ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರುಲ್ ‘ಬಟರ್‌ಫ್ಲೈ’ ಚಂದನವನದಲ್ಲಿ ಹಾರುವುದು ಯಾವಾಗ?

Last Updated 22 ಏಪ್ರಿಲ್ 2020, 19:46 IST
ಅಕ್ಷರ ಗಾತ್ರ

ಹಿಂದಿಯ ‘ಕ್ವೀನ್‌’ ಚಿತ್ರದ ಕನ್ನಡ ಅವತಾರ ‘ಬಟರ್‌ಫ್ಲೈ’. ಕನ್ನಡದಲ್ಲಿ ಇದನ್ನು ರಮೇಶ್ ಅರವಿಂದ್ ಅವರು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಇದಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಕೂಡ ಸಿಕ್ಕಿದೆ. ಆದರೆ ಬಿಡುಗಡೆಯ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ.

ಕ್ವೀನ್‌ ಚಿತ್ರದಲ್ಲಿ ಕಂಗನಾ ರನೋಟ್ ನಿಭಾಯಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಅವರು ನಿಭಾಯಿಸಿದ್ದಾರೆ, ಗೋಕರ್ಣದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ‘ಈ ಚಿತ್ರವನ್ನು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಉದ್ದೇಶ. ಕನ್ನಡ ಮತ್ತು ಮಲಯಾಳ ಆವೃತ್ತಿಗಳಿಗೆ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣಪತ್ರ ಸಿಕ್ಕಿದೆ. ಆದರೆ ತೆಲುಗು ಮತ್ತು ತಮಿಳು ಆವೃತ್ತಿಗಳಿಗೆ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ’ ಎಂದು ಪಾರುಲ್ ಯಾದವ್ ತಿಳಿಸಿದರು.

ತೆಲುಗು ಮತ್ತು ತಮಿಳು ಆವೃತ್ತಿಗಳಿಗೆ ಪ್ರಮಾಣಪತ್ರ ಸಿಗದಿರುವುದಕ್ಕೆ ಕಾರಣ ಲಾಕ್‌ಡೌನ್‌. ಕನ್ನಡ ಮತ್ತು ಮಲಯಾಳ ಸಿನಿಮಾಗಳು ಸಿದ್ಧವಿದ್ದರೂ, ನಾಲ್ಕೂ ಭಾಷೆಗಳ ಸಿನಿಮಾಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಬೇಕು ಎಂಬ ಉದ್ದೇಶದಿಂದ ಇವುಗಳ ಬಿಡುಗಡೆಯನ್ನೂ ತಡೆಹಿಡಿಯಲಾಗಿದೆ.

ಲಾಕ್‌ಡೌನ್‌ ತೆರವಾಗಿ, ಸಿನಿಮಾ ಮಂದಿರಗಳ ಬಾಗಿಲು ತೆರೆದ ತಕ್ಷಣ ಬಟರ್‌ಫ್ಲೈ ಚಿತ್ರವನ್ನು ತೆರೆಗೆ ತರಬೇಕು ಎಂಬ ಉದ್ದೇಶ ಪಾರುಲ್ ಅವರದ್ದು. ಹಾಗೆ ಬಿಡುಗಡೆ ಮಾಡಿದರೆ, ಸಿನಿಮಾದ ಲಾಭಗಳಿಕೆ ಪ್ರಮಾಣ ಕೂಡ ಹೆಚ್ಚಬಹುದು ಎಂಬುದು ಪಾರುಲ್ ಅವರಲ್ಲಿನ ಲೆಕ್ಕಾಚಾರ. ಆದರೆ, ಈಗ ಲಾಕ್‌ಡೌನ್‌ ಕಾರಣದಿಂದಾಗಿ ಹಲವು ಸಿನಿಮಾಗಳು ಬಿಡುಗಡೆಗೆ ಕಾದು ಕುಳಿತಿವೆ. ಯಾವೆಲ್ಲ ಸಿನಿಮಾಗಳು ಬಿಡುಗಡೆಗೆ ಕಾದು ಕುಳಿತಿವೆ ಎಂಬುದನ್ನೂ ಪರಿಶೀಲಿಸಿಕೊಂಡು, ‘ಬಟರ್‌ಫ್ಲೈ’ ಹಾರುವಂತೆ ಮಾಡಬೇಕು ಎಂಬ ಇರಾದೆಯನ್ನು ಸಿನಿತಂಡ ಹೊಂದಿದೆ.

‘ಹಂತಹಂತವಾಗಿ ಲಾಕ್‌ಡೌನ್‌ ತೆರೆಯುವ ಪ್ರಕ್ರಿಯೆಯಲ್ಲಿ, ಸಿನಿಮಾ ಮಂದಿರಗಳ ಬಾಗಿಲುಗಳು ಕಟ್ಟಕಡೆಯದಾಗಿ ತೆರೆಯಬಹುದು. ಈಗ ಎದುರಾಗಿರುವ ಸ್ಥಿತಿಯು ಸಿನಿಮಾ ಉದ್ಯಮಕ್ಕೆ ಬಹಳ ದೊಡ್ಡ ಏಟು. ಸಣ್ಣ ಕಲಾವಿದರು, ತಂತ್ರಜ್ಞರು ಇಂತಹ ಏಟನ್ನು ತಾಳಿಕೊಳ್ಳುವುದು ಬಹಳ ಕಷ್ಟ’ ಎಂದು ಪಾರುಲ್ ಹೇಳುತ್ತಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಪಾರುಲ್‌ ಅವರು ಒಂದು ಸಿನಿಮಾ ಸ್ಕ್ರಿಪ್ಟ್‌ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಅವರಿಗೆ ಎರಡು ವರ್ಷಗಳ ಹಿಂದೆಯೇ ಆಲೋಚನೆ ಬಂದಿತ್ತಂತೆ. ಈ ಸ್ಕ್ರಿಪ್ಟ್‌ ಕುರಿತು ಒಂದಿಷ್ಟು ಸಂಶೋಧನೆ ಕೂಡ ಮಾಡುತ್ತಿರುವ ಪಾರುಲ್, ಸಿನಿಮಾ ಕುರಿತು ಎಲ್ಲವನ್ನೂ ಗುಟ್ಟಾಗಿಯೇ ಇರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT