ಶನಿವಾರ, ಆಗಸ್ಟ್ 24, 2019
23 °C

ಪ್ರೇಕ್ಷಕರ ಸನಿಹಕೆ...

Published:
Updated:
Prajavani

ಧನ್ಯಾ ರಾಮ್‌ಕುಮಾರ್‌ ಅವರ ಮೊದಲ ಸಿನಿಮಾ ‘ನಿನ್ನ ಸನಿಹಕೆ’ ನಿರ್ದೇಶಿಸುತ್ತಿರುವ ಸುಮನ್ ಜಾದೂಗಾರ್ ಅವರು ಪ್ರತಿದಿನ ಬೆಳಿಗ್ಗೆ ತಮ್ಮ ಮೈಯನ್ನು ತಾವೇ ಒಮ್ಮೆ ಚಿವುಟಿಕೊಳ್ಳುತ್ತಿದ್ದಾರಂತೆ! ‘ಏಕೆ’ ಎಂದು ಕೇಳುವ ಅಗತ್ಯವಿಲ್ಲ. ತಾವು ನಿಜಕ್ಕೂ ಈ ಸಿನಿಮಾ ನಿರ್ದೇಶಿಸುತ್ತಿರುವುದು ಹೌದಾ ಎಂಬುದನ್ನು ಖಚಿತ ಮಾಡಿಕೊಳ್ಳುವುದಕ್ಕಂತೆ.

‘ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿರುವ ಯಾರಿಗೂ ಇಂಥದ್ದೊಂದು ಕನಸಿನ ತಂಡ ಸಿಗುವುದು ಸಾಧ್ಯವಿಲ್ಲ. ಹಾಗಾಗಿ ದಿನಾ ಬೆಳಿಗ್ಗೆ ಒಮ್ಮೆ ಮೈ ಚಿವುಟಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ’ ಎಂದರು ಸುಮನ್. ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮೊದಲು ಹೇಳಿದ್ದು ಈ ಸಂಗತಿಯನ್ನು.

‘ಈ ಚಿತ್ರ ತಂಡದ ಪ್ರತಿ ಸದಸ್ಯನೂ ನಿರ್ದೇಶಕನ ಪಾಲಿನ ಹೊಣೆಗಾರಿಕೆಗಳನ್ನು ಹೊತ್ತುಕೊಳ್ಳುತ್ತಿದ್ದಾರೆ. ನಾನೊಬ್ಬನೇ ಹೊಣೆ ಹೊತ್ತುಕೊಳ್ಳುತ್ತಿಲ್ಲ. ಹಾಗಾಗಿಯೇ ನಾನು ಇದನ್ನು ಕನಸಿನ ತಂಡ ಎಂದು ಕರೆದಿದ್ದು’ ಎಂದರು ಸುಮನ್. ಚಿತ್ರದ ಶೀರ್ಷಿಕೆ ಅನಾವರಣದ ನಂತರ ಅವರು ಹೇಳಿದ್ದು, ‘ಕಥೆಯನ್ನು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ’ ಎನ್ನುವ ಮಾತು.

ಇದು ಈ ಕಾಲದ ಯುವಕರಿಗೆ ಸಂಬಂಧಿಸಿದ್ದು. ನಾಯಕ, ನಾಯಕಿಯ ಹೆಸರು ಆದಿತ್ಯ ಮತ್ತು ಅಮೃತಾ ಎಂದಷ್ಟೇ ಹೇಳಿದರು.

ಚಿತ್ರದ ನಾಯಕ ಸೂರಜ್‌ ಗೌಡ. ಚಿತ್ರದ ಕಥೆ ಕೂಡ ಅವರದ್ದೇ. ‘ಇದು ನಮ್ಮ ಪಾಲಿಗೆ ಕನಸು ನನಸಾದಂತೆ’ ಎಂದರು ಸೂರಜ್. ಅವರು ಈ ಚಿತ್ರಕ್ಕಾಗಿ ಇಪ್ಪತ್ತು ದಿನಗಳಲ್ಲಿ ಎಂಟು ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ‘ಇಂದಿನ ತಲೆಮಾರು ಪ್ರೀತಿಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುದು ಚಿತ್ರದ ಕಥೆ’ ಎಂದರು ಸೂರಜ್.

Post Comments (+)