುತ್ತಿಲ್ಲ. ಆದರೆ ಒಳ್ಳೆಯ ಸಂಗೀತ ಕಳೆದುಹೋಗ್ತಿದೆ ಎನ್ನುವುದು ನಿಜ. ಹಾಡು ಚೆನ್ನಾಗಿದೆ ಅಂತಾರೆ, ಕೇಳ್ತಾರೆ. ಆದರೆ ಯಾವ ಪಿಕ್ಚರ್, ಯಾರು ಬರೆದವರು, ಯಾರು ಸಂಗೀತ ನೀಡಿದ್ದು ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಮೊದಲು ಹೀಗಿರಲಿಲ್ಲ, ಎಲ್ಲ ವಿವರಗಳೂ ಗೊತ್ತಿರುತ್ತಿದ್ದವು. ಎಫ್‌ಎಂ ನಲ್ಲೂ ಹರಟೆ, ಹಾಡು ಅಷ್ಟೆ. ವಿವರಗಳು ಇರುವುದಿಲ್ಲ. ಪ್ರಚಾರವೂ ಅಷ್ಟೆ, ದೊಡ್ಡ ಪಿಕ್ಚರ್ ಆದ್ರೆ ತನ್ನಷ್ಟಕ್ಕೆ ಪ್ರಚಾರ ಆಗುತ್ತೆ. ಸಣ್ಣ ಸಿನಿಮಾಗಳಲ್ಲಿ ಒಳ್ಳೆಯ ಹಾಡುಗಳು ಇದ್ದರೂ ಕಳೆದುಹೋಗ್ತವೆ. ಪ್ರಮೋಷನ್ ಇರುವುದಿಲ್ಲ. ಪಿಕ್ಚರೈಸೇಷನ್ ಸರಿಯಾಗಿ ಇಲ್ಲದಿರುವುದರಿಂದ, ಕೆಲವೊಮ್ಮೆ ದೊಡ್ಡ ನಟ ನಟಿಯರಿದ್ದರೆ ಮಾತ್ರ ಸಂಗೀತ ಗಮನ ಸೆಳೆಯುತ್ತದೆ.

ಆದರೆ, ಮೊಬೈಲ್ ಯುಗದಲ್ಲಿ ಹಾಡುಗಳು, ಸಂಗೀತದ ರೀಚ್ ಜಾಸ್ತಿ ಆಗಿದೆಯಲ್ಲ?

ಮುಂಚೆ ಡೌನ್‌ಲೋಡ್ ಪಿಸಿ ಯಲ್ಲಿ ಮಾತ್ರ ಇತ್ತು. ಈಗ ಮೊಬೈಲ್‌ನಲ್ಲೇ ಎಲ್ಲವೂ. ಹಿಂದೆ ಬಿಸಿನೆಸ್ ಪ್ಯಾಟರ್ನ್ ಸರಿ ಇತ್ತು. ಒಂದು ಲಕ್ಷ ಸಿ.ಡಿ ಮಾರಾಟವಾದರೆ ಮ್ಯೂಸಿಕ್ ಕಂಪೆನಿಗೆ ಎಷ್ಟು ಬರುತ್ತೆ, ನಿರ್ದೇಶಕನಿಗೆ ಎಷ್ಟು ಬರುತ್ತೆ ಎನ್ನುವುದೆಲ್ಲ ನಿಚ್ಚಳವಾಗಿ ಇರುತ್ತಿತ್ತು. ಈಗ ರೆವಿನ್ಯೂ ಟ್ರಾನ್ಸ್‌ಪರೆನ್ಸಿ ಇಲ್ಲ. ಯೂಟ್ಯೂಬ್‌ನಲ್ಲಿ ಎಷ್ಟು ಜನ ನೋಡಿದ್ದಾರೆ ಎಂದು ಗೊತ್ತಾಗುತ್ತದೆ. ಆದರೆ ಅಂತರ್ಜಾಲದಲ್ಲಿ ಹಾಗಿಲ್ಲ. ಹತ್ತು ಹಾಡುಗಳೂ ಟಾಪ್ ಟೆನ್. ಆದರೆ ಅದರಲ್ಲಿ ಜನ ಯಾವ ಹಾಡುಗಳನ್ನು ಹೆಚ್ಚು ಕೇಳುತ್ತಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಹಿಂದೆ ಸಭೆ ಸಮಾರಂಭಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಯಾವ ಹಾಡು ನಡೀತಿದೆ ಎನ್ನುವುದು ಗೊತ್ತಾಗುತ್ತಿತ್ತು.

ಈಗ ವರ್ಷಕ್ಕೆ 200 ಹಾಡುಗಳು ಓಡ್ತಾ ಇರುತ್ತವೆ. ಆದರೆ ನಿಜಕ್ಕೂ ಯಾವುದು ಹಿಟ್, ಯಾವುದು ಫ್ಲಾಪ್ ಎನ್ನುವುದು ಗೊತ್ತಾಗುವುದಿಲ್ಲ. ಆದರೆ ಇದೊಂದು ಪಾಸಿಂಗ್ ಸ್ಟೇಜ್. ಇಂಡಿಯಾದಲ್ಲಿ ಸಿನಿಮಾದ ಅವಿಭಾಜ್ಯ ಅಂಗ ಸಂಗೀತ. ಅದಿದ್ದರೆ ಜನ ಸಿನಿಮಾಕ್ಕೆ ಬೇಗ ಕನೆಕ್ಟ್ ಆಗ್ತಾರೆ. ಮುಂಚೆಯೆಲ್ಲ ನಿರ್ದೇಶಕರೆಂದರೆ 5–6 ಜನರ ಹೆಸರು ಹೇಳಬಹುದಿತ್ತು. ಈಗ ಐದು ವರ್ಷದಿಂದ ಪ್ರತಿ ಗಲ್ಲಿಯಲ್ಲೂ ಒಬ್ಬ ಮ್ಯೂಸಿಕ್ ಡೈರೆಕ್ಟರ್ ಇದ್ದಾನೆ. ೨೦೦ ಚಿತ್ರಗಳಲ್ಲಿ ಕಡಿಮೆ ಎಂದರೂ 90–100 ಜನ ಸಂಗೀತ ನಿರ್ದೇಶಕರು. ಯಾರು ಏನು ಮಾಡಿದರು ಎನ್ನುವುದು ಗೊತ್ತಾಗುವುದೇ ಇಲ್ಲ.

ಉಪೇಂದ್ರ ಜತೆಗೆ ನಿಮ್ಮದು ಯಶಸ್ವೀ ಜೊತೆಯಾಟ. ಇತ್ತೀಚೆಗೆ ಈ ಜೋಡಿ ಕಾಣಿಸ್ತಾ ಇಲ್ಲವಲ್ಲ?

ಅವರು ನಟ. ಅವರ ಪ್ರಾಜೆಕ್ಟ್ ಮಾಡ್ತಾರೆ. ನಾನು ನನ್ನ ಸಂಗೀತ ಮಾಡ್ತೇನೆ. ಇಬ್ಬರನ್ನೂ ಹಾಕಿಕೊಳ್ಳುವ ನಿರ್ಮಾಪಕರು ಬೇಕು. ಹಿಂದೆ ನಾವು ಜತೆಗೆ ಮಾಡಿದ್ದೆಲ್ಲ ಹಿಟ್ ಆಗಿದೆ. ಈಗ ಅವರಿಗೆ ರಾಜಕೀಯದ ಕನಸು ಬಿದ್ದಿದೆ.ಏನೇನೋ ಮಾಡಬೇಕು ಎನ್ನುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ನನ್ನ ಪ್ರಕಾರ ಇಂಡಸ್ಟ್ರಿ ಅವರನ್ನು ಮಿಸ್ ಮಾಡಿಕೊಳ್ತಿದೆ.

ಉಪೇಂದ್ರ ಅವರ ರಾಜಕೀಯ ಯಶಸ್ವಿ ಆಗುತ್ತಾ?

ನನಗೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲ , ಅದು ಇಷ್ಟವೂ ಇಲ್ಲ. ಅವರದ್ದು ಏನೇನೋ ಲೆಕ್ಕಾಚಾರ ಇದೆ. ಆದರೆ ನನಗೆ ಕೇಳಿದರೆ ನಾನು ಇನ್‌ವಾಲ್ವ್ ಆಗುವುದಿಲ್ಲ. ನನ್ನ ಪ್ರಕಾರ,ಬರೀ ಐಡಿಯಾಗಳನ್ನು ಕೇಳಿ ಜನ ವೋಟ್ ಮಾಡಲ್ಲ. ಯಾರೂ ಒಳ್ಳೆಯವನು ಅಂತ ಜನ ವೋಟ್ ಹಾಕಲ್ಲ, ನನಗೆ ಏನಾದರೂ ಮಾಡಿದ್ದಾನಾ.. ಎಂದು ಯೋಚಿಸುತ್ತಾರೆ. ನಮ್ಮ ಮದುವೆಗೆ ಬಂದಿದ್ದಾನಾ ಅಂತ ನೋಡ್ತಾರೆ. ಇಲ್ಲಿ ಸಿನಿಮಾದವರು ರಾಜಕೀಯಕ್ಕೆ ಹೋಗಿ ದೊಡ್ಡ ಎತ್ತರ ಏರುವುದು ಕಷ್ಟ. ತಮಿಳು ತೆಲುಗಲ್ಲಿ ಜನರ ರೀತಿಯೇ ಬೇರೆ. ಹಿಂದೆ ರಾಜ್- ವಿಷ್ಣು ಇದ್ದಾಗ ಜನರಿಗೆ ಅವರ ಬಗ್ಗೆ ಭಾರೀ ಪ್ರೀತಿ ಇತ್ತು. ಅವರು ರಾಜಕೀಯಕ್ಕೆ ಇಳಿಯಲಿಲ್ಲ. ಅವರ ಲೆಕ್ಕಾಚಾರ ಕರೆಕ್ಟ್‌ ಆಗಿತ್ತು.

ಉಪೇಂದ್ರ ನಿಮ್ಮನ್ನು ಪ್ರಚಾರಕ್ಕೆ ಕರೆದರೆ..?

ಅವರು ಕರೆಯಲ್ಲ, ಅವರಿಗೆ ನನ್ನ ಬಗ್ಗೆ ಗೊತ್ತಿದೆ. ಕರೆದರೂ ನಾನು ಹೋಗಲ್ಲ.ಜನರಲ್ಲಿ ರಾಜಕೀಯದ ಬಗ್ಗೆ ಬೇರೆಯೇ ಅಭಿಪ್ರಾಯ ಇದೆ. ಪಾಲಿಟಿಷಿಯನ್ ಕರಪ್ಟ್ ಅಂತ ನಾವು ಜನ ಹೇಳ್ತೇವೆ. ಕಾರಣ ನಾವೇ. 500 ರೂಪಾಯಿ ತಗೊಂಡು ವೋಟ್ ಹಾಕ್ತೀವಿ. ರಾಜಕಾರಣಿಗಳಿಗೂ ಗೊತ್ತು– ಏನು ಮಾಡಿದರೆ ವೋಟ್ ಬರುತ್ತೆ ಅಂತ. ಇಡೀ ವ್ಯವಸ್ಥೆಯೇ ಕರಪ್ಟ್ ಆಗಿದೆ. ಇದನ್ನು ಏನೂ ಮಾಡಕಾಗಲ್ಲ. ವೈಯಕ್ತಿಕವಾಗಿ ಅವರಿಗೆ ಆಲ್ ದಿ ಬೆಸ್ಟ್ ಅಂತೇನೆ. ಸ್ವಂತ ಕೆಲಸಕ್ಕೇ ಪುರುಸೊತ್ತಿಲ್ಲ, ಇನ್ನು ಬೇರೆಯವರ ಕೆಲಸ ನಾನು ಹೇಗೆ ಮಾಡೋದು?

ನೀವು ಸಿನಿಮಾ ನಿರ್ದೇಶನ ಮಾಡುತ್ತೀರಂತೆ..

ಒಳಗೆ ಸಣ್ಣದೊಂದು ಫೈರ್ ಇದೆ. ಮ್ಯೂಸಿಕ್ ಡೈರೆಕ್ಟರ್‌ ಆಗ್ತೀನಿ ಅಂತ ಇಪ್ಪತ್ತು ವರ್ಷದ ಹಿಂದೆ ನನಗೂ ಗೊತ್ತಿರಲಿಲ್ಲ. ಮುಂದೆ ನಿರ್ದೇಶಕನೂ ಆಗಬಹುದು, ಗೊತ್ತಿಲ್ಲ.

ಮಕ್ಕಳು ಸಂಗೀತ ಕಲೀತಿದ್ದಾರಾ?

ಮಗ ಪಿಯುಸಿ ಮುಗಿಸಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಸೇರಿದ್ದಾನೆ. ಮಗಳು 8 ತರಗತಿ. ಇಬ್ಬರನ್ನೂ ಸಂಗೀತದ ಕ್ಲಾಸಿಗೆ ಹಾಕಿದ್ದೇನೆ. ಇನ್ನೂ 4–5 ವರ್ಷ ಕಲೀಬೇಕು. ಸಂಗೀತದ್ದು ಒಂದು ರೀತಿಯ ಹುಚ್ಚು. ಅದಿದ್ದರೆ ಮಾತ್ರ ಇಲ್ಲಿ ಸಾಧನೆ ಮಾಡಬಹುದು. ನನ್ನ ಮಕ್ಕಳನ್ನು ನೋಡಿದರೆ ನನಗೆ ಅವರು ಸಂಗೀತದ ಲೈನಿಗೆ ಬರುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ. ನನ್ನ ಕರ್ತವ್ಯ ಮಾಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT