ಬುಧವಾರ, ಜನವರಿ 22, 2020
25 °C

ನಾನು ಲಾಲ್‌... ಲಾಲ್‌ ಸಿಂಗ್‌ ಛಡ್ಡಾ ಎಂದ ಆಮೀರ್‌ ಖಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ‘ಮಿಸ್ಟರ್‌ ಪರ್ಫೆಕ್ಟ್‌’ ಎಂದೇ ಹೆಸರಾದ ಆಮೀರ್‌ ಖಾನ್‌ ಈ ಬಾರಿ ಸ್ವಮೇಕ್‌ ಬಿಟ್ಟು, ರಿಮೇಕ್‌ ಚಿತ್ರಕ್ಕೆ ಕೈಹಾಕಿದ್ದಾರೆ. ‘ಲಾಲ್‌ ಸಿಂಗ್‌ ಛಡ್ಡಾ’ ಸಿನಿಮಾದಲ್ಲಿ ಅವರು ಸಿಖ್‌ ಯುವಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಆಮೀರ್‌ಖಾನ್‌ ಸುಮಾರು ಇಪ್ಪತ್ತು ಕೆ.ಜಿವರೆಗೂ ದೇಹದ ತೂಕ ಇಳಿಸಿ, ಚಿರಯುವಕನಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿಖ್ಖರ  ಪಗಡಿ ಧರಿಸಿ, ಹುರಿ ಮೀಸೆಯ ಮತ್ತು ನೀಳ ಗಡ್ಡಧಾರಿಯಾಗಿರುವ ಆಮೀರ್‌ ಖಾನ್‌ ಹೊಸ ಲುಕ್‌ನ ಫೋಟೊ ಈಗ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಆಮೀರ್‌ ಟ್ವಿಟರ್‌ ಖಾತೆಯ ಡಿಪಿಯು ಬದಲಾಗಿದ್ದು, ಡಿಪಿಗೆ ಲಾಲ್‌ ಸಿಂಗ್‌ ಛಡ್ಡಾ ಪಾತ್ರದ ಫೋಟೊವನ್ನೇ  ಹಾಕಿಕೊಂಡಿದ್ದಾರೆ. ‘ಸತ್‌ ಶ್ರೀ ಅಕಾಲ್‌ ಜಿ ನಾನು ಲಾಲ್‌... ಲಾಲ್‌ ಸಿಂಗ್‌ ಛಡ್ಡಾ’ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಕೆಲವೇ ಗಂಟೆಯಲ್ಲಿ ಸುಮಾರು 10 ಸಾವಿರ ಮಂದಿ ರಿಟ್ವೀಟ್‌ ಮಾಡಿದ್ದು, ಸುಮಾರು ಒಂದೂವರೆ ಲಕ್ಷ ಜನರು ಲೈಕ್‌ ಮಾಡಿದ್ದಾರೆ.

1994ರಲ್ಲಿ ತೆರೆಕಂಡ ಆಸ್ಕರ್ ಪ್ರಶಸ್ತಿ ಪುರಸ್ಕೃತ, ಹಾಲಿವುಡ್‌ ಚಿತ್ರ ‘ಫಾರೆಸ್ಟ್ ಗಂಪ್’ನಿಂದ ಸ್ಫೂರ್ತಿ ಪಡೆದು ‘ಲಾಲ್‌ ಸಿಂಗ್‌ ಛಡ್ಡಾ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ‘ಸಿಕ್ರೇಟ್‌ ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕ ಅದ್ವೈತ್ ಚಂದನ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ನಟಿಸುತ್ತಿದ್ದಾರೆ. ಆಮಿರ್ ಖಾನ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಫಾರೆಸ್ಟ್‌ ಗಂಪ್‌’ ಚಿತ್ರವನ್ನು ಹಾಲಿವುಡ್‌ನ ಹೆಸರಾಂತ ನಿರ್ದೇಶಕ ಟಾಮ್‌ ಹಾಂಕ್ಸ್‌ ನಿರ್ದೇಶಿಸಿದ್ದರು. ಈ ಚಿತ್ರದ ಚಿತ್ರಕಥೆಯನ್ನು ಎರಿಕ್‌ ರಾತ್‌ ಹೆಣೆದಿದ್ದರು. ಇದನ್ನು ‘ಲಾಲ್‌ ಸಿಂಗ್‌ ಛಡ್ಡಾ’ದಲ್ಲಿ ಭಾರತೀಯ ಸೊಗಡಿಗೆ ಒಗ್ಗುವಂತೆ ಚಿತ್ರಕಥೆ ಹೆಣೆದಿರುವುದು ಅತುಲ್‌ ಕುಲಕರ್ಣಿ. ಪ್ರೀತಮ್‌ ಸಂಗೀತ ನಿರ್ದೇಶನ ಮಾಡಿದ್ದು, ಅಮಿತಾಭ್‌ ಭಟ್ಟಾಚಾರ್ಯ ಸಾಹಿತ್ಯ ರಚಿಸಿದ್ದಾರೆ.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಅವರ ಸೂಚನೆ ಮೇರೆಗೆ ಅಮೃತಸರದ ಸ್ವರ್ಣಮಂದಿರದಲ್ಲಿ ನಡೆದ ‘ಆಪರೇಷನ್‌ ಬ್ಲೂ ಸ್ಟಾರ್’, ಪಿ.ವಿ. ನರಸಿಂಹರಾವ್‌ ಪ್ರಧಾನಿಯಾಗಿದ್ದಾಗ ನಡೆದ ಬಾಬ್ರಿ ಮಸೀದಿ ಧ್ವಂಸ ಘಟನೆ ಸೇರಿ ದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗೆ ಸಂಬಂಧಿಸಿದ ಅಂಶಗಳು ಈ ಚಿತ್ರದಲ್ಲಿ ಇರಲಿವೆ ಎಂದು ಹೇಳಲಾಗುತ್ತಿದೆ.

ಆಮೀರ್‌ ಅವರ ‘ಪಿಕೆ’ ಸಿನಿಮಾದಂತೆ ಈ ಚಿತ್ರ ಕೂಡ ವಿವಾದಕ್ಕೆ ಕಾರಣವಾಗಬಹುದು ಎನ್ನುವ ವಿಶ್ಲೇಷಣೆಗಳು ಚಿತ್ರರಂಗದಲ್ಲಿ ಚಾಲ್ತಿಯಲ್ಲಿವೆ. ‘ಥಗ್ಸ್ ಆಫ್‌ ಹಿಂದೂಸ್ಥಾನ್’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಂಡ ಮೇಲೆ, ಮತ್ತೆ ಗೆಲುವಿನ ನಗೆ ಬೀರಲು, ಯಶಸ್ಸಿನ ಹಾದಿಗೆ ಮರಳಲು ಆಮೀರ್ ‘ಲಾಲ್‌ ಸಿಂಗ್ ಛಡ್ಡಾ’ನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಸಿನಿಮಾ ಮೇಲೆ ಅವರು ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿರುವಂತೆಯೂ ಕಾಣಿಸುತ್ತಿದೆ.

ವಯಾಕಾಮ್‌ 18 ಸ್ಟುಡಿಯೋಸ್‌ ಮತ್ತು ಆಮೀರ್‌ ಪ್ರೊಡಕ್ಷನ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು ಆಮೀರ್‌ ಮತ್ತು ಕಿರಣ್‌ ರಾವ್‌ ಬಂಡವಾಳ ಹೂಡಿದ್ದಾರೆ. ಪಂಜಾಬ್‌ನ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಂಡೀಗಡ, ರೂಪ್ ನಗರದಲ್ಲಿ ಹಾಗೂ ಸತ್ಲೇಜ್‌ ನದಿ ಪಾತ್ರದಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಬಾಲಿವುಡ್‌ನಲ್ಲಿ ಈಗಾಗಲೇ ಬಹುನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರವು 2020ರ ಕ್ರಿಸ್ಮಸ್ ವೇಳೆಗೆ ತೆರೆ ಕಾಣುವ ನಿರೀಕ್ಷೆ ಇದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು