ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಪಣಜಿ ವಿಶ್ವ ಸಿನಿಮೋತ್ಸವ

Published 20 ನವೆಂಬರ್ 2023, 0:01 IST
Last Updated 20 ನವೆಂಬರ್ 2023, 0:01 IST
ಅಕ್ಷರ ಗಾತ್ರ

ಪಣಜಿ: ಐವತ್ತನಾಲ್ಕನೆಯ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಸಿದ್ಧತೆಗಳು ಇನ್ನೂ ಪೂರ್ಣಗೊಂಡಿಲ್ಲ. ಹಿಂದಿನ ಹಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಚಿತ್ರೋತ್ಸವಕ್ಕೆ ಹೆಚ್ಚಿನ ಉತ್ಸಾಹ ಕಂಡು ಬಂದಿಲ್ಲ.

ಚಿತ್ರೋತ್ಸವದ ಕೇಂದ್ರವಾದ ಪಣಜಿಯ ಐನಾಕ್ಸ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಸಂಜೆವರೆಗೂ ಕೊನೆಯ ಹಂತದ ಸಿದ್ದತೆಗಳಲ್ಲಿ ಹಲವಾರು ಕಾರ್ಮಿಕರು ತೊಡಗಿದ್ದರು.

ನ.20 ರಿಂದ 28ರವರೆಗೆ ಚಿತ್ರೋತ್ಸವಕ್ಕಾಗಿ ದೇಶ, ವಿದೇಶಗಳಿಂದ ಬರುವ ಪ್ರತಿನಿಧಿಗಳಿಗೆ ಮತ್ತು ಸ್ಥಳೀಯರಿಗೆ ಜಗತ್ತಿನ ವಿವಿಧ ದೇಶಗಳ 195ಕ್ಕೂ ಹೆಚ್ಚು ಸಿನಿಮಾಗಳನ್ನು ನೋಡುವ ಮತ್ತು ಚರ್ಚಿಸುವ ಅವಕಾಶವಿದೆ.

ಸೋಮವಾರ ಸಂಜೆ (ನ.20) 5 ಗಂಟೆಗೆ ಗೋವಾ ವಿಶ್ವ ವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೋತ್ಸವದ ಉದ್ಘಾಟನೆ ನೆರವೇರಲಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ದೀಪ ಬೆಳಗಿಸಿ ಚಿತ್ರೋತ್ಸವವನ್ನು ಉದ್ಘಾಟಿಸುವರು. ರಾಜ್ಯಪಾಲ ಶ್ರೀಧರನ್ ಪಿಳ್ಳೈ , ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಭಾರತೀಯ ಸಿನಿಮಾ ಕಲಾವಿದರಾದ ವಿಜಯ್ ಸೇತುಪತಿ, ಮಾಧುರಿ ದೀಕ್ಷಿತ್, ಪಂಕಜ್ ತ್ರಿಪಾಠಿ, ಸಾರಾ ಅಲಿಖಾನ್, ಸನ್ನಿ ಡಿಯೋಲ್, ಕರಣ್ ಜೋಹರ್, ಶ್ರೇಯಾ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು.

ಸತ್ಯಜಿತ್ ರೇ ಹೆಸರಿನಲ್ಲಿ ನೀಡುವ ಜೀವಮಾನ ಸಾಧನೆ ಪುರಸ್ಕಾರಕ್ಕೆ ಸ್ವೀಕರಿಸಲಿರುವ ಹಾಲಿವುಡ್ ನಟ ಮೈಕೇಲ್ ಡಗ್ಲಾಸ್ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವರು.

ಉದ್ಘಾಟನೆಗೆ ಮೊದಲೇ ಐನಾಕ್ಸ್ ಕಾಂಪ್ಲೆಕ್ಸ್‌ನ ನಾಲ್ಕು ತೆರೆಗಳಲ್ಲಿ ಮಧ್ಯಾಹ್ನ 2.30ಕ್ಕೆ ಬ್ರಿಟಿಷ್ ಸಿನಿಮಾ, ಕ್ಯಾಚಿಂಗ್ ಡಸ್ಟ್ ಪ್ರದರ್ಶನಗೊಳ್ಳಲಿದೆ. ನ.21ರಂದು ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿ ಅಸ್ಸಾಮಿ ಭಾಷೆಯ ಲಚಿತ್ ಬೋರ್ಪುಕಾನ್ ಪ್ರದರ್ಶನಗೊಳ್ಳಲಿದೆ. ಇದೇ ವಿಭಾಗದಲ್ಲಿ ಕನ್ನಡದ ಆರಾರಿರಾರೋ ಪ್ರದರ್ಶನಗೊಳ್ಳಲಿವೆ. ಕನ್ನಡದ ಇನ್ನೊಂದು ಚಿತ್ರ ಕಾಂತಾರ ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.

ಮೂರು ವರ್ಷಗಳಿಂದ ನವೀಕರಣದ ನೆಪದಲ್ಲಿ ಮುಚ್ಚಿದ್ದ ಕಲಾ ಅಕಾಡೆಮಿಯ 900 ಆಸನಗಳ ದೊಡ್ಡ ಆಡಿಟೋರಿಯಂನಲ್ಲಿ ಮಾಸ್ಟರ್ ಕ್ಲಾಸ್ ವಿಭಾಗದ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪಣಜಿ ಐನಾಕ್ಸ್ ಕಾಂಪ್ಲೆಕ್ಸ್‌ನ ಐದು ತೆರೆಗಳು ಮತ್ತು ಸಮೀಪದ ಪೊರ್ವರಿಂನ ಐನಾಕ್ಸ್‌ ನಾಲ್ಕು ತೆರೆಗಳಲ್ಲದೆ ಗೋವಾದ ಬೀಚುಗಳಲ್ಲಿ ಸಂಜೆಯ ವೇಳೆ ಸಿನಿಮಾಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT