ಸೋಮವಾರ, ಮೇ 17, 2021
23 °C

ನಟನೆಗೆ ಹಾರಿದ ‘ಕೋಳಿ’ ರಮ್ಯಾ

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

Prajavani

ಅ ದೊಂದು ಸುಖ ಸಂಸಾರ. ಮನೆಮಂದಿಯೊಂದಿಗೆ ಖುಷಿಯಾಗಿಯೇ ಇರುವ ಆಕೆ ಒಳಗೊಳಗೆ ಮಸಲತ್ತು ನಡೆಸುತ್ತಿರುತ್ತಾಳೆ. ಗುರಿ ಸಾಧನೆಗಾಗಿ ನಿತ್ಯವೂ ಹೊಸತೊಂದು ಜಾಲ ಹೆಣೆಯುತ್ತಾಳೆ. ಇಂದಿನ ಬಹುತೇಕ ಧಾರಾವಾಹಿಗಳಲ್ಲಿ ಮಹಿಳೆಯೇ ಕೂಡು ಕುಟುಂಬದ ಶತ್ರು. ಇಂಥದ್ದೇ ಕಥಾವಸ್ತುವುಳ್ಳ ಧಾರಾವಾಹಿ ಮಿಥುನ ರಾಶಿ. ಧಾರಾವಾಹಿಯಲ್ಲಿ ಮುದ್ದು ಮುಖದಲ್ಲೂ ಗಂಭೀರತೆ ಉಳಿಸಿಕೊಂಡು, ಸಿಕ್ಕಸಿಕ್ಕವರ ಮೇಲೆ ಸಿಡುಕುತ್ತಲೇ ಪ್ರೀತಿ ಗಳಿಸಿಕೊಂಡಿದ್ದಾರೆ ರಮ್ಯಾ.

ನಿರೂಪಣೆಯ ಮೂಲಕ ಬಣ್ಣದ ಲೋಕದ ಹಾದಿ ತುಳಿದ ಇವರು, ಕನ್ನಡ, ತಮಿಳು, ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರು. ಸದ್ಯ ತಮಿಳಿನ ಸತ್ಯ, ಕನ್ನಡದಲ್ಲಿ ಮಿಥುನ ರಾಶಿ ಧಾರಾವಾಹಿಗಳಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚು ಹರಿಸುತ್ತಿದ್ದಾರೆ.

ನನಗೆ ಮಾಮೂಲಿ ಜಾಡಿಗಿಂತ ವಿಭಿನ್ನ ಪಾತ್ರಗಳಲ್ಲಿ ನಟಿಸುವಾಸೆ. ಪಾತ್ರ ಚಿಕ್ಕದಾದರೂ, ಪ್ರೇಕ್ಷಕರ ಮನಸ್ಸಿನ ಆಳಕ್ಕೆ ಇಳಿಯಬೇಕು. ತರಹೇವಾರಿ ಪಾತ್ರಗಳಲ್ಲಿ ಮಿಂಚಬೇಕು ಎಂದು ಉತ್ಸಾಹದಿಂದಲೇ ಮಾತಿಗೆ ತೊಡಗಿದರು ರಮ್ಯಾ.

ರಮ್ಯಾ ಜನಪ್ರಿಯವಾಗಿದ್ದು ರಿಯಾಲಿಟಿ ಶೋಗಳ ಮೂಲಕ. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್’ ರಿಯಾಲಿಟಿ ಶೋ’ ಮೂಲಕ ಕಿರುತೆರೆಯಲ್ಲಿ ಚಿರಪರಿಚಿತರಾದರು. ಕೋಳಿ ಹಿಡಿಯುವ ಪಂದ್ಯದಲ್ಲಿ ಇವರು ಪ್ರದರ್ಶಿಸಿದ ಚಾಕಚಕ್ಯತೆಯಿಂದಾಗಿ ಕೋಳಿ ರಮ್ಯಾ ಎಂದೇ ಜನಪ್ರಿಯರಾದರು. ಸಾಹಸ ಪ್ರವೃತ್ತಿಗೆ ಒಗ್ಗಿಕೊಳ್ಳುವುದು ಇವರಿಗೆ ಪ್ರೀತಿ. ಹಾಗಾಗಿಯೇ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋನಲ್ಲಿಯೂ ಅವಕಾಶ ಗಿಟ್ಟಿಸಿಕೊಂಡರು.

ರಮ್ಯಾ ಭದ್ರಾವತಿಯವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು. ದುಡಿಮೆಯ ಅನಿವಾರ್ಯತೆ ಮತ್ತು ನಟನಾ ಆಸಕ್ತಿ ಅವರನ್ನು ಬೆಂಗಳೂರಿಗೆ ಬರುವಂತೆ ಮಾಡಿತು.

ಅಪ್ಪನ ಅಗಲುವಿಕೆಯ ನಂತರ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಯಿತು. ಮನೆಯವರ ಕಷ್ಟಕ್ಕೆ ತಾನು ನೆರವಾಗಬೇಕು ಅನಿಸಿದ್ದೇ ತಡ ಬೆಂಗಳೂರಿನ ಬಸ್ ಹತ್ತಿ ಅವಕಾಶಗಳ ಹುಡುಕಾಟ ನಡೆಸಿದರು. ಆಗಿನ್ನೂ ಇವರು 9ನೇ ತರಗತಿ ವಿದ್ಯಾರ್ಥಿನಿ. ಚಟಪಟವೆಂದು ಮುದ್ದುಮುದ್ದಾಗಿ ಮಾತನಾಡುತ್ತಿದ್ದ ಇವರಿಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ತನನಂ, ತನನಂ’ ಕಾರ್ಯಕ್ರಮದ ನಿರೂಪಣೆಯ ಅವಕಾಶ ದೊರಕಿತು. ವಾರಾಂತ್ಯದಲ್ಲಿ ಚಿತ್ರೀಕರಣ ನಡೆಯುತ್ತಿದ್ದುದ್ದರಿಂದ ಭದ್ರಾವತಿಯಿಂದ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಈ ಕಾರ್ಯಕ್ರಮದ ಯಶಸ್ಸು ಇವರಿಗೆ ಕಿರುತೆರೆಯಲ್ಲಿ ಅವಕಾಶಗಳ ಹೆಬ್ಬಾಗಿಲನ್ನೇ ತೆರೆಸಿತು.

ನೃತ್ಯದಲ್ಲಿ ಇವರು ನಿಸ್ಸೀಮರು. ಬಾಲ್ಯದಿಂದಲೂ ಕಣ್ಸೆಳೆಯುವಂತೆ ನೃತ್ಯ ಮಾಡುತ್ತಿದ್ದರು. ಈ ಕಾರಣಕ್ಕೆ ಶಾಲೆಯಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದರು. ಲವಲವಿಕೆಯ ಜೊತೆಗೆ ನೋಡಲು ಸುಂದರವಾಗಿದ್ದ ಇವರಿಗೆ ಜನರ ಮೆಚ್ಚುಗೆಯ ಮಾತುಗಳು ನಟನಾ ಲೋಕಕ್ಕೆ ಅಡಿಯಿಡಲು ಪ್ರೇರಣೆಯಾದವು.

ಕಿರುತೆರೆ ಪ್ರವೇಶಿಸಿದಾಗ ಸಿಕ್ಕ ಅವಕಾಶಗಳಿಗೆ ನ್ಯಾಯ ಒದಗಿಸುವ ಉತ್ಸಾಹವಿತ್ತು. ಈ ಪ್ರಯತ್ನದಲ್ಲಿರುವಾಗಲೇ ನಿರೂಪಣೆಯ ಅವಕಾಶ ದೊರಕಿತು. ‘ನಂತರ ರಿಯಾಲಿಟಿ ಶೋ, ಧಾರಾವಾಹಿ, ಸಿನಿಮಾ... ಇಲ್ಲಿಯವರೆಗಿನ ಪಯಣ ಅದ್ಭುತವಾಗಿದೆ’ ಎಂದು ಸಂತಸವನ್ನೂ ವ್ಯಕ್ತಪಡಿಸಿದರು.

‘ಸೊಸೆ ತಂದ ಸೌಭಾಗ್ಯ’ ಇವರು ನಟಿಸಿದ ಮೊದಲ ಧಾರಾವಾಹಿ. ‘ಪುಟ್ಟಗೌರಿ ಮದುವೆ’ಗೂ ಬಣ್ಣ ಹಚ್ಚಿದ್ದಾರೆ. 'ಎರಡು ವರ್ಷಗಳಿಂದ ಅನ್ಯ ಭಾಷೆಯ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದೆ. ಅಮ್ಮನಿಗೆ ನಾನು ಕನ್ನಡದ ಧಾರಾವಾಹಿಗಳಲ್ಲಿಯೇ ನಟಿಸಬೇಕೆಂಬ ಆಸೆ. ಈ ಕಾರಣಕ್ಕೆ ಮತ್ತೆ ಮರಳಿ ತವರು ಮನೆಗೆ ಬಂದಿದ್ದೇನೆ' ಎಂದರು ರಮ್ಯಾ.

ನೃತ್ಯ ಎಂದರೇ ಇವರಿಗೆ ಅಚ್ಚುಮೆಚ್ಚು. ಇತ್ತೀಚೆಗೆ ಮಜಾ ಟಾಕೀಸ್‍ನಲ್ಲಿ ಇವರು ಮಾಡಿದ ಬೆಲ್ಲಿ ನೃತ್ಯದ ವಿಡಿಯೊ ವೈರಲ್ ಆಗಿತ್ತು. ‘ಬೆಲ್ಲಿ ಡಾನ್ಸ್ ಮನರಂಜನೆಗಾಗಿ ಅಷ್ಟೇ ಅಲ್ಲದೇ ದೇಹದ ಫಿಟ್‍ನೆಸ್ ಕಾಯ್ದುಕೊಳ್ಳಲು ನೆರವಾಗುವ ವ್ಯಾಯಾಮ ನೃತ್ಯ. ಇದರಿಂದ ದೇಹದ ಅಂಗಾಂಗಳನ್ನು ನಿಯಂತ್ರಿಸಬಹುದು. ಜೊತೆಗೆ ಮನಸ್ಸಿಗೊಂದು ಆಹ್ಲಾದಕರ ಅನುಭವ ದೊರೆಯುತ್ತದೆ. ಟಿವಿ ಕಲಾವಿದರಿಗೆ ದೇಹಾಕಾರ ತುಂಬಾ ಮುಖ್ಯ’ ಎನ್ನುವುದು ಇವರ ಅಭಿಪ್ರಾಯ.

ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಆದರೆ ಅವುಗಳು ಹೇಳಿಕೊಳ್ಳುವಷ್ಟು ಹೆಸರು ತಂದುಕೊಟ್ಟಿಲ್ಲ. ಆದರೆ ಈ ಕುರಿತು ಇವರಿಗೆ ಬೇಸರವಿಲ್ಲ. ‘ಉತ್ತಮ ಪಾತ್ರ ಸಿಕ್ಕರೆ ಸಿನಿಮಾದಲ್ಲಿ ನಟಿಸುವ ಆಸೆಯಿದೆ. ನಟಿಸಿರುವ ಸಿನಿಮಾಗಳು ಹೆಸರು ತಂದುಕೊಟ್ಟಿಲ್ಲ ಎಂಬ ಬೇಸರವಿಲ್ಲ. ನಾನು ಕಿರುತೆರೆಯಲ್ಲಿಯೇ ಕಂಫರ್ಟಬಲ್ ಆಗಿದ್ದೇನೆ. ಇಲ್ಲಿಯೇ ಸಾಕಷ್ಟು ಅವಕಾಶಗಳು ದೊರಕುತ್ತಿವೆ. ನನ್ನ ಮೊದಲ ಆದ್ಯತೆ ಕಿರುತೆರೆಗೆ' ಎಂದು ನಟನೆಯ ಕುರಿತು ತಮಗಿರುವ ಪ್ರೀತಿಯನ್ನು ಹಂಚಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು