ಶನಿವಾರ, ಜನವರಿ 18, 2020
19 °C

‘ರುದ್ರಿ‘ಯ ಅವತಾರದಲ್ಲಿ ಪಾವನಾ ಗೌಡ

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಮಹಿಳೆಯರು, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳಂತಹ ಪ್ರಕರಣಗಳು ಪ್ರಜ್ಞಾವಂತ ಸಮಾಜವನ್ನು ಘಾಸಿಗೊಳಿಸುತ್ತಿವೆ. ಇಂತಹ ಪ್ರಕರಣಗಳು ನಗರ, ಪಟ್ಟಣ ಪ್ರದೇಶಗಳಲ್ಲಿ ನಡೆದಾಗ ಬೇಗ ಬೆಳಕಿಗೆ ಬರುತ್ತವೆ.

ಸಂತ್ರಸ್ತರ ಪರ ಹೋರಾಟಕ್ಕೂ ಜನರು ಬೇಗ ದ್ವನಿಗೂಡಿಸುತ್ತಾರೆ. ಆದರೆ, ಅದೇ ಕುಗ್ರಾಮಗಳಲ್ಲಿ ಅಂತಹ ಘಟನೆಗಳು ನಡೆದಾಗ ಸಂತ್ರಸ್ತರ ಧ್ವನಿ ಅಡಗಿ ಹೋಗುವುದೇ ಹೆಚ್ಚು. ಅದರಲ್ಲೂ ಸಂತ್ರಸ್ಥರ ಪರ ನಿಂತು ನ್ಯಾಯ ದೊರಕಿಸಿಕೊಡುವವರ ಸಂಖ್ಯೆಯೂ ವಿರಳ. ಆಧುನಿಕ ತಂತ್ರಜ್ಞಾನ ಮತ್ತು ಸಂವಹನಗಳ ಸೌಲಭ್ಯದಿಂದ ವಂಚಿತವಾದ ಹಳ್ಳಿಯೊಂದರಲ್ಲಿ ದೌರ್ಜನ್ಯಕ್ಕೆ ತುತ್ತಾದ ಯುವತಿ ಒಂಟಿಯಾಗಿ ಪರಿಸ್ಥಿತಿ ಹೇಗೆ ಎದುರಿಸುತ್ತಾಳೆ ಎನ್ನುವ ಕಥೆಯನ್ನು ಸಮಾಜದ ಮುಂದೆ ಬಿಚ್ಚಿಡಲಿದೆಯಂತೆ ‘ರುದ್ರಿ’ ಸಿನಿಮಾ.

ನಾಯಕಿ ಪ್ರಧಾನ ಈ ಚಿತ್ರಕ್ಕೆ ಬಣ್ಣ ಹಚ್ಚಿರುವುದು ‘ಜಟ್ಟಾ’ ಮತ್ತು ‘ಗೊಂಬೆಗಳ ಲವ್‌’ ಖ್ಯಾತಿಯ ಬೆಡಗಿ ಪಾವನಿ ಗೌಡ. ನೈಜ ಘಟನೆ ಆಧರಿಸಿದ ಈ ಸಿನಿಮಾ ಹೊಸ ವರ್ಷದಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಸಿನಿಮಾ ನಟ– ನಟಿಯರಿಗೆ ಪ್ಯಾಕೇಜ್‌ ಟ್ರಿಪ್‌ ಆಯೋಜಿಸುತ್ತಿದ್ದ ‘ಟ್ರಾವೆಲ್‌ ಮೇಕರ್‌’ ಬಡಿಗೇರ್‌ ದೇವೇಂದ್ರಪ್ಪ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುವ ಮೂಲಕ ಮೊದಲ ಬಾರಿಗೆ ‘ಫಿಲ್ಮ್‌ ಮೇಕರ್‌’ ಆಗಿದ್ದಾರೆ. ಪಾವನಾ ನಾಯಕಿಯಾಗಿ ನಟಿಸಿರುವ ಮತ್ತೆರಡು ಸಿನಿಮಾಗಳಾದ ವಿನೋದ್‌ ಪ್ರಭಾಕರ್‌ ಅಭಿನಯದ ‘ಫೈಟರ್‌’ ಮತ್ತು ಪ್ರಭು ಮಂಡ್ಕೂರ್‌ ನಾಯಕನಾಗಿ ನಟಿಸಿರುವ ‘ಮೈಸೂರ್‌ ಡೈರೀಸ್‌’ ಹೊಸ ವರ್ಷದಲ್ಲಿ ತೆರೆಗೆ ಬರಲು ಸಜ್ಜಾಗಿವೆ.

‘ರುದ್ರಿ’ ಬಗ್ಗೆ ಅಪಾರ ನಿರೀಕ್ಷೆ ಹೊಂದಿರುವ ಪಾವನಾ, ತಮ್ಮ ಸಿನಿ ಬದುಕಿನ ಪಯಣದ ಕುರಿತು ‘ಸಿನಿಮಾ ಪುರವಣಿ’ಯೊಂದಿಗೆ ಹಲವು ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ.

ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆ ಆಧರಿಸಿ ಈ ಚಿತ್ರ ಮಾಡಲಾಗಿದೆ. ಘಟನೆ ನಡೆದಿರುವುದು ಹಳ್ಳಿಯಲ್ಲಿ. ಹಾಗಾಗಿ ಹಳ್ಳಿಯಲ್ಲೇ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾ ಸಮಾಜಕ್ಕೆ ಒಂದು ಗಟ್ಟಿ ಸಂದೇಶ ರವಾನಿಸಲಿದೆ. ಮಹಿಳಾ ಶೋಷಣೆ, ದೌರ್ಜನ್ಯದ ಬಗ್ಗೆ ಈಗ ಸಮಾಜ ಜಾಗೃತವಾಗುತ್ತಿದೆ. ಮಾಧ್ಯಮಗಳು ಜಾಗೃತಿ ಮೂಡಿಸುತ್ತಿವೆ. ಆದರೆ, ಹಳ್ಳಿಗಳಲ್ಲಿ ಶೋಷಣೆ, ದೌರ್ಜನ್ಯಗಳು ನಡೆದಾಗ ಎಷ್ಟೋ ಜನರಿಗೆ ಹೇಳಿಕೊಳ್ಳುವ, ಪ್ರತಿಭಟಿಸುವ ಧೈರ್ಯವೂ ಇರುವುದಿಲ್ಲ. ಸುತ್ತಲಿನ ಸಮಾಜ ಕೂಡ ಅವರ ಬೆಂಬಲಕ್ಕೆ ನಿಲ್ಲುವುದಿಲ್ಲ. ಒಬ್ಬಂಟಿ ಹೆಣ್ಣುಮಗಳ ಮೇಲೆ ದೌರ್ಜನ್ಯ ನಡೆದಾಗ, ಯಾರಿಂದಲೂ ಆಕೆಗೆ ನೆರವು ಸಿಗದಿದ್ದಾಗ ಆಕೆ ಏನು ಮಾಡಲಿದ್ದಾಳೆ ಎನ್ನುವುದನ್ನು ‘ರುದ್ರಿ’ ಮೂಲಕ ನೋಡಲಿದ್ದೀರಿ. ತುಂಬಾ ರಿಯಾಲಿಸ್ಟಿಕ್ಕಾಗಿ ಚಿತ್ರೀಕರಣ ಮಾಡಿರುವುದೇ ಈ ಚಿತ್ರದ ದೊಡ್ಡ ಸ್ಟ್ರೆಂಥ್‌ ಎಂದು ಪಾವನಾ ಮಾತು ವಿಸ್ತರಿಸಿದರು.

‘ರುದ್ರಿ’ ವಿಭಿನ್ನ ಮತ್ತು ಅತ್ಯಂತ ಶಕ್ತಿಶಾಲಿ ಪಾತ್ರ. ಇಡೀ ಕಥೆ ನಾಯಕಿಯ ಮೇಲೆ ನಿಂತಿದೆ. ವೃತ್ತಿ ಬದುಕಿನ ಬೆಳವಣಿಗೆಯಲ್ಲಿ ಹಾದಿಯಲ್ಲಿ ಒಬ್ಬ ನಟಿಗೆ ಇಂಥ ಪಾತ್ರ ಸಿಗುವುದು ತುಂಬಾ ಅಪರೂಪ. ಈ ಪಾತ್ರ ನನಗೆ ಸಿಕ್ಕಿದ್ದು ನನ್ನ ಪುಣ್ಯ. ಮರ್ಡರ್‌ ಮಿಸ್ಟ್ರಿ, ರಿವೇಂಜ್‌, ಸಸ್ಪೆನ್ಸ್‌, ಲವ್‌ ಹೀಗೆ ಎಲ್ಲ ರೀತಿಯ ಅಂಶಗಳೂ ಇವೆ. ಪಾತ್ರಕ್ಕೆ ಬಣ್ಣ ಹಚ್ಚುವ ಮೊದಲು ಸಾಕಷ್ಟು ಸಿದ್ಧತೆ ಬೇಕಾಯಿತು. ನನಗೆ ಅಪರಿಚಿತವಾಗಿದ್ದ ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಭಾಷೆ ಕಲಿಯಬೇಕಾಯಿತು, ಅಲ್ಲದೇ ಅಲ್ಲಿನ ನೇಟಿವಿಟಿಗೆ ಒಗ್ಗಿಕೊಳ್ಳಬೇಕಾಯಿತು’ ಎಂದರು. 

ಸಿನಿಮಾ ರಂಗಕ್ಕೆ ಕಾಲಿಟ್ಟ ದಿನಗಳನ್ನು ನೆನಪಿಸಿಕೊಳ್ಳುವ ಪಾವನಾ, ‘ಜಟ್ಟಾ’, ‘ಮೈತ್ರಿ’ ಸಿನಿಮಾಗಳನ್ನು ನಿರ್ದೇಶಿಸಿದ ಬಿ.ಎಂ. ಗಿರಿರಾಜ್‌ ಅವರು ನನ್ನನ್ನು ಸಿನಿರಂಗಕ್ಕೆ ಪರಿಚಯಿಸಿದರು. ನಾನು ಮೊದಲು ನಟಿಸಿದ್ದು ‘ಅದ್ವೈತ’ ಸಿನಿಮಾದಲ್ಲಿ. ಆದರೆ, ತೆರೆಕಂಡಿದ್ದು ‘ಗೊಂಬೆಗಳ ಲವ್‌’ ಸಿನಿಮಾ. ಈ ರಂಗಕ್ಕೆ ಬಂದು ಆರು ವರ್ಷಗಳು ತುಂಬಿವೆ. ಇಲ್ಲಿ ಉಳಿದಿದ್ದರೆ ಅದು ನನಗೆ ಸಿಕ್ಕಂತಹ ಪಾತ್ರಗಳಿಂದಾಗಿಯೇ. ಇಲ್ಲಿ ಏಳು–ಬೀಳುಗಳನ್ನು ಕಂಡಿದ್ದೇನೆ. ವೈಫಲ್ಯವನ್ನೂ ತುಂಬಾ ಹತ್ತಿರದಿಂದ ಅನುಭವಿಸಿದ್ದೇನೆ. ಆದರೆ, ಬದುಕಿನಲ್ಲಿ ತುಂಬಾ ತಾಳ್ಮೆ ಇರಬೇಕೆನ್ನುವುದನ್ನು ಜೀವಾನುಭವ ಕಲಿಸಿಕೊಟ್ಟಿದೆ. ‘ಆಟಗಾರ’ ಮತ್ತು ‘ಜಾಕ್ಸನ್‌’ ಸಿನಿಮಾಗಳ ನಂತರ ನಟನೆಯನ್ನು ವೃತ್ತಿಪರವಾಗಿ ತೆಗೆದುಕೊಂಡಿದ್ದೇನೆ. ಎರಡೂವರೆ ವರ್ಷದಿಂದೀಚೆಗೆ ಮನಸಿಗೆ ಖುಷಿಯಾಗುವಂತಹ ಅವಕಾಶಗಳು ಸಿಗುತ್ತಿವೆ’ ಎನ್ನಲು ಅವರು ಮರೆಯಲಿಲ್ಲ.

ಇವರಿಗೆ ನಟಿಯಾಗುವ ಕನಸು ಚಿಗುರಿದ್ದು ಬಾಲ್ಯದಲ್ಲೇ. ಮಗಳು ನಟಿಯಾಗುವುದು ಆರಂಭದಲ್ಲಿ ಹೆತ್ತವರಿಗೂ ಇಷ್ಟ ಇರಲಿಲ್ಲ. ‘ನಾನು ನಟಿಯಾಗಬೇಕೆಂಬ ಆಸೆ ಚಿಕ್ಕ ವಯಸಿನಿಂದಲೂ ಇತ್ತು. ಇಂದು ಆ ದಾರಿಯಲ್ಲಿ ಸಾಗುತ್ತಿದ್ದೇನೆ. ನಾನು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಮತ್ತು ನಾನು ಸಾಗುತ್ತಿರುವ ಹಾದಿಯ ಬಗ್ಗೆ ಈಗ ಹೆತ್ತವರಿಗೂ ಖುಷಿ ಇದೆ’ ಎಂದರು. 

ಪಾತ್ರಗಳ ಆಯ್ಕೆಯಲ್ಲಿ ತುಂಬಾ ಜಾಣ್ಮೆ ವಹಿಸುವ ಪಾವನಾ, ‘ಪಾತ್ರಕ್ಕೆ ಜೀವ ಇರಬೇಕು ಆಗ ಮಾತ್ರ ಪಾತ್ರವಾಗಿ ನಾವು ಜೀವಿಸಲು ಸಾಧ್ಯ. ನನ್ನ ಅದೃಷ್ಟವೆಂಬಂತೆ ನನಗೆ ಆರಂಭದಿಂದಲೂ ವಿಭಿನ್ನ ಮತ್ತು ಪ್ರಯೋಗಾತ್ಮಕ ಪಾತ್ರಗಳೇ ಸಿಕ್ಕಿವೆ. ಕಥೆಯೇ ಸಿನಿಮಾದ ನಾಯಕನೆಂದು ನಾನು ಭಾವಿಸಿವೆ. ನನಗೆ ಕಥೆ ಕೇಳುವಾಗ ಪಾತ್ರ ಥ್ರಿಲ್‌ ಮತ್ತು ಖುಷಿ ಕೊಡುವಂತೆ ಇರಬೇಕು. ಕಂಟೆಂಟ್‌ ಓರಿಯಂಟೆಡ್‌ ಸಿನಿಮಾಗಳೆಂದರೆ ನನಗೆ ಇಷ್ಟ. ತುಂಬಾ ಸೆನ್ಸಿಬಲ್‌ ನಿರ್ದೇಶಕರೊಟ್ಟಿಗೆ ಸಿನಿಮಾ ಮಾಡಲು ಸದಾ ಸಿದ್ಧ’ ಎಂದರು.

ಪಾವನಾ ಸದ್ಯ ಎರಡು ಹೊಸ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಂದ್ರಕೀರ್ತಿ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ‘ತೂತುಮಡಕೆ’ ಮತ್ತು  ಬಿಗ್‌ಬಾಸ್‌ 6ನೇ ಆವೃತ್ತಿಯ ವಿಜೇತ ಶಶಿ ನಾಯಕನಾಗಿ ನಟಿಸುತ್ತಿರುವ ಮತ್ತು ಅನೂಪ್‌ ಆ್ಯಂಟನಿ ನಿರ್ದೇಶಿಸುತ್ತಿರುವ ‘ಮೆಹಬೂಬಾ’ದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು