ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಸಂಗಮ ಆನ್ಲೈನ್ ಚಿತ್ರೋತ್ಸವ: ಸಿನಿಪ್ರಿಯರಿಗೆ ಚಲನಚಿತ್ರ ಅಕಾಡೆಮಿ ಉಡುಗೊರೆ

Last Updated 2 ನವೆಂಬರ್ 2020, 8:44 IST
ಅಕ್ಷರ ಗಾತ್ರ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಚಲನಚಿತ್ರ ಅಕಾಡೆಮಿಯು ವಿನೂತನ ಕಾರ್ಯಕ್ರಮಕ್ಕೆ ಮುಂದಡಿ ಇಟ್ಟಿದೆ. ‘ಚಿತ್ರ ಸಂಗಮ’ ಹೆಸರಿನಲ್ಲಿ ಆನ್ಲೈನ್ ಚಲನಚಿತ್ರೋತ್ಸವವನ್ನು ರಾಜ್ಯೋತ್ಸವದ ಉಡುಗೊರೆಯಾಗಿ ಚಿತ್ರ ರಸಿಕರಿಗೆ ನೀಡಿದೆ.

ಕನ್ನಡದ ಶ್ರೇಷ್ಠ ಚಿತ್ರಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರೇಕ್ಷಕರ ವೀಕ್ಷಣೆಗೆ ಅನುಕೂಲವಾಗವಂತೆ ನೀಡುತ್ತಿದೆ. ನ.1ರಂದು ಆರಂಭವಾಗಿರುವ ‘ಚಿತ್ರ ಸಂಗಮ ಆನ್ಲೈನ್’ ಚಲನಚಿತ್ರೋತ್ಸವಕ್ಕೆ ‘ಜೂಮ್ ಸಮ್ಮೇಳನ’ದ ಮೂಲಕ ವಾರ್ತಾ ಮತ್ತು ಸಾರ್ವಜಕನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಚಾಲನೆ ನೀಡಿದ್ದಾರೆ.

‘ಕನ್ನಡ ಚಿತ್ರಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಹಾಗೂ ಕನ್ನಡದ ಚಿತ್ರ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸುವ ಚಲನಚಿತ್ರ ಅಕಾಡೆಮಿಯ ವಿನೂತನ ಪ್ರಯತ್ನ ಶ್ಲಾಘನೀಯ. ಕನ್ನಡ ಚಿತ್ರರಂಗದ ಈವರೆಗಿನ ಸಾಧನೆ ಅಪಾರ. ಕನ್ನಡ ಚಿತ್ರೋದ್ಯಮದಿಂದ ಜಗತ್ತಿನ ಶ್ರೇಷ್ಠ ಚಿತ್ರಗಳು ನಿರ್ಮಾಣವಾಗಿವೆ. ಬೇರೆ ಬೇರೆ ಕಾರಣಗಳಿಂದ ಅವುಗಳಲ್ಲಿ ಕೆಲವು ಶ್ರೇಷ್ಠ ಚಿತ್ರಗಳಿಗೆ ಮನ್ನಣೆ ಸಿಗದಿರಬಹುದು. ಆದರೆ ಅಕಾಡೆಮಿ ಈ ವಿನೂತನ ಪ್ರಯತ್ನ ಚಿತ್ರರಂಗವನ್ನು ಹೊಸ ದಿಕ್ಕಿಗೆ ಕೊಂಡೊಯ್ಯಲಿದೆ. ಅಕಾಡೆಮಿಯ ಈ ಎಲ್ಲ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸುತ್ತದೆ ಮತ್ತು ಚಿತ್ರೋದ್ಯಮವನ್ನು ಪ್ರೋತ್ಸಾಹಿಸುತ್ತಿದೆ’ ಎಂದಿದ್ದಾರೆ ಮಹೇಶ್ವರ ರಾವ್.

‘ಕೊರೊನಾ ಅವಘಡದ ಸಂದರ್ಭದಲ್ಲಿ ಮನರಂಜನೆಯಲ್ಲದೆ ಇತರೆ ಕ್ಷೇತ್ರಗಳೂ ಸಂಕುಚಿತಗೊಂಡು ಜಾಗತಿಕ ಮಟ್ಟದಲ್ಲಿ ಸಂಕಷ್ಟ ಎದುರಿಸಬೇಕಾಯಿತು. ಇಂತಹ ಸಂದರ್ಭದಲ್ಲಿ ಆನ್ಲೈನ್ ಉತ್ಸವಗಳು ಪ್ರಚಲಿತವಾಗಿದ್ದು, ಅನಿವಾರ್ಯವಾಯೂ ಆಗಿವೆ. ಇಂತಹ ಕ್ರಿಯಾಶೀಲ ಪ್ರಯತ್ನವನ್ನು ಇಲಾಖೆ ಸಂಪೂರ್ಣ ಬೆಂಬಲಿಸುತ್ತದೆ. ಇದನ್ನು ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳ ಮೂಲಕ ಜಗತ್ತಿನ ಎಲ್ಲ ಮೂಲೆಮೂಲೆಗಳಿಗೆ ತಲುಪಿಸುವ ಪ್ರಯತ್ನ ಅಕಾಡೆಮಿಯಿಂದ ಆಗಬೇಕು’ ಎನ್ನುವ ಮಾತು ಸೇರಿಸಿದ್ದಾರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯಕ್ತ ಡಾ.ಪಿ.ಎಸ್.ಹರ್ಷ.

ನಾಲ್ಕೂ ವಾರವೂ ಸಿನಿಮಾ ವೀಕ್ಷಣೆ

‘ಕನ್ನಡದ ಅತ್ಯಂತ ಶ್ರೇಷ್ಠ ಚಿತ್ರಗಳನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನವೇ ಚಿತ್ರ ಸಂಗಮ. ಪ್ರತಿ ವಾರ ಮೂರು ಚಿತ್ರಗಳನ್ನು ನಮ್ಮ ಜಾಲತಾಣದಲ್ಲಿ ಜೋಡಿಸಿದ್ದು, ನವೆಂಬರ್ ತಿಂಗಳ ನಾಲ್ಕು ವಾರವೂ ವಿವಿಧ ಚಿತ್ರಗಳನ್ನು ಚಿತ್ರ ಪ್ರೇಮಿಗಳಿಗೆ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಅಕಾಡೆಮಿಯಿಂದ ಆನ್ಲೈನ್ ಚಿತ್ರೋತ್ಸವದ ಮೊದಲ ಪ್ರಯತ್ನ ಇದು. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷಾ ಚಿತ್ರಗಳು, ಕಿರು ಚಿತ್ರಗಳು... ಹೀಗೆ ಜಗತ್ತಿನ ಶ್ರೇಷ್ಠ ಕನ್ನಡ ಚಿತ್ರಗಳನ್ನು ಕೊಡಲಾಗುವುದು’ ಎಂದಿದ್ದಾರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್.

‘ಚಿತ್ರ ಸಂಗಮ’ ವಿಭಾಗ ಕ್ಲಿಕ್ಕಿಸಿ

ಮೊದಲ ವಾರ ಕನ್ನಡದ ಶ್ರೇಷ್ಠ ಚಿತ್ರಗಳಾದ ಹಾಗೂ ಕನ್ನಡದ ನಾಡು ನುಡಿ, ಭಾಷೆಗೆ ಒತ್ತು ನೀಡಿ ನಿರ್ಮಿಸಿರುವ ‘ಇಮ್ಮಡಿ ಪುಲಿಕೇಶಿ‘, ‘ಕಥಾ ಸಂಗಮ’, ‘ಒಂದಾನೊಂದು ಕಾಲದಲ್ಲಿ’ ಚಿತ್ರಗಳು ವೀಕ್ಷಣೆಗೆ ಲಭ್ಯವಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಜಾಲತಾಣ ( https://kcainfo.in ) ಇಲ್ಲಿ ‘ಚಿತ್ರ ಸಂಗಮ’ ವಿಭಾಗ ಕ್ಲಿಕ್ಕಿಸಿ ನೋಂದಣಿ ಮಾಡುವ ಮೂಲಕ ಚಿತ್ರಗಳನ್ನು ಸಾರ್ವಜನಿಕರು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT