ಮಂಗಳವಾರ, ಏಪ್ರಿಲ್ 13, 2021
24 °C

ಮಗನ ಫೊಟೊದೊಂದಿಗೆ ಸಿನಿಮಾ ವೀಕ್ಷಣೆ: ಮನಸ್ಸು ಭಾರವಾಯಿತು ಎಂದು ಭಾವುಕರಾದ ಪುನೀತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಟ ಪುನೀತ್‌ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ಚಿತ್ರವು ಲಕ್ಷಾಂತರ ಕುಟುಂಬಗಳನ್ನು ಚಿತ್ರಮಂದಿರದೆಡೆಗೆ ಸೆಳೆದಿದೆ. ಅಪ್ಪು ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಇದೇ ಸಂದರ್ಭದಲ್ಲಿ ಪುನೀತ್‌ ಅಭಿಮಾನಿಯಾದ ತಮ್ಮ ಮೃತಪಟ್ಟ ಮಗನ ಫೊಟೊದ ಜೊತೆಗೆ ಪಾಲಕರು ಈ ಚಿತ್ರವನ್ನು ಮೈಸೂರಿನಲ್ಲಿ ನೋಡಿದ್ದಾರೆ.

ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ, ಮೃತಪಟ್ಟ ಮಗನಿಗೂ ಒಂದು ಟಿಕೆಟ್‌ ಖರೀದಿಸಿ, ಆ ಆಸನದಲ್ಲಿ ಮಗನ ಭಾವಷಿತ್ರವನ್ನು ಇಟ್ಟು ಚಿತ್ರವನ್ನು ಪಾಲಕರು ಕುಟುಂಬ ಸಮೇತವಾಗಿ ಆನಂದಿಸಿದ್ದಾರೆ. ಈ ಘಟನೆಯಿಂದ ಭಾವುಕರಾಗಿರುವ ಪುನೀತ್‌ ರಾಜ್‌ಕುಮಾರ್‌, ‘ಮೈಸೂರಿನ ಮುರಳಿಧರ್ ಹಾಗು ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪ್ರಾರ್ಥಿಸಿದ್ದಾರೆ.

ಹರಿಕೃಷ್ಣನ್‌, ಪುನೀತ್‌ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಯುವರತ್ನ ಚಿತ್ರವನ್ನು ನೋಡಬೇಕು ಎಂಬ ಆಸೆ ಹೊಂದಿದ್ದರು. ಆದರೆ ಚಿತ್ರ ಬಿಡುಗಡೆಗೂ ಮುನ್ನ ಅವರು ಸಾವನ್ನಪ್ಪಿದ್ದರು. ಹೀಗಿದ್ದರೂ, ಮಗನ ಆಸೆಯನ್ನು ಪಾಲಕರು ಈಡೇರಿಸಿದ್ದಾರೆ. ಸಂತೋಷ್‌ ಆನಂದರಾಮ್‌ ನಿರ್ದೇಶನದ ರಾಜಕುಮಾರ ಚಿತ್ರವು ಕೌಟುಂಬಿಕ ಸಿನಿಮಾ ವೀಕ್ಷಿಸುವ ಪ್ರೇಕ್ಷಕ ವರ್ಗವನ್ನು ಸೆಳೆದಿತ್ತು. ಇದೇ ಕಾಂಬಿನೇಷನ್‌ನಲ್ಲಿ ಯುವರತ್ನ ಇದೀಗ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ. 

ಚಿತ್ರ ಯಶಸ್ಸು ಕಂಡಿರುವ ಬೆನ್ನಲ್ಲೇ ಪುನೀತ್‌ ರಾಜ್‌ಕುಮಾರ್‌, ನಿರ್ದೇಶಕ ಸಂತೋಷ್‌ ಆನಂದರಾಮ್‌ ಅವರು ನಟ ಜಗ್ಗೇಶ್‌ ಅವರ ಜೊತೆಗೆ ಸೋಮವಾರ ಬೆಳಗ್ಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು