ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–2: ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ನಾಮನಿರ್ದೇಶಿತರು

Published 10 ಜೂನ್ 2024, 8:38 IST
Last Updated 10 ಜೂನ್ 2024, 8:38 IST
ಅಕ್ಷರ ಗಾತ್ರ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಶೀಘ್ರದಲ್ಲೇ ನಡೆಯಲಿದ್ದು, 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ಪೋಷಕ ನಟಿ’ ವಿಭಾಗದಲ್ಲಿ ನಾಮನಿರ್ದೇಶಿತಗೊಂಡವರ ಪರಿಚಯಿಸುವ ಸಮಯ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್‌ ನೋಡಿ.
https://www.prajavani.net/cinesamman/season2

ಉಮಾಶ್ರೀ

‘ಕಾಸಿನಸರ’ ಚಿತ್ರದಲ್ಲಿನ ನಟನೆಗಾಗಿ ಉಮಾಶ್ರೀ ಅವರು ನಾಮನಿರ್ದೇಶನಗೊಂಡಿದ್ದಾರೆ. 1980ರಲ್ಲಿ ಗ್ರಾಮೀಣ ರಂಗಭೂಮಿ ಮುಖಾಂತರ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ಉಮಾಶ್ರೀ ಸದ್ಯ 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಹೆಜ್ಜೆ ಇಟ್ಟವರು ಇವರು. ಕಾಶಿನಾಥ್‌ ನಟಿಸಿ, ನಿರ್ದೇಶಿಸಿದ ‘ಅನುಭವ’ ಚಿತ್ರ ಉಮಾಶ್ರೀ ಸಿನಿಪಯಣಕ್ಕೆ ತಿರುವು ನೀಡಿತು. ‘ಗುಲಾಬಿ ಟಾಕೀಸ್‌’ನಲ್ಲಿನ ನಟನೆಗಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದರು. ‘ಪುಟ್ನಂಜ’ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದ ಇವರು ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲೂ ಸಕ್ರಿಯ. ‘ರತ್ನನ್‌ಪ್ರಪಂಚ’ ಹಾಗೂ ‘ವೇದ’ ಸಿನಿಮಾದಲ್ಲಿ ಉಮಾಶ್ರೀ ನಟನೆ ಮೆಚ್ಚುಗೆ ಪಡೆದಿತ್ತು. ‘ಕಾಸಿನಸರ’ ಸಿನಿಮಾದಲ್ಲಿ ‘ತಾಯವ್ವ’ ಪಾತ್ರದಲ್ಲಿ ಉಮಾಶ್ರೀ ನಟನೆ ಮನಸ್ಸು ತಟ್ಟಿತ್ತು. ಅವರು ಪ್ರಸ್ತುತ ಧನಂಜಯ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ತಾರಾ ಅನುರಾಧಾ

‘ಟಗರುಪಲ್ಯ’ ಚಿತ್ರದಲ್ಲಿನ ನಟನೆಗಾಗಿ ತಾರಾ ಅನುರಾಧಾ ಅವರು ನಾಮನಿರ್ದೇಶನ ಗೊಂಡಿದ್ದಾರೆ. ಬಾಲನಟಿಯಾಗಿ ಸಿನಿಪಯಣ ಆರಂಭಿಸಿದ ತಾರಾ ತಮಿಳು ಚಿತ್ರರಂಗಕ್ಕೆ ಮೊದಲು ಹೆಜ್ಜೆ ಇಟ್ಟರು. ‘ತುಳಸೀದಳ’ ಸಿನಿಮಾ ಮೂಲಕ ಕನ್ನಡ ಬೆಳ್ಳಿತೆರೆಯ ಪಯಣ ಆರಂಭಿಸಿದರು. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳ ಸಿನಿಮಾಗಳಲ್ಲೂ  ನಟಿಸಿದ್ದಾರೆ. ಅನುರಾಧಾ ಆಗಿದ್ದ ತಾರಾ ಪಿಯುಸಿಗೆ ಬರುವಷ್ಟರಲ್ಲೇ ಸುಮಾರು 60 ಸಿನಿಮಾಗಳಲ್ಲಿ ನಟಿಸಿದ್ದರು. ಗಿರೀಶ ಕಾಸರವಳ್ಳಿ ನಿರ್ದೇಶನದ ‘ಹಸೀನಾ’ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ‘ಕಾನೂರು ಹೆಗ್ಗಡತಿ’, ‘ಕರಿಮಲೆಯ ಕಗ್ಗತ್ತಲು’, ‘ಮುಂಜಾನೆಯ ಮಂಜು’, ‘ಸೈನೈಡ್‌’, ‘ಹೆಬ್ಬೆಟ್‌ ರಾಮಕ್ಕ’ ತಾರಾ ನಟಿಸಿದ ಪ್ರಮುಖ ಚಿತ್ರಗಳು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯದಲ್ಲೂ ಇವರು ಸಕ್ರಿಯ. ‘ಬಡವ ರಾಸ್ಕಲ್‌’, ‘ಟಗರುಪಲ್ಯ’ ಸಿನಿಮಾದಲ್ಲಿಅವರ ನಟನೆ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ‘ಕೋಟಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಗುಂಜಾಲಮ್ಮ

‘ಪಿಂಕಿ ಎಲ್ಲಿ?’ ಚಿತ್ರದಲ್ಲಿನ ನಟನೆಗಾಗಿ ಗುಂಜಾಲಮ್ಮ ಅವರು ನಾಮನಿರ್ದೇಶನಗೊಂಡಿದ್ದಾರೆ. ಯಾದಗಿರಿ ತಾಲ್ಲೂಕಿನ ರಾಮಸಮುದ್ರದ ಇವರು ವೃತ್ತಿಯಲ್ಲಿ ನಟಿಯಲ್ಲ. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು, ಮದುವೆಯಾದ ನಂತರ ಬೆಂಗಳೂರಿಗೆ ಬಂದವರು. ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಅವರು, ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ?’ ಹಾಗೂ ‘ಹದಿನೇಳೆಂಟು’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮನೆಗೆಲಸಕ್ಕೆ ಬರುವ ಉತ್ತರ ಕರ್ನಾಟಕ ಮೂಲದ ಮಹಿಳೆಯ ಪಾತ್ರದಲ್ಲಿ ಗುಂಜಾಲಮ್ಮ ತಮ್ಮ ನೈಜ ಅಭಿನಯದಿಂದ ಗಮನಸೆಳೆದಿದ್ದರು

ಪವಿತ್ರಾ ಲೋಕೇಶ್‌

‘ಸಪ್ತಸಾಗರದಾಚೆ ಎಲ್ಲೋ–Side A’ ಚಿತ್ರದಲ್ಲಿನ ನಟನೆಗಾಗಿ ಪವಿತ್ರಾ ಲೋಕೇಶ್‌ ಅವರು ನಾಮಿನಿರ್ದೇಶನಗೊಂಡಿದ್ದಾರೆ. ಅಂಬರೀಶ್‌ ನಟನೆಯ ‘ಮಿಸ್ಟರ್‌ ಅಭಿಷೇಕ್‌’ ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಪವಿತ್ರಾ ನಂತರ ವಿಷ್ಣುವರ್ಧನ್‌ ನಟನೆಯ ‘ಬಂಗಾರದ ಕಳಶ’ ಸಿನಿಮಾದಲ್ಲಿ ನಟಿಸಿದರು. ಬಳಿಕ ಸಿನಿಮಾದಿಂದ ಕೊಂಚ ದೂರ ಉಳಿದಿದ್ದರು. ಟಿ.ಎಸ್‌.ನಾಗಾಭರಣ ನಿರ್ದೇಶನದ ‘ಜನುಮದ ಜೋಡಿ’ ಸಿನಿಮಾ ಮೂಲಕ ಅವರು ಸಿನಿಪಯಣ ಪುನರಾರಂಭಿಸಿದ್ದರು. ಗಿರೀಶ ಕಾಸರವಳ್ಳಿ ನಿರ್ದೇಶನದ ‘ನಾಯಿ ನೆರಳು’ ಸಿನಿಮಾ ಅವರ ಸಿನಿಪಯಣದ ಪ್ರಮುಖ ಸಿನಿಮಾ. ಈ ಸಿನಿಮಾದಲ್ಲಿನ ನಟನೆಗಾಗಿ ಅವರಿಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ದೊರಕಿತ್ತು. ಅವರು ಪ್ರಸ್ತುತ ಚಂದನವನದ ಜೊತೆಗೆ ಟಾಲಿವುಡ್‌ನಲ್ಲೂ ಚಿರಪರಿಚಿತರು. ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ನಟಿಸಿ ಪ್ರಶಂಸೆ ಪಡೆದಿದ್ದಾರೆ.

ವೆನ್ಯಾ ಸಿ. ರೈ

‘ಭಾವಪೂರ್ಣ’ ಚಿತ್ರದಲ್ಲಿನ ನಟನೆಗಾಗಿ ವೆನ್ಯಾ ಸಿ. ರೈ ಅವರು ನಾಮನಿರ್ದೇಶನ ಗೊಂಡಿದ್ದಾರೆ. ಪುತ್ತೂರು ಮೂಲದ ವೆನ್ಯಾ, ಕಾಲೇಜು ಓದುತ್ತಿರುವಾಗಲೇ ಚಿತ್ರರಂಗ ಪ್ರವೇಶಿಸಿದವರು. ನಟ, ಯಕ್ಷಗಾನ ಕಲಾವಿದ ಚೇತನ್‌ ರೈ ಮಾಣಿ ಅವರ ಪುತ್ರಿ. ಬಾಲ್ಯದಿಂದಲೇ ಕಲೆಯ ನಂಟು, ಶಾಲಾ ದಿನಗಳಲ್ಲಿ ನೃತ್ಯ, ರಂಗಭೂಮಿ ಮುಂತಾದ ಕಲಾಪ್ರಕಾರಗಳ ಒಡನಾಟ ವೇನ್ಯಾ ಅವರನ್ನು ಸಿನಿಮಾ ಕ್ಷೇತ್ರದತ್ತ ಆಕರ್ಷಿಸಿತ್ತು. ಹಯವದನ ನಿರ್ದೇಶನದ ‘ಎಲ್ಲೋ ಜೋಗಪ್ಪ ನಿನ್ನರಮನೆ...’, ‘ಭಾವಪೂರ್ಣ’ ವೆನ್ಯಾ ನಟಿಸಿರುವ ಸಿನಿಮಾಗಳು. ಸದ್ಯ ಪುಷ್ಪರಾಜ್‌ ರೈ ನಿರ್ದೇಶನದ ‘ಆರಾಟ’ ಸಿನಿಮಾ ಬಿಡುಗಡೆಗೆ ಎದುರುನೋಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT