ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗೆಬುಗ್ಗೆಯೊಂದಿಗೆ ಸಜ್ಜಾಗಿದ್ದಾರೆ ‘ಶಾಜಿ’ಗಳು

Last Updated 31 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಕೇರಳದ ಜನರ ಅಡ್ಡಹೆಸರುಗಳಲ್ಲಿ ಒಂದು, ಶಾಜಿ. ಇದನ್ನೇ ಕೇಂದ್ರವಾಗಿರಿಸಿಕೊಂಡು ನಿರ್ಮಿಸಿರುವ ಚಿತ್ರವೊಂದು ಮಲಯಾಳಂನಲ್ಲಿ ಸಿದ್ಧವಾಗಿದೆ. ಚಿತ್ರದ ಹೆಸರು ‘ಮೇರಾ ನಾಮ್‌ಶಾಜಿ’. ಮಲಯಾಳಂನ ಹೊಸ ಅಲೆಯ ಇತರ ಚಿತ್ರಗಳಂತೆ ಇದು ಕೂಡ ಹಾಸ್ಯ ಪ್ರಧಾನವಾದದ್ದು.

ಹಾಸ್ಯ ಪಾತ್ರಗಳಲ್ಲೇ ಹೆಚ್ಚು ಮಿಂಚುತ್ತಿರುವ ‘ಗಂಭೀರ’ ನಟ ಆಸಿಫ್ ಅಲಿ, ಇತ್ತೀಚೆಗೆ ‘ತಮಾಷೆ’ಯಲ್ಲೇ ಯಶಸ್ಸು ಗಳಿಸುತ್ತಿರುವ ಬಿಜು ಮೇನೋನ್‌ ಮತ್ತು ಹಾಸ್ಯ–ಖಳನಾಯಕ ಪಾತ್ರಗಳಿಗೆ ಜೀವ ತುಂಬುವ ಬೈಜು ಸಂತೋಷ್‌ ಈ ಚಿತ್ರದ ‘ಶಾಜಿ’ಗಳು. ನಾಯಕಿ ಪಾತ್ರ ಮಾಡಿರುವವರು ನಿಖಿಲ ವಿಮಲ. ಜಾವೇದ್ ಅಲಿ ‘ಆಲಾಪಿಸಿದ’ ಹಿಂದುಸ್ತಾನಿ ಶೈಲಿಯ ಅತಿಮಧುರವಾದ ‘ಮರ್ಹಬಾ...ಜಿಂದಗಿ ಕಾ ಸಫರ್‌...’ಹಾಡು ಈ ಚಿತ್ರದ ವೈಶಿಷ್ಟ್ಯ.

‘ಶಾಜಿ’ಗಳ‌ ಸುತ್ತ ತಿರುಗುವ ಕಥಾ ಹಂದರದ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಬರೆದವರು ದಿಲೀಪ್‌ ಪೊನ್ನನ್‌ ಮತ್ತು ಷಾನಿ ಖಾದರ್‌. ಉರ್ದು, ತಮಿಳು ಮತ್ತು ಮಲಯಾಳಂ ಮಿಶ್ರಣದ ಹಾಡುಗಳನ್ನು ರಚಿಸಿದವರು ಮುನ್ನ ಶೌಕತ್ ಅಲಿ ಮತ್ತು ಸಂತೋಷ್ ವರ್ಮಾ. ನಾದಿರ್ ಶಾ ಅವರ ನಿರ್ದೇಶನವಿದೆ.

ನಾದಿರ್ ಶಾ ಅವರ ಮೊದಲ ಚಿತ್ರ ‘ಅಮರ್ ಅಕ್ಬರ್ ಆ್ಯಂಟನಿ’ ಮತ್ತು ಒಂದು ವರ್ಷದ ನಂತರ ನಿರ್ದೇಶಿಸಿದ ‘ಕಟ್ಟಪ್ಪನಯಿಲೆ ರಿತಿಕ್ ರೋಷನ್’ ಹಿಟ್‌ ಆಗಿದ್ದವು. ಅದೇ ರೀತಿ ‘ಶಾಜಿ’ ಕೂಡ ಹೆಸರು ಗಳಿಸಿಕೊಡುವ ನಿರೀಕ್ಷೆಯಲ್ಲಿದ್ದಾರೆ ಅವರು. ಇದು, ಕೇರಳದ ಬೇರೆ ಬೇರೆ ಪ್ರದೇಶಗಳ ‘ಶಾಜಿ‘ಗಳ ಕಥೆ ಹೇಳುವ ಸಿನಿಮಾ. ಆಸಿಫ್ ಅಲಿ ಕೊಚ್ಚಿಯ ಶಾಜಿಯಾದರೆ ಬಿಜು ಮೇನೋನ್‌ ಕೋಯಿಕ್ಕೋಡ್ ಶಾಜಿಯಾಗಿದ್ದಾರೆ. ತಿರುವನಂತಪುರದ ಶಾಜಿಯ ಪಾತ್ರದಲ್ಲಿರುವವರು ಬೈಜು ಸಂತೋಷ್‌.

ಅಮರ್ ಕೈಬಿಟ್ಟ; ಶಾಜಿ ಕೈ ಹಿಡಿದ
ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ‘ಅಮರ್ ಅಕ್ಬರ್ ಆ್ಯಂಟನಿ’ ಚಿತ್ರದ ಪ್ರಮುಖ ಮೂರು ಪಾತ್ರಗಳಲ್ಲಿ ಒಂದನ್ನು ನಿಭಾಯಿಸುವ ಅವಕಾಶ ಆಸಿಫ್ ಅಲಿಗೆ ಲಭಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರನ್ನು ಕೈಬಿಡಲಾಗಿತ್ತು. ಆದರೆ ಈಗ ಹೆಸರಿಗೆ ಸಂಬಂಧಿಸಿದ ಚಿತ್ರದಲ್ಲಿ ‘ಶಾಜಿ’ಯಾಗಿ ಅಭಿನಯಿಸುವ ಅವಕಾಶ ಅವರಿಗೆ ಲಭಿಸಿದೆ. ಅಮರ್ ಅಕ್ಬರ್ ಆ್ಯಂಟನಿ ಚಿತ್ರಕ್ಕೆ ಆಯ್ಕೆ ಮಾಡಿ ಕೈಬಿಟ್ಟ ವಿಷಯವನ್ನು ಸ್ವತ: ಆಸಿಫ್ ಅವರೇ ಬಹಿರಂಗಗೊಳಿಸಿದ್ದಾರೆ.

ಸಹೋದರರಾದ ಇಂದ್ರಜಿತ್ ಮತ್ತು ಪೃಥ್ವಿರಾಜ್ ಜೊತೆ ಜಯಸೂರ್ಯ ಅಮರ್, ಅಕ್ಬರ್ ಮತ್ತು ಆ್ಯಂಟನಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರ ಕಾಲಿವುಡ್‌ನಲ್ಲಿ ಜನರ ಚಿತ್ತ ಅಪಹರಿಸಿತ್ತು. ಈಗ ‘ಶಾಜಿ’ ಕೂಡ ಹಿಟ್ ಆಗುವ ಎಲ್ಲ ಸಾಧ್ಯತೆಗಳಿವೆ ಎಂಬುದು ಆಸಿಫ್ ಅಲಿ ಅವರ ಅಂಬೋಣ.

ಮೇರಾ ನಾಮ್ ಶಾಜಿ ಚಿತ್ರದ ಪೋಸ್ಟರ್‌
ಮೇರಾ ನಾಮ್ ಶಾಜಿ ಚಿತ್ರದ ಪೋಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT