ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡ್ಡೆಹುಲಿಯ ಮುದ್ದಿನ ಬೆಡಗಿ

Last Updated 19 ಏಪ್ರಿಲ್ 2019, 4:19 IST
ಅಕ್ಷರ ಗಾತ್ರ

‘ಅಮ್ಮ ಐ ಲವ್ ಯೂ’ ಚಿತ್ರದ ಮೂಲಕ ಕನ್ನಡ ಸಿನಿಮಾ ಲೋಕ ಪ್ರವೇಶಿಸಿದ ನಿಶ್ವಿಕಾ ನಾಯ್ಡು ಅವರ ಮೂರನೆಯ ಸಿನಿಮಾ ‘ಪಡ್ಡೆಹುಲಿ’ ಶುಕ್ರವಾರ ತೆರೆಗೆ ಬರುತ್ತಿದೆ. ಇದು ಈ ವರ್ಷದಲ್ಲಿ ತೆರೆಗೆ ಬರುತ್ತಿರುವ ಅವರ ಮೊದಲ ಸಿನಿಮಾ ಕೂಡ ಹೌದು.

ದೊಡ್ಡ ಬಜೆಟ್‌ನ, ಹಿರಿಯ ನಟ ರವಿಚಂದ್ರನ್ ಅವರ ಜೊತೆ ಅಭಿನಯಿಸಿರುವ ಸಿನಿಮಾ ತೆರೆಗೆ ಬರುತ್ತಿರುವ ಖುಷಿಯಲ್ಲಿದ್ದ ನಿಶ್ವಿಕಾ ಸಿನಿಮಾ ಪುರವಣಿಗೆ ಮಾತಿಗೆ ಸಿಕ್ಕಿದ್ದರು. ಈ ಸಿನಿಮಾ ಬಗ್ಗೆ, ತಮ್ಮ ಪಾತ್ರದ ಬಗ್ಗೆ, ನಟನೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

‘ಇದು ಒಬ್ಬ ಹುಡುಗ ತನ್ನ ವೃತ್ತಿಯಲ್ಲಿ ಸಾಧನೆ ತೋರಬೇಕು ಹಾಗೂ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಬೇಕು ಎಂದು ಬಯಸುವ ಕಥೆ. ಆತ ಸಂಗೀತವನ್ನು ತನ್ನ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿರುತ್ತಾನೆ. ಅದೇ ಅವನ ಜೀವನದ ಮಹತ್ವಾಕಾಂಕ್ಷೆಯೂ ಆಗಿರುತ್ತದೆ. ಅದನ್ನು ಈಡೇರಿಸಿಕೊಳ್ಳುವ ಪಯಣ ಹೇಗಿರುತ್ತದೆ ಎಂಬುದು ಸಿನಿಮಾ ಕಥೆ’ ಎಂದು ಮಾತಿನ ಆರಂಭದಲ್ಲಿ ಚುಟುಕಾಗಿ ಹೇಳಿದರು ನಿಶ್ವಿಕಾ.

‘ನಾಯಕನ ಕುಟುಂಬದ ಕಥೆ ಒಂದು ಬದಿಯಲ್ಲಿ, ಆತನ ಪ್ರೀತಿಯ ಕಥೆ ಇನ್ನೊಂದು ಬದಿಯಲ್ಲಿ ಸಾಗುತ್ತಿರುತ್ತವೆ. ಪ್ರೀತಿಯ ಕಥೆಯ ಭಾಗ ನಾನು. ಅವನ ಜೀವನ ಪಯಣದಲ್ಲಿ ನನ್ನ ಪಾತ್ರ ಹೇಗೆ ಸೇರಿಕೊಳ್ಳುತ್ತದೆ ಎಂಬುದು ಕಥೆಯ ಭಾಗ’ ಎಂದರು.

ಕೆಲವು ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕಿಯ ಪಾತ್ರವು ನಾಯಕನ ಸುತ್ತ ಸುತ್ತುವುದಕ್ಕೆ ಮಾತ್ರ ಸೀಮಿತವಾಗುವುದೂ ಉಂಟು. ‘ನಿಮ್ಮ ಚಿತ್ರವೂ ಇದೇ ರೀತಿಯಲ್ಲಿ ಇದೆಯಾ’ ಎಂದು ಕೇಳಿದಾಗ, ‘ಇದು ಪ್ರೇಮಕಥೆ ಕೂಡ ಹೌದು ಎಂಬುದನ್ನು ಹೇಳಿಯಾಗಿದೆ. ಪ್ರೇಮಕಥೆ ಅಂದಾಗ ಅಲ್ಲಿ ನಾಯಕ ಮಾತ್ರ ಇರಲು ಸಾಧ್ಯವಿಲ್ಲವಲ್ಲ? ನಾಯಕಿ ಇರಲೇಬೇಕಲ್ಲ?’ ಎಂದು ಮರುಪ್ರಶ್ನೆ ಹಾಕಿದರು.

‘ನಾನು ಸಿನಿಮಾದಲ್ಲಿ ನಾಯಕನ ಬಾಲ್ಯದ ಪ್ರೇಯಸಿ. ಜೀವನದಲ್ಲಿ ಎಲ್ಲರಿಗೂ ಮೊದಲ ಪ್ರೀತಿ ಎಂಬುದೊಂದು ಇರುತ್ತದೆಯಲ್ಲ? ನಾಯಕನ ಮೊದಲ ಪ್ರೀತಿ ನಾನು. ನಾವಿಬ್ಬರೂ ಕಾಲೇಜು ಜೀವನದಲ್ಲಿ ಪ್ರೀತಿಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಕಥೆಯ ಭಾಗ. ಇವೆಲ್ಲವನ್ನೂ ಪರಿಗಣಿಸಿದರೆ ನನ್ನ ಪಾತ್ರ ಕೂಡ ಶ್ರೇಯಸ್ (ಚಿತ್ರದ ನಾಯಕ) ಅವರ ಪಾತ್ರದಷ್ಟೇ ಪ್ರಮುಖ’ ಎಂದು ಖಡಾಖಂಡಿತವಾಗಿ ಹೇಳಿದರು.

ನಿಶ್ವಿಕಾ ಚಿತ್ರರಂಗ ಪ್ರವೇಶಿಸಿ ಒಂದು ವರ್ಷ ಮಾತ್ರ ಆಗಿದೆ. ಎರಡನೆಯ ವರ್ಷದಲ್ಲಿ ಮೂರನೆಯ ಸಿನಿಮಾ ತೆರೆಗೆ ಬರುತ್ತಿದೆ. ‘ಪಡ್ಡೆಹುಲಿ ಸಿನಿಮಾದಿಂದಾಗಿ ನನಗೆ ಒಳ್ಳೆಯ ಎಕ್ಸ್‌ಪೋಷರ್‌ ಸಿಕ್ಕಿದೆ. ಈ ಸಿನಿಮಾ ಹೆಚ್ಚೆಚ್ಚು ಜನರಿಗೆ ತಲುಪಿದಂತೆಯಲ್ಲ ನನಗೂ ಒಳ್ಳೆಯದಾಗುತ್ತದೆ’ ಎಂಬ ಮಾತನ್ನು ಮಾತುಕತೆಯ ನಡುವೆ ಉಲ್ಲೇಖಿಸಿದರು.

ನಿಶ್ವಿಕಾ ಅವರಿಗೆ ಕನಸಿನ ಪಾತ್ರ, ತಾನು ಇಂಥದ್ದೇ ಪಾತ್ರ ನಿಭಾಯಿಸಬೇಕು ಎಂಬ ಬಯಕೆಗಳು ಇಲ್ಲ. ಅದಕ್ಕೆ ಅವರದೇ ಆದ ಕಾರಣಗಳು ಇವೆ. ‘ನಾನು ಇಂದೂ, ಹಿಂದೆಯೂ ಇಂಥದ್ದೇ ಪಾತ್ರ ಮಾಡಬೇಕು ಎಂಬ ಬಯಕೆ ಇಟ್ಟುಕೊಂಡಿರಲಿಲ್ಲ. ಮುಂದೆಯೂ ಅಂಥದ್ದೊಂದು ಬಯಕೆ ಇಟ್ಟುಕೊಳ್ಳುವುದಿಲ್ಲ. ಇಂಥದ್ದೊಂದು ಪಾತ್ರ ನಿಭಾಯಿಸಬೇಕು ಎಂಬ ಕನಸು ಇಟ್ಟುಕೊಂಡು, ಅದು ನಾವು ಅಂದುಕೊಂಡಿದ್ದಕ್ಕಿಂತ ಬೇಗ ಸಿಕ್ಕಿಬಿಟ್ಟರೆ ಮುಂದೆ ಏನು ಎಂಬ ಪ್ರಶ್ನೆ ಹುಟ್ಟಿಬಿಡುತ್ತದೆ. ಹಾಗಾಗಿಯೇ ನಾನು ಇಂಥದ್ದೇ ಒಂದು ಪಾತ್ರ ಮಾಡಬೇಕು ಎಂಬ ಆಲೋಚನೆಯನ್ನೇ ಇಟ್ಟುಕೊಳ್ಳಲಿಲ್ಲ. ಆದರೆ, ಬಗೆ ಬಗೆಯ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಇಷ್ಟವಂತೂ ಖಂಡಿತ ಇದೆ. ಹಾಗಾಗಿ, ವಿಭಿನ್ನವಾಗಿರುವ ಪಾತ್ರಗಳು ಸಿಗುತ್ತಿರಲಿ ಎಂದಷ್ಟೇ ಆಸೆಪಡುವೆ’ ಎನ್ನುತ್ತಾರೆ ಅವರು.

‘ಹ್ಞಾಂ , ಸಾಧಕಿಯೊಬ್ಬಳ ಜೀವನದ ಕಥೆ ಹೇಳುವ ಚಿತ್ರ ಮಾಡಬೇಕು ಎಂಬ ಆಸೆ ನನಗಿದೆ. ಆದರೆ ಯಾರ ಜೀವನದ ಕಥೆ ಎಂಬುದನ್ನು ಇನ್ನೂ ಆಲೋಚಿಸಿಲ್ಲ’ ಎಂದರು.

‘ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕಿ ಸಾಮಾನ್ಯವಾಗಿ ಕಥೆಯ ಕೇಂದ್ರ ಆಗಿರುವುದಿಲ್ಲವಲ್ಲ’ ಎಂದು ಪ್ರಶ್ನಿಸಿದಾಗ, ‘ಹಾಗೇನೂ ಇಲ್ಲವಲ್ಲ’ ಎಂದು ಉತ್ತರಿಸಿದರು.

‘ಎರಡೂ ಬಗೆಯ ಕಥೆಗಳು ನಮ್ಮಲ್ಲಿ ಬಂದಿವೆ. ಪ್ರೇಮಕಥೆ ಇರುವ ಸಿನಿಮಾಗಳನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ನಾಯಕನನ್ನು ಮಾತ್ರ ಕೇಂದ್ರವಾಗಿ ಇರಿಸಿಕೊಳ್ಳುವುದು ಕಡಿಮೆ. ನಾಯಕನಿಗೆ ಒಂದಿಷ್ಟು ಬಿಲ್ಡ್‌ಅಪ್‌ ದೃಶ್ಯಗಳು, ಫೈಟ್‌, ಹಾಡು ಇರಬಹುದು. ಆದರೆ ಪ್ರೀತಿಯ ದೃಶ್ಯಗಳಲ್ಲಿ ನಾಯಕಿ–ನಾಯಕಿ ಇಬ್ಬರೂ ಇರಬೇಕಾಗುತ್ತದೆ. ಇಬ್ಬರಿಗೂ ಸಮಾನ ಆದ್ಯತೆ ನೀಡಬೇಕಾಗುತ್ತದೆ. ಪಕ್ಕಾ ಮಾಸ್ ಸಿನಿಮಾಗಳಲ್ಲಿ ನಾಯಕನಿಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದು ನಿಜ. ಈ (ಪಡ್ಡೆಹುಲಿ) ಸಿನಿಮಾದಲ್ಲಿ ಎಲ್ಲ ಕಲಾವಿದರಿಗೂ ಅವರದೇ ಆದ ಪ್ರಾಮುಖ್ಯತೆ ಸಿಕ್ಕಿದೆ’ ಎಂಬ ವಿವರಣೆ ನೀಡಿದರು ನಿಶ್ವಿಕಾ.

‘ಒಂದು ಮಾತು ನಿಜ. ಹತ್ತು ಸಿನಿಮಾಗಳನ್ನು ಕೈಗೆತ್ತಿಕೊಂಡರೆ ಅದರಲ್ಲಿ ಆರು ಸಿನಿಮಾಗಳಲ್ಲಿ ನಾಯಕನಿಗೆ ಹೆಚ್ಚು ಪ್ರಾಮುಖ್ಯತೆ, ನಾಯಕಿಗೆ ನಾಲ್ಕು ಸಿನಿಮಾಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಎಂಬಂತೆ ಇರಬಹುದು’ ಎಂಬ ಅನಿಸಿಕೆ ವ್ಯಕ್ತಪಡಿಸಿದರು.

ಆದರೆ, ಕಮರ್ಷಿಯಲ್ ಸಿನಿಮಾಗಳ ನಿರ್ದೇಶನವನ್ನು ಹೆಣ್ಣುಮಕ್ಕಳೇ ಮಾಡುವಂತಾದರೆ, ಸ್ಥಿತಿ ಬದಲಾಗಬಹುದು ಎಂಬ ಅಭಿಪ್ರಾಯ ಅವರಲ್ಲಿದೆ.

ಗ್ಲಾಮರ್‌: ‘ಪಡ್ಡೆಹುಲಿ’ ಚಿತ್ರದಲ್ಲಿ ತಾವು ಗ್ಲಾಮರಸ್‌ ಆಗಿಯೂ ಡಿಗ್ಲಾಮರಸ್‌ ಆಗಿಯೂ ಕಾಣಿಸಿಕೊಂಡಿರುವುದಾಗಿ ಹೇಳಿದ ನಿಶ್ವಿಕಾ, ಇನ್ನೊಂದು ಪ್ರಶ್ನೆಯನ್ನು ಎತ್ತಿದರು.

‘ಸಾಮಾನ್ಯವಾಗಿ ನಾವು ಹಾಕುವ ಬಟ್ಟೆ ಆಧರಿಸಿ ಎಲ್ಲವನ್ನೂ ತೀರ್ಮಾನಿಸುತ್ತಾರೆ. ಚಿಕ್ಕ ಬಟ್ಟೆ ಹಾಕಿಕೊಂಡರೆ ಗ್ಲಾಮರಸ್, ಚೂಡಿದಾರ್ ಹಾಕಿಕೊಂಡರೆ ಡಿಗ್ಲಾಮರಸ್ ಪಾತ್ರ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ಆದರೆ ಇಂದು ಬಹುತೇಕರು ಎಲ್ಲ ರೀತಿಯ ಬಟ್ಟೆ ಧರಿಸುತ್ತಾರೆ. ಬಟ್ಟೆಯನ್ನು ನೋಡಿ ಈ ಪಾತ್ರ ಇಂಥದ್ದು ಎಂಬ ತೀರ್ಮಾನಕ್ಕೆ ಬರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು ನಿಶ್ವಿಕಾ.

ನಿಶ್ವಿಕಾ ಕನಸಿನ ಸಿನಿಮಾ ತಂಡ

‘ಕನಸಿನ ಸಿನಿಮಾ ತಂಡ ಅಂತ ಯಾವುದೂ ಇಲ್ಲ. ನನಗೆ ಎಲ್ಲ ದೊಡ್ಡ ನಟರ ಜೊತೆ ಅಭಿನಯಿಸಬೇಕು ಎಂಬ ಆಸೆ ಇದೆ. ನನಗೆ ಎಲ್ಲರೂ ಸಮಾನರು. ಆದರೆ, ಉಪ್ಪಿ ಸರ್ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯಂತೂ ಖಂಡಿತ ಇದೆ. ಹಾಗೆಯೇ, ಅನಂತ್ ನಾಗ್ ಸರ್‌ ಜೊತೆ ಅಭಿನಯಿಸಬೇಕು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT