ಶನಿವಾರ, ಜನವರಿ 29, 2022
22 °C

ಚಂದನವನ: ಓಮೈಕ್ರಾನ್‌... ಕಟ್‌... ಪ್ಯಾಕಪ್‌ !?

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ಸಿನಿಮಾ ಉದ್ಯಮವನ್ನೂ ಓಮೈಕ್ರಾನ್‌ ಭೀತಿ ಅಲುಗಾಡಿಸಿದೆ. ಬೆಳ್ಳಿತೆರೆಯಲ್ಲಿ ಮತ್ತೆ ಕತ್ತಲಾವರಿಸುವ ಆತಂಕ ಎದುರಾಗಿದೆ. ‘ಮುಂದೇನು’ ಎಂಬ ಚಿಂತೆ ಈ ಕ್ಷೇತ್ರದವರನ್ನು ಕಾಡುತ್ತಿದೆ. ‘ಸಿನಿಮಾ ಪುರವಣಿ’ ಮುಂದೆ ಅವರು ತಮ್ಮ ಆತಂಕ ಹೊರಹಾಕಿದ್ದು ಹೀಗೆ...

ರಾಜ್ಯದಲ್ಲಿ, ಕೋವಿಡ್‌ ಪ್ರಕರಣಗಳ ಹೆಚ್ಚಳ, ಓಮೈಕ್ರಾನ್‌ ಭೀತಿ, ಸರ್ಕಾರದ ಕಠಿಣ ನಿಯಮಗಳ ಕಾರಣ ಚಿತ್ರರಂಗದ ಚಟುವಟಿಕೆಗಳಿಗೆ ಭಾರೀ ಹೊಡೆತ ಬೀಳುವ ಆತಂಕ ಎದುರಾಗಿದೆ. ‘ಲೈಟ್ಸ್‌– ಕ್ಯಾಮೆರಾ– ಆ್ಯಕ್ಷನ್‌....’ ಎಂದೆಲ್ಲಾ ಕೂಗುತ್ತಿದ್ದ ನಿರ್ದೇಶಕರು ಸದ್ಯ ‘ಓಮೈಕ್ರಾನ್‌–ಕಟ್‌– ಪ್ಯಾಕಪ್‌’ ಹೇಳುವ ಸ್ಥಿತಿಗೆ ಬಂದಿದ್ದಾರೆ. 

ದೊಡ್ಡ ಬಜೆಟ್‌ ಸಿನಿಮಾಗಳ ಬಿಡುಗಡೆ ಮುಂದೂಡಿಕೆ, ಜೊತೆಗೆ ಕನ್ನಡದ ಯಾವುದೇ ಸಿನಿಮಾ ಬಿಡುಗಡೆ ಆಗದಿರುವುದು, ಪ್ರಚಾರ ಸ್ಥಗಿತವಾಗಿರುವುದು ಆ ಕ್ಷೇತ್ರದಲ್ಲಿ ಖಾಲಿತನ ಸೃಷ್ಟಿಸಿದೆ. 

ನಿರ್ಮಾಣ – ಪ್ರಚಾರ– ‍ಪ್ರದರ್ಶನ–ಗಳಿಕೆ ಈ ಒಟ್ಟಾರೆ ಚಕ್ರವೇ ಸ್ಥಗಿತಗೊಂಡಂತಾಗಿದೆ. ನಿರ್ಮಾಪಕರಿಗೆ ಹಣ ಹೂಡಿ ಕಾಯುವ ತಲೆನೋವು, ಕಾರ್ಮಿಕರಿಗೆ ಮತ್ತೆ ಕೈ ಖಾಲಿಯಾಗುವ ಭೀತಿ. ಪುಟ್ಟ ವೈರಾಣುವೊಂದು ಬೃಹತ್ ಉದ್ಯಮವನ್ನು ಅಲುಗಾಡಿಸಿದ ಪರಿ ಇದು. 

ಚಿತ್ರಮಂದಿರದ ಮಾಲೀಕರೊಬ್ಬರ ಪ್ರಕಾರ, ‘ಕಳೆದ ವಾರ ಮೂರು ಕನ್ನಡ ಚಿತ್ರಗಳು ಬಿಡುಗಡೆಯಾದವು. ಅವು ಕನಿಷ್ಠ ಎರಡು ವಾರ ಓಡಬಹುದು ಅಷ್ಟೇ. ಚಿತ್ರಮಂದಿರ ಖಾಲಿ ಬಿಡುವ ಬದಲು ಮತ್ತೂ ಒಂದು ವಾರ ಪ್ರದರ್ಶಿಸಬಹುದು. ಆದರೆ, ಶೇ 50ರ ಆಸನ ಭರ್ತಿ ನಿಯಮ ಬಂದರೆ ನಮಗೆ ಬರುವ ಪ್ರೇಕ್ಷಕರು
ಶೇ 25ಕ್ಕಿಂತಲೂ ಕಡಿಮೆ. ಏಕೆಂದರೆ ವಾರದ ದಿನಗಳಲ್ಲಿ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರೂ ಶೇ 50ರಷ್ಟೇ ಇರುತ್ತಾರೆ’ ಎನ್ನುತ್ತಾರೆ. 

‘ವಾರಾಂತ್ಯದ ಲಾಕ್‌ಡೌನ್‌ನಲ್ಲಂತೂ ತಿಂಗಳಲ್ಲಿ 8 ದಿನ ಚಿತ್ರಮಂದಿರ ಮುಚ್ಚಲೇಬೇಕಾಗಿದೆ. ಒಂದಿಷ್ಟು ಆದಾಯ ಬರುವುದೇ ವಾರಾಂತ್ಯದಲ್ಲಿ. ಸದ್ಯದ ಸ್ಥಿತಿಯಲ್ಲಿ ಮನೋರಂಜನೆಯು ಸಾಮಾನ್ಯ ಪ್ರೇಕ್ಷಕನ ಕೊನೆಯ ಆಯ್ಕೆ. ಈ ಇತಿಮಿತಿ, ಆದಾಯದ ಕೊರತೆ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆಯೂ ಇಳಿಮುಖವಾಗಲಿದೆ’ ಎಂಬುದು ಅವರ ಅಭಿಪ್ರಾಯ. 

ಪ್ರಚಾರ ಸಂಸ್ಥೆಗಳೂ ಮೌನ: ಸಿನಿಮಾದ ಪ್ರಚಾರ ವಿನ್ಯಾಸ, ಕಟೌಟ್‌, ಬ್ಯಾನರ್‌ ಮಾಡುತ್ತಿದ್ದ ಕಾರ್ಮಿಕರೂ ಈ ವಾರದಿಂದ ಕೆಲಸವಿಲ್ಲದಂತಾಗಿದ್ದಾರೆ.

‘ದೊಡ್ಡ ಬಜೆಟ್‌ ಚಿತ್ರಗಳ ನಿರ್ಮಾಪಕರು ಕಾದು ನೋಡಲು ನಿರ್ಧರಿಸಿದ್ದಾರೆ. ಸಿನಿಮಾ ಕ್ಷೇತ್ರದ ಅರ್ಥವ್ಯವಸ್ಥೆಯೇ ಕೆಟ್ಟು ಹೋಗಲಿದೆ. ನಿರ್ಮಾಣಕ್ಕೆ ಹೂಡಿದ ಹಣದ ಬಡ್ಡಿ ವಿಪರೀತ ಏರುತ್ತಿದೆ. ಸರ್ಕಾರ ಲಾಕ್‌ಡೌನ್‌ನಂಥ ನಿರ್ಧಾರಕ್ಕೆ ಬರಬಾರದಿತ್ತು’ ಎಂಬುದು ನಿರ್ಮಾಪಕರ ಅಳಲು. 

‘ಚಿತ್ರಮಂದಿರಗಳು ಇತ್ತೀಚೆಗಷ್ಟೇ ತೆರೆದುಕೊಂಡಿವೆ. ಮತ್ತೆ ಲಾಕ್‌ಡೌನ್‌, ಶೇ 50ರ ಪ್ರೇಕ್ಷಕರ ಪ್ರವೇಶ ಎಂದೆಲ್ಲಾ ನಿಯಮಗಳನ್ನು ತಂದರೆ ಈ ಉದ್ಯಮ ನಡೆಸುವುದು ಅಸಾಧ್ಯ. ಆದ್ದರಿಂದ ಸರ್ಕಾರ ಈ ಉದ್ಯಮವನ್ನು ಚಾಲನಾ ಸ್ಥಿತಿಯಲ್ಲಿ ಇಡುವಂತೆ ಅವಕಾಶ ಕಲ್ಪಿಸಿ ನಿಯಮ ರೂಪಿಸಬೇಕು’ ಎಂಬುದು ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌ ಕೋರಿಕೆಯಾಗಿದೆ.

‘ಸದ್ಯ ಚಿತ್ರರಂಗದ ಸಮಯವೇ ಸರಿಯಿಲ್ಲ ಎಂದೆನಿಸುತ್ತದೆ. ಯಾವುದೇ ಸಿನಿಮಾ ಮೂರು, ನಾಲ್ಕು ದಿನ ಚೆನ್ನಾಗಿ ಪ್ರದರ್ಶನವಾಗುತ್ತದೆ. ಬಳಿಕ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗುತ್ತದೆ. ಮುಂದೆ ಶೇ 50ರಷ್ಟು ಆಸನ ಭರ್ತಿಗೆ ಅವಕಾಶ ಇದ್ದರೂ ಜನರು ಬರುವುದಿಲ್ಲ. ಚಿತ್ರಗಳ ಬಿಡುಗಡೆ ಇಲ್ಲವಾದಲ್ಲಿ ಚಿತ್ರಮಂದಿರ ಮುಚ್ಚುವುದು ಅನಿವಾರ್ಯವಾಗಲಿದೆ’ ಎಂಬುದು ಉತ್ತರ ಕರ್ನಾಟಕ ಚಿತ್ರ ಪ್ರದರ್ಶಕರ ಮಹಾಮಂಡಲದ ಅಧ್ಯಕ್ಷ ಓದುಗೌಡರ್‌ ಅಭಿಪ್ರಾಯ. 

‘ವಿಕ್ರಾಂತ್‌ ರೋಣ’ಗೆ ಭರ್ಜರಿ ಆಫರ್‌

ಕಿಚ್ಚ ಸುದೀಪ್‌ ಅಭಿನಯದ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್‌ ಇಂಡಿಯಾ ಚಿತ್ರ ‘ವಿಕ್ರಾಂತ್‌ ರೋಣ‘ ಚಿತ್ರಕ್ಕೆ ಒಟಿಟಿ ವೇದಿಕೆಯಿಂದ ಭರ್ಜರಿ ಆಫರ್‌ ಬಂದಿದೆ. ‘ಸುಮಾರು ₹ 90 ಕೋಟಿವರೆಗೆ ಆಫರ್‌ ಬಂದಿದೆ’ ಎಂದು ನಿರ್ಮಾಪಕ ಜಾಕ್‌ ಮಂಜು ಅವರೇ ಖಚಿತಪಡಿಸಿದ್ದಾರೆ.

‘ಕನ್ನಡ ಚಿತ್ರವೊಂದಕ್ಕೆ ಮೊದಲ ಬಾರಿ ಒಟಿಟಿಯಿಂದ ಇಷ್ಟೊಂದು ಮೊತ್ತದ ಆಫರ್‌ ಬಂದಿರುವುದು ಸಂತಸ ತಂದಿದೆ’ ಎಂದು ಅವರು ಹೇಳಿದರು.

‘ಒಟಿಟಿ, ಕನ್ನಡ ಹಾಗೂ ಚಿತ್ರದ ಹಿಂದಿ ಅವತರಣಿಕೆಯ ಸ್ಯಾಟಲೈಟ್‌ ಪ್ರಸಾರ ಹಕ್ಕು ಸೇರಿ ಸುಮಾರು ₹ 110ರಿಂದ ₹120 ಕೋಟಿವರೆಗೆ ಮೊತ್ತ ಸಿಗಲಿದೆ. ಚಿತ್ರದ ಬಜೆಟ್‌ ₹100 ಕೋಟಿ ಆಗಿದೆ. ಈ ಕೊಡುಗೆಯ ಕಾರಣಕ್ಕೆ ನಾವು ಚಿತ್ರವನ್ನು ತಕ್ಷಣಕ್ಕೆ ಒಟಿಟಿಗೆ ಕೊಡುವುದಿಲ್ಲ. ಚಿತ್ರವನ್ನು 3ಡಿಯಲ್ಲಿ ನಿರ್ಮಾಣ ಮಾಡಿದ್ದೇವೆ. ಇದನ್ನು ಚಿತ್ರಮಂದಿರಗಳಲ್ಲೇ ಜನರಿಗೆ ತೋರಿಸಬೇಕು ಎಂದು ನಿರ್ಧರಿಸಿದ್ದೇವೆ. ಅದಕ್ಕಾಗಿಯೇ 2 ವರ್ಷ ಕಾದಿದ್ದೇವೆ . ಫೆ. 24ಕ್ಕೆ ಚಿತ್ರಮಂದಿರಗಳಲ್ಲೇ ‘ವಿಕ್ರಾಂತ್‌ ರೋಣ’ ಬಿಡುಗಡೆಗೆ ನಿರ್ಧರಿಸಿದ್ದೇವೆ. ಪರಿಸ್ಥಿತಿಯ ಕಾರಣದಿಂದ ಗೊಂದಲದಲ್ಲಿದ್ದೇವೆ’ ಎಂದು ಅವರು ಹೇಳಿದರು.

ಕರ್ಫ್ಯೂ ಸಡಿಲಿಸಲು ಮನವಿ

ವಾರಾಂತ್ಯದ ಕರ್ಫ್ಯೂವನ್ನು ಸಡಿಲಿಸಿ ಕೊನೇ ಪಕ್ಷ ಶೇ 50ರ ಆಸನ ಭರ್ತಿಯಲ್ಲಿ ಶನಿವಾರ ಭಾನುವಾರ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಎಂದು ನಿರ್ಮಾಪಕರು ಕೋರಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ಜೊತೆ ಚರ್ಚಿಸಲು ಸಮಯ ಕೇಳಿದ್ದೇವೆ. ಶುಕ್ರವಾರ ಬಿಡುಗಡೆಯಾಗುವ ಸಿನಿಮಾಗಳು ಶನಿವಾರ– ಭಾನುವಾರವೇ ಪ್ರದರ್ಶನ ಇಲ್ಲವಾದರೆ ಉದ್ಯಮದ ಆರ್ಥಿಕ ಬಂಡಿ ಮುಂದುವರಿಯುವುದು ಅಸಾಧ್ಯ.

– ಡಿ.ಆರ್‌. ಜೈರಾಜ್‌, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಏನನ್ನೂ ನಿರ್ಧರಿಸುವಂತಿಲ್ಲ

ಬಿಗ್‌ ಬಜೆಟ್‌ ಚಿತ್ರಗಳೇ ಮುಂದಕ್ಕೆ ಹೋಗಿವೆ. ಪರಿಸ್ಥಿತಿ ನೋಡಿಕೊಂಡು ಬಿಡುಗಡೆಯ ದಿನಾಂಕವನ್ನು ನಿರ್ಧರಿಸುತ್ತೇವೆ. ಸದ್ಯ ಏನನ್ನೂ ನಿರ್ಧರಿಸುವ ಸ್ಥಿತಿಯಲ್ಲಿ ನಾವಿಲ್ಲ. 

-ಶ್ರೀನಿ, ನಟ, ನಿರ್ದೇಶಕ, ‘ಓಲ್ಡ್‌ ಮಾಂಕ್‌’

ದಿಕ್ಕು ತೋಚುತ್ತಿಲ್ಲ

ಲಾಕ್‌ಡೌನ್‌ ಅಥವಾ ಯಾವುದೇ ನಿರ್ಬಂಧಗಳು ಬಂದರೆ ನಿರ್ಮಾಪಕರ ಪರಿಸ್ಥಿತಿ ಅಧೋಗತಿಗಿಳಿಯುತ್ತದೆ. ಎರಡು ಅಲೆಗಳು ಬಂದು ಹೋದವು. ಇನ್ನು ಯಾವುದೇ ಭಯ ಇರಲಿಕ್ಕಿಲ್ಲ ಎಂದು ನಿಟ್ಟುಸಿರುಬಿಟ್ಟಿದ್ದೆವು. ಈಗ ಮತ್ತೆ ಆತಂಕ ಶುರುವಾಗಿದೆ. ಚಿತ್ರರಂಗದ ಚಟುವಟಿಕೆಗಳನ್ನು ಮುಕ್ತವಾಗಿ ನಡೆಸುವಂತಿಲ್ಲ. ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವಂತಿಲ್ಲ. ಒಟ್ಟಾರೆ ದಿಕ್ಕು ತೋಚದಂತಾಗಿದೆ.

– ಡಿ.ಕೆ.ರಾಮಕೃಷ್ಣ, ಅಧ್ಯಕ್ಷ, ನಿರ್ಮಾಪಕರ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು