ನಟಸಾರ್ವಭೌಮನ ಶತಕ ಸಾಧನೆ!

7

ನಟಸಾರ್ವಭೌಮನ ಶತಕ ಸಾಧನೆ!

Published:
Updated:

ಹೊಸ ಲುಕ್, ಅದ್ದೂರಿ ಸೆಟ್‌ ಹೀಗೆ ಹಲವು ಕಾರಣಗಳಿಗೆ ಪುನೀತ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರ ಮೊದಲಿನಿಂದಲೂ ಸುದ್ದಿಯಾಗುತ್ತಲೇ ಇದೆ. ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಎರಡು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಒಂದು ಹಾಡನ್ನು ಇಂಡೊನೇಷ್ಯಾದಲ್ಲಿ ಚಿತ್ರೀಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗೆಯೇ ಪುನೀತ್ ಇಂಟ್ರೊಡಕ್ಷನ್ ಸಾಂಗ್ ಕೂಡ ಬಾಕಿ ಇದ್ದು ಅದನ್ನು ಬೆಂಗಳೂರಿನಲ್ಲಿಯೇ ಚಿತ್ರೀಕರಿಸಲಾಗುವುದು. 

ನಿರ್ದೇಶಕ ಪವನ್ ಒಡೆಯರ್ ಈ ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ವಿಶಿಷ್ಟ ರೀತಿಯಲ್ಲಿ ಯೋಜಿಸಿ ಸಂಯೋಜಿಸಿದ್ದಾರಂತೆ. ಕ್ಲೈಮ್ಯಾಕ್ಸ್‌ನಲ್ಲಿ ನೂರು ಜನ ದಾಂಡಿಗರ ಜತೆಯಲ್ಲಿ ಪುನೀತ್ ಹೊಡೆದಾಡಲಿದ್ದಾರಂತೆ!

‘ಕ್ಲೈಮ್ಯಾಕ್ಸ್‌ನ ಒಂದೇ ಫೈಟ್‌ ಅನ್ನು ಹಂತಗಳಲ್ಲಿ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಮಾಡಿದ್ದೇವೆ. ಬಾದಾಮಿ, ಮೇಲುಕೋಟೆ ಮತ್ತು ಶ್ರೀರಂಗಪಟ್ಟಣದಲ್ಲಿ ಫೈಟ್ ಚಿತ್ರೀಕರಿಸಿದ್ದೇವೆ. ಚಿತ್ರದ ಕಥೆಯೇ ಆ ರೀತಿಯಲ್ಲಿ ಇದೆ. ಈ ಹಿಂದೆ ನಾನು ಪುನೀತ್ ಸೇರಿಕೊಂಡು ಮಾಡಿದ ‘ರಣ ವಿಕ್ರಮ’ ಸಿನಿಮಾ ಪೂರ್ತಿಯಾಗಿ ಆ್ಯಕ್ಷನ್ ಸಿನಿಮಾ ಆಗಿತ್ತು. ಪುನೀತ್ ಅಂದಾಕ್ಷಣ ಜನರಲ್ಲಿ ನಿರೀಕ್ಷೆ ಜಾಸ್ತಿ ಇರುತ್ತದೆ. ಅವರು ಅದ್ಭುತವಾಗಿ ಫೈಟ್ ಮಾಡುತ್ತಾರೆ. ಈ ಸಿನಿಮಾದಲ್ಲಿ ಸುಮ್‌ ಸುಮ್ನೇ ಫೈಟ್ ಬಂದು ಹೋಗುವುದಿಲ್ಲ. ಅತಾರ್ಕಿಕ ಫೈಟ್‌ಗಳಿಲ್ಲ. ಕಥೆಗೆ ಹೊಂದುಕೊಳ್ಳುವ ಹಾಗೆಯೇ ಹೊಡೆದಾಟ ಬರುತ್ತದೆ’ ಎಂದು ವಿವರಿಸುತ್ತಾರೆ ನಿರ್ದೇಶಕ ಪವನ್ ಒಡೆಯರ್. 

ಕ್ಲೈಮ್ಯಾಕ್ಸ್‌ ಚಿತ್ರೀಕರಣಕ್ಕಾಗಿ ಬೆಂಗಳೂರಿನವರಷ್ಟೇ ಅಲ್ಲದೆ ಚೆನ್ನೈ, ಹೈದರಾಬಾದ್, ವಿಯೆಟ್ನಾಮ್‌ಗಳಿಂದ ಫೈಟರ್‌ಗಳನ್ನು ಕರೆಸಲಾಗಿದೆ. ‘ಬಾಹುಬಲಿ’, ‘ಐ’ ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದ ಪೀಟರ್ ಹೆನ್ ‘ನಟಸಾರ್ವಭೌಮ’ನ ಹೊಡೆದಾಟಕ್ಕೂ ಸೂತ್ರ ಕಟ್ಟಿದ್ದಾರೆ.

ಚಿತ್ರವನ್ನು ಮುಗಿಸಲು ಪವನ್ ತಮಗೆ ತಾವೇ ಒಂದು ಡೆಡ್‌ಲೈನ್ ಹಾಕಿಕೊಂಡಿದ್ದಾರೆ. ‘ನವೆಂಬರ್ 20ಕ್ಕೆ ನಾನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಪ್ರಥಮ ಪ್ರತಿ ಕೊಡಲೇಬೇಕು. ಅದು ನನಗೆ ನಾನೇ ಹಾಕಿಕೊಂಡ ನಿಬಂಧನೆ. ನಂತರ ಚಿತ್ರವನ್ನು ಯಾವಾಗ ಬಿಡುಗಡೆ ಮಾಡುತ್ತಾರೋ ಅವರಿಗೆ ಬಿಟ್ಟಿದ್ದು. ಬಹುಶಃ ನವೆಂಬರ್ ಅಂತ್ಯ ಅಥವಾ ಡಿಸೆಂಬರ್‌ ಆರಂಭದಲ್ಲಿ ಚಿತ್ರ ಬಿಡುಗಡೆ ಆಗಬಹುದು’ ಎನ್ನುತ್ತಾರೆ ಪವನ್.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 2

  Frustrated
 • 1

  Angry

Comments:

0 comments

Write the first review for this !