ಗುರುವಾರ , ಮಾರ್ಚ್ 30, 2023
24 °C

ಸಿನಿಮಾ ನೋಡಿ: ನೋಡಲೇಬೇಕಾದ ದಿಲೀಪ್‌ ಕುಮಾರ್‌ ಟಾಪ್‌ 10 ಸಿನಿಮಾಗಳು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ನಟ ದಿಲೀಪ್‌ ಕುಮಾರ್‌ ಫಸ್ಟ್‌ ಖಾನ್‌ ಹಾಗೂ ಟ್ರ್ಯಾಜಿಡಿ ಕಿಂಗ್‌ ಎಂದೇ ಖ್ಯಾತರಾಗಿದ್ದರು. 6 ದಶಕಗಳ ಕಾಲ ಬಾಲಿವುಡ್‌ಗೆ ವೈವಿದ್ಯಮಯ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು. 65ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ದಿಲೀಪ್‌ ಕುಮಾರ್‌ ಮರೆಯಲಾಗದ ಹಲವಾರು ಸಿನಿಮಾಗಳನ್ನು ನೀಡಿದ್ದಾರೆ.

ದಿಲೀಪ್‌ ಕುಮಾರ್‌ ಅವರಿಗೆ ಖ್ಯಾತಿ ತಂದುಕೊಟ್ಟಿದ್ದ ಹಾಗೂ ಸಿನಿಪ್ರಿಯರು ನೋಡಲೇಬೇಕಾದ ಟಾಪ್‌ 10 ಚಿತ್ರಗಳ ಪಟ್ಟಿ ಇಲ್ಲಿದೆ.

1) ಶಬನಮ್‌

ವಲಸೆ ಕಾರ್ಮಿಕರ ಕುರಿತಾದ ಸಿನಿಮಾ ಶಬನಮ್‌. 1949ರಲ್ಲಿ ತೆರೆಕಂಡ ಈ ಚಿತ್ರ ಬರ್ಮಾದಿಂದ ವಲಸೆ ಬಂದ ಪ್ರೇಮಿಗಳು ಒಂದಾಗುವುದಕ್ಕೆ ನಡೆಸುವ ಕಸರತ್ತೇ ಸಿನಿಮಾದ ಮುಖ್ಯ ತಿರುಳು. ವಿಭೂತಿ ಮಿತ್ರಾ ನಿರ್ದೇಶನದ ಈ ಸಿನಿಮಾದಲ್ಲಿ ದಿಲೀಪ್‌ ಕುಮಾರ್‌ಗೆ ಜೋಡಿಯಾಗಿ ಕಾಮಿನಿ ಕೌಶಲ್‌ ನಟಿಸಿದ್ದಾರೆ.

2) ದೀದಾರ್‌

ಕಪ್ಪು–ಬಿಳುಪಿನ ದೀದಾರ್‌ ಸಿನಿಮಾ ತೆರೆಕಂಡಿದ್ದು 1951ರಲ್ಲಿ. ದಿಲೀಪ್‌ ಕುಮಾರ್‌ ಹಾಗೂ ಅಶೋಕ್‌ ಕುಮಾರ್‌ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ನಿತಿನ್ ಬೋಸ್‌ ನಿರ್ದೇಶಿಸಿದ್ದರು. ನರ್ಗಿಸ್‌ ಹಾಗೂ ನಿಮ್ಮಿ ಈ ಚಿತ್ರದ ನಾಯಕಿಯರು. ದುರಂತ ಪ್ರೇಮ ಕಥೆಯ ಈ ಸಿನಿಮಾ ಆ ಕಾಲಘಟ್ಟದಲ್ಲಿ ಸೂಪರ್‌ ಹಿಟ್ ಆಗಿತ್ತು.

3) ದೇವದಾಸ್‌

ಬಾಲಿವುಡ್‌ನಲ್ಲಿ ದಿಲೀಪ್‌ ಕುಮಾರ್‌ ಎಂದರೆ ನೆನಪಾಗುವ ಸಿನಿಮಾ ದೇವದಾಸ್‌. ದುರಂತ ನಾಯಕನ ಪಾತ್ರದಲ್ಲಿ ನಟಿಸಿದ್ದ ದೀಲಿಪ್‌ ಕುಮಾರ್‌ ಅವರಿಗೆ ಬ್ರೇಕ್ ಕೊಟ್ಟ ಸಿನಿಮಾ ದೇವದಾಸ್‌. ಈ ಸಿನಿಮಾದ ಮೂಲಕ ದಿಲೀಪ್‌ ಕುಮಾರ್‌ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. 

ವೈಜಯಂತಿ ಮಾಲಾ, ಸುಚಿತ್ರ ಸೇನ್‌ ಮುಖ್ಯ ಪಾತ್ರವರ್ಗದಲ್ಲಿರುವ ಈ ಸಿನಿಮಾವನ್ನು ಭೀಮಲ್‌ ರಾಯ್‌ ನಿರ್ದೇಶನ ಮಾಡಿದ್ದರು.

4) ಉಡನ್‌ ಖಟೋಲಾ

1955ರಲ್ಲಿ ತೆರೆಕಂಡಿದ್ದ ಉಡನ್‌ ಖಟೋಲಾ ಸಿನಿಮಾ ಕ್ಲಾಸಿಕಲ್‌ ಹಿಟ್ ಆಗಿತ್ತು. ಎಸ್‌.ಯು ಸನ್ನಿ ನಿರ್ದೇಶನದ ಈ ಚಿತ್ರಕ್ಕೆ ನೌಷಾದ್‌ ಸಂಗೀತ ಸಂಯೋಜನೆ ಮಾಡಿದ್ದರು. ದಿಲೀಪ್‌ ಕುಮಾರ್‌ ಅವರಿಗೆ ನಾಯಕಿಯಾಗಿ ನಿಮ್ಮಿ ನಟಿಸಿದ್ದರು.

5) ನಯಾ ದೌರ್‌

ಪ್ರೇಮ ಕಥೆಗಳ ಸಾಲಿನಿಂದ ಹೊರಬಂದು ನಟಿಸಿದ ಸಿನಿಮಾ ನಯಾ ದೌರ್‌. 1957ರಲ್ಲಿ ತೆರೆಕಂಡ ಈ ಸಿನಿಮಾ ಹಳ್ಳಿ ಜೀವನ ಹಾಗೂ ಕಾರ್ಮಿಕರ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಚಿತ್ರ ಇದು. ದಿಲೀಪ್‌ ಕುಮಾರ್‌, ವೈಜಯಂತಿ ಮಾಲಾ, ಜೀವನ್‌, ಅಜಿತ್‌ ಈ ಚಿತ್ರದಲ್ಲಿ ನಟಿಸಿದ್ದಾರೆ.

ಕಪ್ಪು–ಬಿಳುಪಿನ ಈ ಚಿತ್ರವನ್ನು 2007ರಲ್ಲಿ ವರ್ಣಲೇಪನ (ಕಲರ್‌) ಮಾಡಿ ಮರು ಬಿಡುಗಡೆ ಮಾಡಲಾಗಿತ್ತು.

6) ಮಧುಮತಿ

ದಿಲೀಪ್‌ ಕುಮಾರ್‌ ಹಾಗೂ ವೈಜಯಂತಿ ಮಾಲಾ ಅವರ ಕಾಂಬಿನೇಶನ್‌ನಲ್ಲಿ ಮೂಡಿಬಂದ ಮತ್ತೊಂದು ಸಿನಿಮಾ ಮಧುಮತಿ. ದೇವದಾಸ್‌ ನಿರ್ದೇಶನ ಮಾಡಿದ್ದ ಭೀಮಲ್‌ ರಾಯ್‌ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಸಲೀಲ್‌ ಚೌಧರಿ ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದರು. ಈ ಸಿನಿಮಾ 1958ರಲ್ಲಿ ತೆರೆಕಂಡಿತ್ತು. 

7) ಮೋಘಲ್‌ –ಎ–ಅಝಂ

ಐತಿಹಾಸಿಕ ಸಿನಿಮಾ ಮೋಘಲ್‌ –ಎ–ಅಝಂ ದಿಲೀಪ್‌ ಕುಮಾರ್‌ ಅವರಿಗೆ ಯಶಸ್ವಿ ನಾಯಕನ ಪಟ್ಟ ತಂದುಕೊಟ್ಟ ಸಿನಿಮಾ. ಕೆ ಆಸೀಪ್‌ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿರಾಜ್‌ ಕಪೂರ್‌ ಹಾಗೂ ಮಧುಬಾಲ ಸಹ ನಟಿಸಿದ್ದಾರೆ.

8) ಗಂಗಾ–ಜಮುನಾ

ದಿಲೀಪ್‌ ಕುಮಾರ್‌–ವೈಜಯಂತಿ ಮಾಲಾ ಜೋಡಿಯ ಮತ್ತೊಂದು ಹಿಟ್‌ ಸಿನಿಮಾ ಗಂಗಾ–ಜಮುನಾ. 1961ರಲ್ಲಿ ತೆರೆಕಂಡ ಈ ಸಿನಿಮಾವನ್ನು ದಿಲೀಪ್‌ ಕುಮಾರ್‌ ಅವರೇ ನಿರ್ಮಾಣ ಮಾಡಿದ್ದರು. ನಿತಿನ್‌ ಬೋಸ್‌ ಅವರ ನಿರ್ದೇಶನ ಈ ಚಿತ್ರಕ್ಕಿತ್ತು. ಡಕಾಯಿತರ ಕಥಾ ಹಂದರ ಇರುವ ಈ ಸಿನಿಮಾದಲ್ಲಿ ದಿಲೀಪ್‌ ಕುಮಾರ್‌ ಆ್ಯಕ್ಷನ್‌ ಪ್ರೇಕ್ಷಕರಿಗೆ ಇಷ್ಟವಾಗಿತ್ತು. 

9) ಕ್ರಾಂತಿ

1981ರಲ್ಲಿ ತೆರೆಕಂಡ ಕ್ರಾಂತಿ ಚಿತ್ರ ದಿಲೀಪ್‌ ಕುಮಾರ್‌ ಅವರ ಹಿಟ್‌ ಚಿತ್ರ. ಈ ಚಿತ್ರದಲ್ಲಿ ಹೇಮಮಾಲಿನಿ ಹಾಗೂ ಶಶಿ ಕಪೂರ್‌ ಕೂಡ ನಟಿಸಿದ್ದಾರೆ. ಮನೋಜ್‌ ಕುಮಾರ್‌ ನಿರ್ದೇಶನ ಮಾಡಿದ್ದ ಈ ಸಿನಿಮಾ ಶತದಿನೋತ್ಸವ ಕಂಡಿತ್ತು. 

10) ರಾಮ್‌ ಔರ್‌ ಶ್ಯಾಮ್‌

60ರ ದಶಕದಲ್ಲಿನ ದೀಲಿಪ್‌ ಕುಮಾರ್‌ ಅವರ ಹಿಟ್‌ ಚಿತ್ರವೆಂದರೆ ರಾಮ್‌ ಔರ್‌ ಶ್ಯಾಮ್‌. ತಾಪಿ ಚಾಣಕ್ಯ ನಿರ್ದೇಶನದ ಈ ಸಿನಿಮಾ ಸೂಪರ್‌ ಡೂಪರ್‌ ಹಿಟ್‌ ಆಗಿತ್ತು. ದಿಲೀಪ್‌ ಕುಮಾರ್‌ ಮತ್ತು ಪ್ರಾಣ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ನೌಷಾದ್‌ ಸಂಗೀತ ನಿರ್ದೇಶನ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು