ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ‘ಅಕ್ಷಿ’ ಡಿ.3ಕ್ಕೆ ತೆರೆಗೆ

Last Updated 22 ನವೆಂಬರ್ 2021, 10:51 IST
ಅಕ್ಷರ ಗಾತ್ರ

ಬೆಂಗಳೂರು: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಕನ್ನಡ ಭಾಷೆ ವಿಭಾಗದಲ್ಲಿ, ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದ ಮನೋಜ್‌ ಕುಮಾರ್‌ ನಿರ್ದೇಶನದ ‘ಅಕ್ಷಿ’ ಡಿ.3ಕ್ಕೆ ತೆರೆಕಾಣಲಿದೆ. ವರನಟ ಡಾ.ರಾಜ್‌ಕುಮಾರ್‌ ಅವರ ನೇತ್ರದಾನದ ಪ್ರೇರಣೆಯಿಂದ ನಿರ್ಮಾಣವಾಗಿರುವ ಈ ಚಿತ್ರದ ಹಂಚಿಕೆಯ ಜವಾಬ್ದಾರಿಯನ್ನು ಖ್ಯಾತ ನಿರ್ಮಾಪಕ ಜಾಕ್‌ ಮಂಜು ಹೊತ್ತುಕೊಂಡಿದ್ದಾರೆ.

‘ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿ ಎಂದು ಕೇಳಿಕೊಳ್ಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಜಾಕ್‌ ಮಂಜು, ‘ಕಮರ್ಷಿಯಲ್‌ ಸಿನಿಮಾಗಳಿಗೆ ಶೋ ನೀಡಿ ಜನ ಬರದೇ ಇರುವುದನ್ನು ನೀವೇ ನೋಡಿದ್ದೀರಿ. ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ಎಂದು ಬೇರೆ ರೀತಿ ನೋಡಬೇಡಿ. ಕಣ್ಣಂಚಿನಲ್ಲಿ ನೀರು ಬರುವ ಭಾವನಾತ್ಮಕ ಸಿನಿಮಾ ಇದು’ ಎಂದರು.

‘ಅಕ್ಷಿ ರೀತಿಯ ಸಿನಿಮಾ ತಯಾರಿಸುವ ಆಸೆ ಇತ್ತು. ಆದರೆ ಸರಿಯಾದ ಕಥೆ ಸಿಕ್ಕಿರಲಿಲ್ಲ. ನಾನು ಈ ಸಿನಿಮಾ ನೋಡಿದ್ದೇನೆ. ಇದರ ಪ್ರತಿಯೊಂದು ದೃಶ್ಯದಲ್ಲಿ ನನಗೆ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರು ಕಾಣಿಸಿದರು. ಪುನೀತ್‌ ರಾಜ್‌ಕುಮಾರ್‌ ಅವರು ನೇತ್ರದಾನ ಮಾಡಿದ ಬಳಿಕ ನೇತ್ರದಾನದ ಪ್ರತಿಜ್ಞೆ ತೆಗೆದುಕೊಂಡವರು ಸಂಖ್ಯೆ ಹೆಚ್ಚಾಗಿದೆ. ಈ ಸಿನಿಮಾ ನೋಡಿದ ಬಳಿಕ ನನ್ನ ಮಗನೇ ನನ್ನ ಬಳಿಗೆ ಬಂದು ‘ನಾನೂ ನೇತ್ರದಾನ ಮಾಡಬೇಕು’ ಎಂದ’ ಎಂದು ನೆನಪಿಸಿಕೊಂಡರು.

‘ಅಪ್ಪು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ’

‘ಅಕ್ಟೋಬರ್‌ ಎರಡನೇ ವಾರದಲ್ಲಿ ನಾವು ಪುನೀತ್‌ ರಾಜ್‌ಕುಮಾರ್‌ ಅವರನ್ನು ಭೇಟಿಯಾಗಿದ್ದೆವು. ಅವರು ನಮ್ಮ ಸಿನಿಮಾ ನೋಡಬೇಕು ಎಂದು ಆಸೆಪಟ್ಟಿದ್ದರು. ಇದಕ್ಕಾಗಿ ನಾವು ಅವರಿಗೆ ಪ್ರೈವೇಟ್‌ ಲಿಂಕ್‌ ಕಳುಹಿಸಿಕೊಟ್ಟಿದ್ದೆವು. ಅವರು ಸಿನಿಮಾ ನೋಡಿದ್ದಾರೆ ಎಂದು ನನ್ನ ಮನಸ್ಸು ಹೇಳುತ್ತಿದೆ. ನೋಡಿಲ್ಲವೆಂದರೂ, ಅವರು ದಾನ ಮಾಡಿರುವ ಕಣ್ಣುಗಳು ಮುಂದೊಂದು ದಿನ ಈ ಸಿನಿಮಾ ನೋಡಲಿದೆ ಎನ್ನುವ ಭರವಸೆ ಇದೆ’ ಎಂದರು ಚಿತ್ರದ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌.

ಚಿತ್ರಮಂದಿರದ ಹೊರಗಡೆ ನೇತ್ರದಾನದ ಅರ್ಜಿ

‘ಈಗಾಗಲೇ ಸಿನಿಮಾ ನೋಡಿದ ಹಲವರು ತಾವೂ ನೇತ್ರದಾನ ಮಾಡುವ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ. ಚಿತ್ರ ಬಿಡುಗಡೆಯಾದ ಬಳಿಕ ಚಿತ್ರ ಮಂದಿರದ ಹೊರಗಡೆಯೂ ನೇತ್ರದಾನದ ಅರ್ಜಿಯನ್ನು ನೀಡುತ್ತೇವೆ. ನಾರಾಯಣ ನೇತ್ರಾಲಯ ನಮ್ಮ ಜೊತೆ ಕೈಜೋಡಿಸಿದ್ದು, ಸಿನಿಮಾ ನೋಡಿದವರು ಖಂಡಿತವಾಗಿಯೂ ನೇತ್ರದಾನ ಮಾಡುತ್ತಾರೆ ಎನ್ನುವ ಭರವಸೆ ಇದೆ’ ಎಂದು ಶ್ರೀನಿವಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT