ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಒಟಿಟಿ ವೇದಿಕೆ ಬೇಕಿದೆ ಎನ್ನುತ್ತಿದ್ದಾರೆ ನಾಗತಿಹಳ್ಳಿ ಮೇಷ್ಟ್ರು

Last Updated 7 ಜುಲೈ 2020, 9:26 IST
ಅಕ್ಷರ ಗಾತ್ರ

ಕನ್ನಡದ ಹೆಸರಾಂತ ನಿರ್ಮಾಪಕರು, ಕನ್ನಡದ್ದೇ ಆದ ಒಟಿಟಿ ವೇದಿಕೆಯೊಂದನ್ನು ಅಭಿವೃದ್ಧಿಪಡಿಸಬೇಕು ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಈಗಿರುವ ಒಟಿಟಿ ವೇದಿಕೆಗಳಲ್ಲಿ ಕನ್ನಡದ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ ಎಂಬ ಮಾತನ್ನು ಕನ್ನಡ ಸಿನಿಮಾ ರಂಗದ ಕೆಲವರು ಹೇಳಿದ್ದಿದೆ. ಇದಕ್ಕೆ ಪರಿಹಾರ ಎಂದರೆ ಸ್ಥಳೀಯವಾಗಿ ಒಟಿಟಿ ವೇದಿಕೆ ಅಭಿವೃದ್ಧಿಪಡಿಸುವುದು ಎಂಬುದು ನಾಗತಿಹಳ್ಳಿ ಅವರ ಅನಿಸಿಕೆ.

‘ಒಟಿಟಿ ವೇದಿಕೆಗಳಿಗೆ ಕನ್ನಡದ ವೀಕ್ಷಕರುದೊಡ್ಡ ಸಂಖ್ಯೆಯಲ್ಲಿ ಕಾಣಿಸುತ್ತಿಲ್ಲ. ಇದಕ್ಕೆ ಕಾರಣ, ಕನ್ನಡಿಗರು ಬೇರೆ ಭಾಷೆಗಳ ಕಾರ್ಯಕ್ರಮಗಳನ್ನು ನೋಡುತ್ತಿರುವುದು. ಕನ್ನಡದಲ್ಲಿ ಗುಣಮಟ್ಟದ ಕಾರ್ಯಕ್ರಮ ರೂಪುಗೊಂಡಾಗ ನುಗ್ಗಿ ನೋಡುವ ಜನರ ಸಂಖ್ಯೆ ಕಡಿಮೆ. ನಮ್ಮ ದುರ್ದೈವ ಇದು. ಕನ್ನಡದಲ್ಲಿ ವೆಬ್ ಸರಣಿಗಳು ಏಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ ಎಂಬ ಪ್ರಶ್ನೆಗೂ ಇದೇ ಉತ್ತರ’ ಎಂದು ನಾಗತಿಹಳ್ಳಿ ಅನಿಸಿಕೆ ಹಂಚಿಕೊಂಡರು.

‘ಕನ್ನಡ ಮತ್ತು ಬೇರೆ ಭಾಷೆಗಳ ನಡುವೆ ಇರುವ ತರತಮ ಹೋಗಲಾಡಿಸಲು, ಕನ್ನಡದ ದೊಡ್ಡ ನಿರ್ಮಾಪಕರು ತಾವೇ ಕನ್ನಡದ ಒಟಿಟಿ ವೇದಿಕೆ ಆರಂಭಿಸಬೇಕು. ಅದು ಪಾರದರ್ಶಕ ಆಗಿರುವಂತೆ ನೋಡಿಕೊಳ್ಳಬೇಕು. ಅಲ್ಲಿ ಸೈಬರ್ ಅಪರಾಧಕ್ಕೆ ಅವಕಾಶ ಇರದಂತೆ ನೋಡಿಕೊಳ್ಳಬೇಕು’ ಎಂದು ‘ಪ್ರಜಾವಾಣಿ’ ಜೊತೆ ಮಾತಿಗೆ ಸಿಕ್ಕಿದ್ದ ಅವರು ಸಲಹೆ ನೀಡಿದರು.

‘ಈಗಿರುವ ಒಟಿಟಿ ವೇದಿಕೆಗಳು ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುತ್ತಿವೆ.ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸ್ಥಳೀಯಒಟಿಟಿ ವೇದಿಕೆಗಳು ತಲೆ ಎತ್ತುತ್ತಿವೆ ಎಂದು ಕೇಳಿ ತಿಳಿದುಕೊಂಡಿದ್ದೇನೆ. ಅಲ್ಲಿನ ಸಿನಿಮಾ ಉದ್ಯಮದ ಜನ ಬಹಳ ಸ್ಥಿತಿವಂತರಿದ್ದಾರೆ. ಆ ಭಾಷೆಗಳಲ್ಲಿ ಆಗುತ್ತಿರುವಂತೆಯೇ, ಕನ್ನಡದಲ್ಲಿ ಕೂಡ ಸ್ಥಳೀಯ ಒಟಿಟಿ ವೇದಿಕೆಯೊಂದು ಬೇಕಾಗಿದೆ’ ಎಂದರು.

ಸಿನಿಮಾ ಮಂದಿರಗಳು ಆರೋಗ್ಯಕರ ವಾತಾವರಣ ಹೊಂದಿವೆ, ಅವು ಸ್ವಚ್ಛವಾಗಿವೆ ಎಂದು ಅನಿಸದಿದ್ದರೆ ವೀಕ್ಷಕರು ಸಿನಿಮಾ ಮಂದಿರಗಳಿಗೆ ಬರುವುದಿಲ್ಲ. ಕೋವಿಡ್–19 ಕಾಯಿಲೆಯ ಕಾರಣದಿಂದಾಗಿ ಏಕಪರದೆಯ ಕೆಲವು ಚಿತ್ರಮಂದಿರಗಳು ಮುಚ್ಚಿಹೋಗುವ ಅಪಾಯ ಇದೆ. ಮಲ್ಟಿಪ್ಲೆಕ್ಸ್‌ಗಳು, ಏಕಪರದೆಯ ಚಿತ್ರಮಂದಿರಗಳ ಪೈಕಿ ಒಂದಿಷ್ಟು ಬದುಕಿಕೊಳ್ಳಬಹುದು. ಆದರೆ ಅವು ಕೂಡ ದೊಡ್ಡ ತಾರೆಯರ ಸಿನಿಮಾ ಬಿಡುಗಡೆಗೆ ಮೀಸಲಾಗಬಹುದು ಎಂದರು.

ಸಿನಿಮಾಗಳನ್ನು ವೀಕ್ಷಕರಿಗೆ ತಲುಪಿಸುವ ಕೆಲಸದಲ್ಲಿ ಭವಿಷ್ಯದಲ್ಲಿ ಒಟಿಟಿ ವೇದಿಕೆಗಳು ಹೆಚ್ಚಿನ ಪಾತ್ರ ವಹಿಸಬಹುದು ಎಂಬುದು ಅವರ ಲೆಕ್ಕಾಚಾರ. ಅಂದಹಾಗೆ, ನಾಗತಿಹಳ್ಳಿ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರವನ್ನು ಅಮೆಜಾನ್ ಪ್ರೈಮ್ ಮೂಲಕ 60 ದಿನಗಳಲ್ಲಿ ಸರಿಸುಮಾರು ಐದು ಲಕ್ಷ ಜನ ವೀಕ್ಷಿಸಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT