ಸೋಮವಾರ, ಆಗಸ್ಟ್ 2, 2021
28 °C

ಒಟಿಟಿಯತ್ತ ದಯಾಳ್‌ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ವರ್ಷ ದಯಾಳ್‌ ಪದ್ಮನಾಭನ್‌ ಆ್ಯಕ್ಷನ್‌ ಕಟ್‌ ಹೇಳಿದ್ದ ‘ರಂಗನಾಯಕಿ ವ್ಯಾಲ್ಯೂಮ್‌ 1’ ಸಿನಿಮಾ ಜನರ ಮೆಚ್ಚುಗೆ ಗಳಿಸಿತ್ತು. ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮ ವಿಭಾಗಕ್ಕೂ ಆಯ್ಕೆಯಾಗಿತ್ತು. ಈ ಸಿನಿಮಾದ ಬಳಿಕ ದಯಾಳ್‌ ಮತ್ತು ನಟ ಯೋಗಿ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಒಂಬತ್ತನೇ ದಿಕ್ಕು’ ಚಿತ್ರವೂ ಕುತೂಹಲ ಹೆಚ್ಚಿಸಿದೆ.

ಥ್ರಿಲ್ಲರ್‌ ಚಿತ್ರ ಇದು. ತಂದೆ ಮತ್ತು ಪುತ್ರನ ನಡುವೆ ನಡೆಯುವ ಹುಡುಕಾಟವೇ ಇದರ ತಿರುಳು. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯಾವುದೇ ಕಟ್‌ ಇಲ್ಲದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಬೆಂಗಳೂರಿನಲ್ಲಿಯೇ ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣ ನಡೆದಿದೆ. ಕ್ಲೈಮ್ಯಾಕ್ಸ್‌ ಶೂಟಿಂಗ್‌ ನಡೆದಿರುವುದು ಶ್ರೀರಂಗಪಟ್ಟಣದಲ್ಲಿ.

ಯೋಗಿ ಅವರದು ಟ್ರಾವೆಲ್‌ ಏಜೆಂಟ್‌ ಪಾತ್ರ. ಅದಿತಿ ಪ್ರಭುದೇವ ಇದರ ನಾಯಕಿ. ಅವರದ್ದು ಶಿವಮೊಗ್ಗದಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ಬರುವ ಹುಡುಗಿಯ ಪಾತ್ರವಂತೆ. ಒಂದು ದಿನದಲ್ಲಿ ನಡೆಯುವ ಕಥೆ ಇದಾಗಿದೆ.

ಒಟಿಟಿಗೆ ಕೊಡಲು ಸಿದ್ಧ

‘ಮಾರ್ಚ್ ತಿಂಗಳಿನಲ್ಲಿಯೇ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಸಿನಿಮಾವನ್ನು ಸಲ್ಲಿಸಲಾಗಿತ್ತು. ಲಾಕ್‌ಡೌನ್‌ನಿಂದಾಗಿ ಪ್ರಮಾಣ ಪತ್ರ ಸಿಗುವುದು ವಿಳಂಬವಾಯಿತು’ ಎಂದು ದಯಾಳ್‌ ಪದ್ಮನಾಭನ್‌ ‘ಪ್ರಜಾ ಪ್ಲಸ್‌’ಗೆ ತಿಳಿಸಿದರು.

ಪ್ರಸ್ತುತ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಚಿತ್ರಮಂದಿರಗಳ ಪ್ರದರ್ಶನ ಯಾವಾಗ ಶುರುವಾಗುತ್ತದೆ ಎಂಬುದು ಗೊತ್ತಿಲ್ಲ. ರಾಜ್ಯ ಸರ್ಕಾರ ಕೂಡ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮತ್ತೊಂದೆಡೆ ಒಟಿಟಿಯಲ್ಲಿ ಸಿನಿಮಾಗಳ ಬಿಡುಗಡೆಗೆ ನಿರ್ದೇಶಕರು ಮತ್ತು ನಿರ್ಮಾಪಕರು ಆಸಕ್ತಿ ತೋರುತ್ತಿದ್ದಾರೆ. ಒಳ್ಳೆಯ ಆಫರ್ ಬಂದರೆ ಒಟಿಟಿಯಲ್ಲಿ ‘ಒಂಬತ್ತನೇ ದಿಕ್ಕು’ ಸಿನಿಮಾ ಬಿಡುಗಡೆಗೆ ದಯಾಳ್‌ ಅವರು ನಿರ್ಧರಿಸಿದ್ದಾರಂತೆ.

‘ಒಳ್ಳೆಯ ಸಿನಿಮಾ ಮಾಡಿದ್ದೇನೆ. ಉತ್ತಮ ಮೊತ್ತ ಲಭಿಸಿದರೆ ಒಟಿಟಿಯಲ್ಲಿ ಬಿಡುಗಡೆಗೆ ನಾನು ಸಿದ್ಧ. ಆದರೆ, ಇನ್ನೂ ಅಂತಹ ಆಫರ್‌ಗಳು ಬಂದಿಲ್ಲ. ನಾನು ಕೂಡ ಪ್ರಯತ್ನ ಮುಂದುವರಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

ಲಾಕ್‌ಡೌನ್‌ ಅವಧಿಯಲ್ಲಿ ದಯಾಳ್‌ ನಾಲ್ಕು ಹೊಸ ಸ್ಕ್ರಿಪ್ಟ್‌ಗಳನ್ನು ಸಿದ್ಧಪಡಿಸಿದ್ದಾರಂತೆ. ‘ಈ ಪೈಕಿ ಕ್ರೈಮ್‌ ಥ್ರಿಲ್ಲರ್‌ನ ಹೊಸ ಸ್ಕ್ರಿಪ್ಟ್‌ ಅಂತಿಮಗೊಂಡಿದೆ. ಪೊಲೀಸ್‌ ಠಾಣೆಯಲ್ಲಿ ನಡೆಯುವ ಕಥೆ ಇದು. ಇನ್ನೂ ಇದರ ಪಾತ್ರವರ್ಗದ ಆಯ್ಕೆ ನಡೆದಿಲ್ಲ. ಲಾಕ್‌ಡೌನ್‌ ಮುಗಿದ ಬಳಿಕ ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗುತ್ತೇನೆ’ ಎಂದರು.

‘ರಂಗನಾಯಕಿ ವ್ಯಾಲ್ಯೂಮ್‌ ಸರಣಿ ಸಿನಿಮಾಗಳ ಕಥಾವಸ್ತು ಸಿದ್ಧವಿದೆ. ಕೊರೊನಾ ಎಲ್ಲದ್ದಕ್ಕೂ ಅಡ್ಡಿಪಡಿಸಿದೆ. ಹಾಗಾಗಿ, ಪ್ರಸಕ್ತ ವರ್ಷ ಈ ಸರಣಿ ಸಿನಿಮಾಗಳನ್ನು ಮಾಡುವುದಿಲ್ಲ. ಮುಂದಿನ ವರ್ಷ ಮಾಡುವ ಆಲೋಚನೆಯಲ್ಲಿದ್ದೇನೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು